ಪ್ರಸ್ತುತ ಗೊಂದಲ, ಅವ್ಯವಸ್ಥೆಯ ಶಿಕ್ಷಣದ ನಡುವೆ ಮಕ್ಕಳ ಭವಿಷ್ಯ ರೂಪಿಸುವುದಾದರೂ ಹೇಗೆ?
ಮೈಸೂರು

ಪ್ರಸ್ತುತ ಗೊಂದಲ, ಅವ್ಯವಸ್ಥೆಯ ಶಿಕ್ಷಣದ ನಡುವೆ ಮಕ್ಕಳ ಭವಿಷ್ಯ ರೂಪಿಸುವುದಾದರೂ ಹೇಗೆ?

August 2, 2018

ಮೈಸೂರು: ಗೊಂದಲ ಮತ್ತು ಅವ್ಯವಸ್ಥೆಯ ಗೂಡಾ ಗಿರುವ ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆಯ ನಡುವೆ ಭವ್ಯ ಭಾರತದ ಭವಿಷ್ಯದ ಮಕ್ಕಳನ್ನು ಉತ್ತಮ ಶಿಕ್ಷಣವಂತರಾಗಿ ಬೆಳೆಸುವುದಾದರು ಹೇಗೆ ಎಂಬುದು ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಬೆಂಗಳೂರಿನ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸಡ್ ರೀಸರ್ಚ್‍ನ ಗೌರವ ಅಧ್ಯಕ್ಷ, ಭಾರತ ರತ್ನ ಪ್ರೊ.ಸಿ.ಎನ್.ಆರ್. ರಾವ್ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದರು.

ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ 56ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಸಂಸ್ಥೆಯ ಆವರಣದಲ್ಲಿ ಅವರು ಸರ್ದಾರ್ ಫಣಿಕ್ಕರ್ ಸ್ಮಾರಕ ಉಪನ್ಯಾಸ ನೀಡಿದರು. ತೀರಾ ಕೆಳಮಟ್ಟದಲ್ಲಿರುವ ದೇಶದ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸುವ ಹಾಗೂ ಸುಧಾರಣೆ ತರುವ ಬಗ್ಗೆ ಯಾರಾದರೂ ಸಮರ್ಥ ಆಡಳಿತಗಾರರು, ಆಡಳಿತ ಚುಕ್ಕಾಣಿ ಹಿಡಿದಿರುವ ನೇತಾರರು ಚಿಂತನೆ ನಡೆಸಿ ಕಾರ್ಯೋನ್ಮುಖರಾದರೆ ಅದೇ ಅವರು ದೇಶಕ್ಕೆ ನೀಡುವ ಬಹು ದೊಡ್ಡ ಕೊಡುಗೆ ಎಂದು ಆಭಿಪ್ರಾಯಪಟ್ಟರು.

ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗುತ್ತಿರುವ ಮೂಲಭೂತ ಸೌಕರ್ಯಗಳನ್ನು ಇನ್ನಷ್ಟು ಹೆಚ್ಚು ಒದಗಿಸಬೇಕು. ವಿದೇಶದಲ್ಲಿರುವ ರೀತಿಯಲ್ಲಿ ಎಲ್ಲಿಯೂ ವಿದ್ಯಾರ್ಥಿಗಳಲ್ಲಿನ ಕ್ರಿಯಾಶೀಲತೆಯನ್ನು ಬೆಳಕಿಗೆ ತಂದು ಪ್ರೋತ್ಸಾಹಿಸುವ ವಾತಾವರಣ ನಮ್ಮಲ್ಲಿ ಇಲ್ಲ ಎಂದು ವಿಷಾದಿಸಿದರು. ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ದಿಪಡಿಸುತ್ತೇವೆ ಎಂದು ಕೇವಲ ಬಾಯಿಮಾತಿನಲ್ಲಿ ಹೇಳುವ ಬದಲು, ಆಡಳಿತದ ಹೊಣೆ ಹೊತ್ತವರು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ದೇಶದ ಜಿಡಿಪಿಯಲ್ಲಿ ಕೇವಲ ಶೇ.3ರಿಂದ 3.5ರಷ್ಟು ಮಾತ್ರ ಅನುದಾನ ನೀಡುತ್ತಿದ್ದಾರೆ. ಇದರಿಂದ ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆ ಸಾಧ್ಯವಿಲ್ಲ. ಕನಿಷ್ಟ ಪಕ್ಷ ಜಿಡಿಪಿಯ ಶೇ.6ರಷ್ಟನ್ನು ಶಿಕ್ಷಣ ವ್ಯವಸ್ಥೆಗೆಂದು ಮೀಸಲಿಟ್ಟರೆ ಶೈಕ್ಷಣಿಕ ಕ್ಷೇತ್ರದ ಬಲವರ್ಧನೆ ಸಾಧ್ಯವಾಗಬಹುದು ಎಂದು ಅಭಿಪ್ರಾಯಪಟ್ಟರು. ಶಿಕ್ಷಣ ಕ್ಷೇತ್ರಕ್ಕೆ ನೀಡುವ ಅನುದಾನವನ್ನು ಖರ್ಚಿನ ಬಾಬ್ತು ಎಂದು ಹೇಳುವ ಬದಲು ಅದು ದೇಶದ ಪ್ರಗತಿಗೆ, ಅಭಿವೃದ್ಧಿಗೆ ವಿನಿಯೋಗಿಸುವ ಬಂಡವಾಳ ಎಂದು ಹೇಳುವಂತಾಗಬೇಕು ಎಂದು ಹೇಳಿದರು.

ಶಿಕ್ಷಕ ವೃತ್ತಿಯಲ್ಲಿ ಇಂದು ಬಹುಪಾಲು ಅಂದರೆ ಶೆ.90ರಷ್ಟು ಶಿಕ್ಷಕರಿಗೆ ತಾವು ಬೋಧಿಸುವ ವಿಷಯದ ಬಗ್ಗೆ ಆಳವಾದ ಜ್ಞಾನವೇ ಇರುವುದಿಲ್ಲ. ಅವರು ವಿಷಯ ವನ್ನು ಸಂಪೂರ್ಣ ತಿಳಿದುಕೊಳ್ಳುವ ನಿಟ್ಟಿನಲ್ಲಿ ಅಧ್ಯಯನವನ್ನೂ ಮಾಡುವುದಿಲ್ಲ. ಇಂಥ ಸಾಮಥ್ರ್ಯ ಹೊಂದಿರುವ ಶಿಕ್ಷಕರು ಮಕ್ಕಳಿಗೆ ಎಂತಹ ಕ್ರಿಯಾಶೀಲತೆ ತರಬಲ್ಲರು ಎಂದು ಅವರು ಅಸಮಾಧಾನದಿಂದ ನುಡಿದರು. ಕೇವಲ ಪಠ್ಯಪುಸ್ತಕಗಳಲ್ಲಿರುವ ವಿಷಯಗಳನ್ನಷ್ಟೇ ಬೋಧಿಸಿ, ಮಕ್ಕಳಿಗೆ ಪರೀಕ್ಷೆಗೆ ತಯಾರು ಮಾಡುವ ಬದಲು, ಶಿಕ್ಷಕರು ಮಕ್ಕಳಲ್ಲಿ ಕುತೂಹಲ, ಕ್ರಿಯಾಶೀಲತೆ ಮೂಡಿಸುವಂತಹ ವಿಷಯಗಳ ಬಗ್ಗೆ ತಿಳಿ ಹೇಳಬೇಕು. ಸಮರ್ಥರನ್ನಾಗಿ ಸಂಪ್ರದಾಯವನ್ನು ರೂಢಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಸಮಾರಂಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ ಆದ ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ, ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪ್ರೊ.ವೈ.ಶ್ರೀಕಾಂತ್, ಡೀನ್‍ಗಳಾದ ಪ್ರೊ.ವೆಂಕಟೇಶ ಮೂರ್ತಿ, ಬಿ.ರಮಾ ಉಪಸ್ಥಿತರಿದ್ದರು.

Translate »