ಅಕ್ರಮ ಬ್ಯೂಟಿ ಪಾರ್ಲರ್‍ಗಳ ಮುಚ್ಚಿಸಲು ಅಧಿಕೃತ ಬ್ಯೂಟಿ ಪಾರ್ಲರ್ ಮಾಲೀಕರ ಆಗ್ರಹ
ಮೈಸೂರು

ಅಕ್ರಮ ಬ್ಯೂಟಿ ಪಾರ್ಲರ್‍ಗಳ ಮುಚ್ಚಿಸಲು ಅಧಿಕೃತ ಬ್ಯೂಟಿ ಪಾರ್ಲರ್ ಮಾಲೀಕರ ಆಗ್ರಹ

August 2, 2018

ಮೈಸೂರು:ಮೈಸೂರು ನಗರದಲ್ಲಿ ನಾಯಿಕೊಡೆ ಗಳಂತೆ ತಲೆ ಎತ್ತಿರುವ ಅನಧಿಕೃತ ಬ್ಯೂಟಿ ಪಾರ್ಲರ್‌ಗಳ ಮುಚ್ಚಿಸುವಂತೆ ಮೈಸೂರು ಜಿಲ್ಲಾ ಬ್ಯೂಟಿಷಿಯನ್ ಮತ್ತು ಬ್ಯೂಟಿ ಪಾರ್ಲರ್ ಮಾಲೀಕರ ಸಂಘದ ಕಾರ್ಯ ಕರ್ತರು ಆಗ್ರಹಿಸಿದ್ದು, ಅನುಮತಿ ಪಡೆದು ನಡೆಯುತ್ತಿರುವ ಬ್ಯೂಟಿ ಪಾರ್ಲರ್‌ಗಳಲ್ಲಿ ಯಾವುದೇ ಅನೈತಿಕ ಚಟುವಟಿಕೆ ನಡೆಯು ತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಜಂಟಿ ಸುದ್ದಿ ಗೋಷ್ಠಿಯಲ್ಲಿ ಮೈಸೂರು ಜಿಲ್ಲಾ ಬ್ಯೂಟಿಷಿಯನ್ ಮತ್ತು ಬ್ಯೂಟಿ ಪಾರ್ಲರ್ ಮಾಲೀಕರ ಸಂಘದ ಅಧ್ಯಕ್ಷೆ ಸುಜಾತ ಸಿಂಗ್, ಮಾಜಿ ಅಧ್ಯಕ್ಷೆ ಜರೀನಾ ಇಮ್ತಿಯಾಜ್, ವೇದ ರೈ, ಉಪಾಧ್ಯಕ್ಷೆ ಉಮಾ ಜಾದವ್ ಇನ್ನಿತರರು ಮಾತನಾಡಿ, ಕಳೆದ ವಾರ ಮೈಸೂರಿನ ಹೂಟಗಳ್ಳಿ ಹಾಗೂ ವಿಜಯನಗರದಲ್ಲಿ ಸ್ಪಾ ಮತ್ತು ಬ್ಯೂಟಿ ಪಾರ್ಲರ್ ಮೇಲೆ ಪೊಲೀಸರು ದಾಳಿ ನಡೆಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದನ್ನು ಬೆಳಕಿಗೆ ತಂದು, ಪಾರ್ಲರ್ ಮಾಲೀಕಳಾದ ಹೇಮಾವತಿ ಅಲಿಯಾಸ್ ಸಂಜನಾಳನ್ನು ಬಂಧಿಸಿದ್ದರು. ಅಲ್ಲಿಂದ ವಿವಿಧ ಪಾರ್ಲರ್‍ಗಳ ಮೇಲೆ ಪೊಲೀಸರು ದಾಳಿ ನಡೆಸಿ, ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದವರನ್ನು ಬಂಧಿಸಿದ್ದರು. ಈ ಘಟನೆಗಳಿಂದ ಪಾರ್ಲರ್‌ಗಳನ್ನು ಅನುಮಾನದಿಂದ ನೋಡುವ ಸ್ಥಿತಿ ಬಂದಿದೆ. ಕಳೆದ 20 ವರ್ಷಗಳಿಂದ ಮೈಸೂರು ಜಿಲ್ಲಾ ಬ್ಯೂಟಿ ಷಿಯನ್ ಮತ್ತು ಬ್ಯೂಟಿ ಪಾರ್ಲರ್ ಮಾಲೀಕರ ಸಂಘ ಕಪ್ಪುಚುಕ್ಕೆಯಿಲ್ಲದೆ ಕಾರ್ಯ ನಿರ್ವಹಿಸುತ್ತಾ ಬಂದಿದೆ. ನೋಂದಾಯಿತ ಹಾಗೂ ಅತ್ಯುತ್ತಮವಾಗಿ ತರಬೇತಿ ಪಡೆದ ಬ್ಯೂಟಿಷಿಯನ್‍ಗಳು ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ.

ಆದರೆ ಕೆಲವರು ಅನಧಿಕೃತವಾಗಿ ಬ್ಯೂಟಿ ಪಾರ್ಲರ್‍ಗಳನ್ನು ಆರಂಭಿಸಿ, ಅನೈತಿಕ ಚಟುವಟಿಕೆ ನಡೆಸುವ ಮೂಲಕ ಬ್ಯೂಟಿಷಿಯನ್ ಉದ್ಯಮಕ್ಕೆ ಕಪ್ಪುಚುಕ್ಕೆ ಬರುವಂತೆ ಮಾಡುತ್ತಿದ್ದಾರೆ. ವಿಜಯನಗರ ಹಾಗೂ ಹೂಟಗಳ್ಳಿಯಲ್ಲಿ ದಾಳಿ ನಡೆಸಿರುವುದು ಸ್ಪಾ ಮೇಲೆ. ಅದನ್ನು ಬ್ಯೂಟಿ ಪಾರ್ಲರ್ ಎಂದು ಬಿಂಬಿಸಲಾಗಿದೆ. ಪ್ರವಾಸಿ ಕೇಂದ್ರವಾಗಿರುವ ಸಾಂಸ್ಕೃತಿಕ ನಗರಿ ಮೈಸೂರಿನ ಘನತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ಅನಧಿಕೃತ ಪಾರ್ಲರ್‌ಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ. ಮೈಸೂರು ನಗರದಲ್ಲಿ 600ಕ್ಕೂ ಹೆಚ್ಚು ಪಾರ್ಲರ್‌ಗಳಿದ್ದು, ಅವುಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಪಾರ್ಲರ್‌ಗಳು ಅನುಮತಿ ಪಡೆಯದೆ ನಡೆಸಲಾಗುತ್ತಿದೆ.

ಸರಿಯಾದ ತರಬೇತಿ ಪಡೆಯದೆ ಬ್ಯೂಟಿಷಿಯನ್‍ಗಳಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ನಗರ ಪಾಲಿಕೆ ಅಧಿಕಾರಿಗಳು ಇವುಗಳನ್ನು ಪರಿಶೀಲಿಸಬೇಕು. ಅನಧಿಕೃತವಾಗಿ ನಡೆಯುತ್ತಿರುವ ಪಾರ್ಲರ್‍ಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

Translate »