ಖಾಸಗಿ ಸಹಭಾಗಿತ್ವದಲ್ಲಿ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಪ್ರಾರಂಭ
ಮೈಸೂರು

ಖಾಸಗಿ ಸಹಭಾಗಿತ್ವದಲ್ಲಿ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಪ್ರಾರಂಭ

August 2, 2018

ಮೈಸೂರು: ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಖಾಸಗಿ ಸಹಭಾಗಿತ್ವ ದಲ್ಲಿ ಪ್ರಾರಂಭಿಸಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೀರ್ಮಾನಿಸಿದ್ದಾರೆ.

ಬೆಂಗಳೂರಿನ ಗೃಹ ಕಚೇರಿ ಕೃಷ್ಣದಲ್ಲಿ ಚುಂಚನ ಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಸಂಬಂಧಿಸಿದಂತೆ ಈ ಭಾಗದ ಹಾಗೂ ಸಂಬಂಧಿಸಿದ ಸಚಿವರು, ಶಾಸಕರು ಹಾಗೂ ಉನ್ನತ ಅಧಿಕಾರಿಗಳ ಸಭೆ ನಡೆಸಿದ ಅವರು, ಕಾರ್ಖಾನೆ ಪ್ರಾರಂಭಿಸುವ ಪ್ರಕ್ರಿಯೆಗೆ ಮುನ್ನವೇ ನೌಕರರ ಬಾಕಿ ವೇತನ ಪಾವತಿಸಲು ಆದೇಶಿಸಿದರು.

ಕಾರ್ಮಿಕರ ವೇತನ ಬಾಕಿ 14.70 ಕೋಟಿ ರೂ.ಗಳಲ್ಲಿ ಈಗಾಗಲೇ ಅರ್ಧದಷ್ಟು ವೇತನ ಪಾವತಿಸಲು 7.50 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ನೌಕರರ ಉಳಿದ ಬಾಕಿ ವೇತನ ಪಾವತಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶ್ರೀರಾಮ ಸಕ್ಕರೆ ಕಾರ್ಖಾನೆ ಪುನಾರಂಭಿಸುವ ನಿಟ್ಟಿನಲ್ಲಿ ಖಾಸಗಿಯವರಿಗೆ ಗುತ್ತಿಗೆ ನೀಡಲು ಸಭೆಯಲ್ಲಿದ್ದ ಸಚಿವರು, ಶಾಸಕರು ಸಮ್ಮತಿಸಿದರು. ಸಭೆಯಲ್ಲಿ ಕಾರ್ಮಿಕರ ವೇತನ ಬಾಕಿ, ಯಂತ್ರಗಳ ನವೀಕರಣ, ಕಾರ್ಖಾನೆ ಗುತ್ತಿಗೆ ನೀಡುವ ಕುರಿತು ಸಾಕಷ್ಟು ಚರ್ಚೆ ನಡೆಯಿತು.

ಸಭೆಯಲ್ಲಿ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾರಾ ಮಹೇಶ್, ಸಹಕಾರ ಸಚಿವ ಬಂಡೆಪ್ಪಕಾಶಂಪ್ಪೂರ್, ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್, ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ಹುಣಸೂರು ಶಾಸಕ ಅಡಗೂರು ಹೆಚ್.ವಿಶ್ವನಾಥ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು. ಬೀದರ್ ಹಾಗೂ ಪಾಂಡವ ಪುರ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಸಂಬಂಧಿಸಿದಂತೆ ತಜ್ಞರಿಂದ ಕಾರ್ಯಸಾಧ್ಯತಾ ವರದಿ ಪಡೆದು ಸಲ್ಲಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

Translate »