ಜಲಾಶಯ ಭರ್ತಿ ಹಿನ್ನೆಲೆ ಜೂನ್, ಜುಲೈನಲ್ಲಿ ಕೆ.ಆರ್.ಎಸ್.  ಪ್ರವೇಶದಿಂದ 1,00,52,000 ರೂ. ಆದಾಯ
ಮೈಸೂರು

ಜಲಾಶಯ ಭರ್ತಿ ಹಿನ್ನೆಲೆ ಜೂನ್, ಜುಲೈನಲ್ಲಿ ಕೆ.ಆರ್.ಎಸ್.  ಪ್ರವೇಶದಿಂದ 1,00,52,000 ರೂ. ಆದಾಯ

August 2, 2018

ಮೈಸೂರು: ಕಾವೇರಿ ಕಣಿವೆಯಲ್ಲಿ ಅಧಿಕ ಮಳೆಯಾದ ಪರಿಣಾಮ ಕೃಷ್ಣರಾಜಸಾಗರ ಅಣೆಕಟ್ಟೆ ಅತೀ ಬೇಗ ತುಂಬಿದ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆಯೂ ಅಧಿಕವಾಗಿದೆ.

ಕಳೆದ ನಾಲ್ಕು ವರ್ಷಗಳ ನಂತರ ಇದೇ ಮೊದಲ ಬಾರಿ ಕೆಆರ್‍ಎಸ್ ಜಲಾಶಯ ಮೈದುಂಬಿದ ಹಿನ್ನೆಲೆಯಲ್ಲಿ ನೈಸರ್ಗಿಕ ಸೌಂದರ್ಯ ನೋಡಲು ದೇಶ-ವಿದೇಶಗಳಿಂದ ಪ್ರವಾಸಿಗರ ದಂಡೇ ಧಾವಿಸಿದ್ದು, ಅಣೆಕಟ್ಟೆಯಲ್ಲಿ ನೀರು ಗರಿಷ್ಟ ಮಟ್ಟ ತಲುಪಿದ ನಂತರ ಡ್ಯಾಂ ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಬಿಟ್ಟು ನಂತರವಂತೂ ಬೋರ್ಗರೆಯುವ ಜಲಧಾರೆಯನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಕೆಆರ್‍ಎಸ್‍ನತ್ತ ಮುಗಿಬಿದ್ದಿದ್ದರು.

ಕ್ರಸ್ಟ್ ಗೇಟ್‍ಗಳ ಮೂಲಕ ಹೊರಬಿಟ್ಟಿದ್ದ ನೀರಿಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಬಣ್ಣಬಣ್ಣದ ವಿದ್ಯುದೀಪಾಲಂಕಾರ ಮಾಡಿದ ನಂತರವಂತೂ ಜನರು ತಂಡೋಪ ತಂಡವಾಗಿ ಧಾವಿಸುತ್ತಿದ್ದುದು ಸರಿಯಷ್ಟೇ.

2018ರ ಜೂನ್ ತಿಂಗಳಲ್ಲಿ 53,76,000 ರೂ. ಪ್ರವೇಶ ದರದಿಂದ ಆದಾಯ ಬಂದರೆ, ಜುಲೈ 31ರವರೆಗೆ 46,76,000 ರೂ. ಸಂಗ್ರಹವಾಗಿದೆ. ಈ ಎರಡೇ ತಿಂಗಳಲ್ಲಿ ಕೆಆರ್‍ಎಸ್ ಪ್ರವೇಶದಿಂದ ಒಟ್ಟು 1,00,52,000 ರೂ. ಆದಾಯ ಕಾವೇರಿ ನೀರಾವರಿ ನಿಗಮಕ್ಕೆ ಬಂದಂತಾಗಿದೆ.

2017ರ ಜೂನ್ ತಿಂಗಳಲ್ಲಿ 44,81,000 ರೂ. ಮತ್ತು ಜುಲೈ ಮಾಹೆಯಲ್ಲಿ 36,05,000 ರೂ. ಪ್ರವಾಸಿಗರ ಪ್ರವೇಶ ದರದಿಂದ ಸಂಗ್ರಹವಾಗಿತ್ತು. ಕಳೆದ ವರ್ಷ ಕಡಿಮೆ ಮಳೆಯಾದ ಕಾರಣ ಜಲಾಶಯ ತುಂಬಿರಲಿಲ್ಲ. ಆದರೆ ಈ ಬಾರಿ ಕಾವೇರಿ ಮೈದುಂಬಿರುವುದರಿಂದ ಈ ಎರಡು ತಿಂಗಳಲ್ಲಿ ಕಳೆದ ಬಾರಿಗಿಂತ ಈಗ 19,66,000 ರೂ. ಹೆಚ್ಚು ಆದಾಯ ಬಂದಂತಾಗಿದೆ.

ಪ್ರವಾಹದಿಂದಾಗಿ ಕ್ರಸ್ಟ್ ಗೇಟ್‍ಗಳ ಮೂಲಕ ಅಧಿಕ ನೀರು ಹೊರಬಿಟ್ಟಿದ್ದರಿಂದ ಬೃಂದಾವನದ ಉತ್ತರ ಭಾಗಕ್ಕೆ ಪ್ರವೇಶ ನಿಷೇಧಿಸಿದ್ದರಿಂದಾಗಿ ಜುಲೈ ತಿಂಗಳಲ್ಲಿ ಆದಾಯದ ಪ್ರಮಾಣ ಕಡಿಮೆಯಾಯಿತು ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಈಗ ಕೊಡಗು ಭಾಗದಲ್ಲಿ ಮಳೆ ಕಡಿಮೆಯಾಗಿರುವುದರಿಂದ ಜಲಾಶಯಕ್ಕೆ 7,000 ಕ್ಯೂಸೆಕ್ ನೀರು ಮಾತ್ರ ಹರಿದು ಬರುತ್ತಿದ್ದು, 5,000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಅಣೆಕಟ್ಟೆಯಲ್ಲಿ ಗರಿಷ್ಟ ಮಟ್ಟದ ನೀರು ಇರುವಂತೆ ನಿರ್ವಹಣೆ ಮಾಡಲಾಗುತ್ತಿದೆ ಎಂದೂ ಮೂಲಗಳು ತಿಳಿಸಿವೆ.

Translate »