ಮೈಸೂರು: `ಉಯ್ಯೋ.. ಉಯ್ಯೋ ಮಳೆರಾಯ.. ಹೂವಿನ ತೋಟಕ್ಕೆ ನೀರಿಲ್ಲ…’ ಎಂಬುದು ನಮ್ಮ ಸಂಸ್ಕøತಿ. ಆದರೆ, ನಮ್ಮ ಮಕ್ಕಳಿಗೆ `ರೈನ್ ರೈನ್ ಗೋ ಅವೆ…’ ಎಂಬ ಪಾಶ್ಚಾತ್ಯ ಸಂಸ್ಕೃತಿಯನ್ನು ಕಲಿಸಲಾಗುತ್ತಿರುವ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯ ಕ್ಷರೂ ಆದ ಹಿರಿಯ ಸಾಹಿತಿ ಡಾ. ಸಿದ್ದಲಿಂಗಯ್ಯ ಬೇಸರ ವ್ಯಕ್ತ ಪಡಿಸಿದರು.
ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ 56ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಚಿಕ್ಕ ಮಕ್ಕಳಿಗೆ ಶಾಲೆಗಳಲ್ಲಿ ರೈನ್ ರೈನ್ ಗೋ ಅವೆ.. ಎಂದು ಕಲಿಸಲಾಗುತ್ತಿದೆ. ಆದರೆ ನಮ್ಮದು ಬರಗಾಲ ಪ್ರದೇಶ. ನಮ್ಮ ಕಲಬುರ್ಗಿ, ಬೀದರ್ ಇನ್ನಿತರ ಪ್ರದೇಶಗಳಲ್ಲಿ ಭೀಕರ ಬರಗಾಲ. ಈ ಜಿಲ್ಲೆಗಳ ಮಕ್ಕಳು ಈ ಪದ್ಯ ಹೇಳುವುದರಲ್ಲಿ ಅರ್ಥವಿದೆಯೇ? ನಮ್ಮ ತಂದೆ, ಪೋಷಕರು ಮಳೆಗಾಗಿ ಆಕಾಶ ನೋಡುತ್ತಿದ್ದಾರೆ. ಆದರೆ ಮಕ್ಕಳ ಬಾಯಲ್ಲಿ ಇಂಗ್ಲಿಷ್‍ನಲ್ಲಿ ಮಳೆ ಬರಬೇಡ ಹೋಗು ಎಂದು ಕಲಿಸಲಾಗುತ್ತಿದೆ. ಮಕ್ಕಳಿಗೆ ಇಂಗ್ಲಿಷ್ ಬೋಧಿಸಲಿ. ಆದರೆ ಭಾರತೀಯ ಸಂಸ್ಕೃತಿಯನ್ನು ಕಲಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು. ಶಿಕ್ಷಣ ಬಡವರ ಕೈಗೆಟುಕದ ದೂರದ ಸಂಗತಿ. ಶಿಕ್ಷಣ ಇಂದು ವ್ಯಾಪಾರಿ ಸಂಸ್ಕøತಿಯಾಗಿದೆ, ಉದ್ಯಮ ವಾಗಿದೆ. ಬಡ ಹಾಗೂ ಶ್ರೀಮಂತರ ಮಕ್ಕಳ ನಡುವೆ ಅಮಾನವೀಯ ವರ್ಗ ವ್ಯವಸ್ಥೆ ಇದೆ. ಅಸಮಾನ ಶಿಕ್ಷಣದಿಂದ ದೇಶದ ವ್ಯವಸ್ಥೆ ಮಂಕಾಗಿದೆ. ಈ ವ್ಯವಸ್ಥೆ ಅಳಿಯುವ ವರೆಗೂ ದೇಶಕ್ಕೆ ಭವಿಷ್ಯವಿಲ್ಲ.
ಶಿಕ್ಷಣದಲ್ಲಿ ಸಮಾನ ವ್ಯವಸ್ಥೆ ಬರಬೇಕು ಎಂದು ಹೇಳಿದರು. ಪರಕೀಯ ಸಂಸ್ಕೃತಿಯಿಂದಾಗಿ ತ್ರಿಶಂಕು ಸ್ಥಿತಿಯಲ್ಲಿ ನಾವು ಭಾವೀ ಜನಾಂಗವನ್ನು ಬೆಳೆಸುತ್ತಿದ್ದೇವೆ ಎಂದು ವಿಷಾದಿಸಿದರು. ಮಕ್ಕಳನ್ನು ಉತ್ತಮವಾಗಿ ತಯಾರು ಮಾಡುವ ಹೊಣೆ ಶಿಕ್ಷರದ್ದಾಗಿದ್ದು, ಬೆಳೆಯುವಾಗಲೇ ಒಂದು ನಿರ್ದಿಷ್ಟ ಸಂಸ್ಕೃತಿಯಲ್ಲಿ ಬೆಳೆಸದಿದ್ದರೆ, ಪರಸ್ಪರ ತದ್ವಿರುದ್ಧ ಸಂಸ್ಕೃತಿಗಳಾಗುತ್ತವೆ ಎಂದರು.
ಗುರುಗಳು ಶಿಷ್ಯನನ್ನು ಮಿತ್ರರಂತೆ ಕಾಣುವುದು ನ್ಯಾಯ. ಆದರೆ, ಶಿಷ್ಯನೇ ಗುರುವಿನ ಹೆಗಲ ಮೇಲೆ ಕೈ ಹಾಕಿದರೆ ಶಿಕ್ಷಣದ ಅಧೋಗತಿಗೆ ಕಾರಣವಾಗುತ್ತದೆ. ಈ ಬಗ್ಗೆ ಶಿಕ್ಷಕರು ಅರಿತುಕೊಳ್ಳಬೇಕು. ಯುವಕರಿಗೆ ಅಧ್ಯಾಪಕರು ಮಾದರಿಯಾಗಬೇಕು. ಪ್ರತಿಯೊಂದು ವಿಷಯದಲ್ಲೂ ಎಚ್ಚರಿಕೆ ವಹಿಸಬೇಕು. ತುಂಬಾ ಜವಾಬ್ದಾರಿಯಿಂದ ಇರಬೇಕಾಗುತ್ತದೆ ಎಂದು ಸಲಹೆ ನೀಡಿದರು.