ಕುತೂಹಲ ಕೆರಳಿಸಿರುವ ಸಿದ್ದರಾಮಯ್ಯ ಔತಣಕೂಟ
ಮೈಸೂರು

ಕುತೂಹಲ ಕೆರಳಿಸಿರುವ ಸಿದ್ದರಾಮಯ್ಯ ಔತಣಕೂಟ

August 2, 2018

ಬೆಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‍ನ ಸಚಿವರಿಗೆ ಔತಣಕೂಟ ಏರ್ಪಡಿಸಿ ತಮ್ಮ ರಾಜಕೀಯದಾಳ ಉರುಳಿಸಲು ಆರಂಭಿಸಿದ್ದಾರೆ. ಸಿದ್ದರಾಮಯ್ಯ ಅವರು ವಿಧಾನಸಭೆ ಅಧಿವೇಶನ ನಡೆಯುವ ವೇಳೆ ಶಾಸಕರಿಗೆ ಔತಣ ಕೂಟ ಏರ್ಪಡಿಸುವುದು ಸಾಮಾನ್ಯವಾಗಿ ನಡೆದು ಬಂದಿದೆ.

ಆದರೆ ಈ ಬಾರಿ ಅವರು ಎಐಸಿಸಿ ಕಾರ್ಯಕಾರಿಗೆ ನೇಮಕವಾದ ಹಿನ್ನೆಲೆಯಲ್ಲಿ ಔತಣಕೂಟ ಏರ್ಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಕೇವಲ ಸಚಿವರನ್ನು ಮಾತ್ರ ಆಹ್ವಾನಿಸಿ ರುವುದು ಹಲವಾರು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ವಿಚಾರದಲ್ಲಿ ಕಾಂಗ್ರೆಸ್‍ನಲ್ಲಿ ಅಸಮಾಧಾನದ ಹೊಗೆಯಾಡಲಾರಂಭಿಸಿದೆ. ಕಾಂಗ್ರೆಸ್ ಪ್ರಾಬಲ್ಯದಿಂದ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಜೆಡಿಎಸ್ ಸಚಿವರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಿರುವ ಬಗ್ಗೆ ಅಪಸ್ವರ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ, ಔತಣಕೂಟ ರಾಜ ಕಾರಣಕ್ಕಿಳಿದಿರುವುದು ಮಹತ್ವ ಪಡೆದುಕೊಂಡಿದೆ. ಇನ್ನೇನು, ನಿಗಮ ಮಂಡಳಿಗಳ ಅಧ್ಯಕ್ಷರು-ಉಪಾಧ್ಯಕ್ಷರು ಹಾಗೂ ಸದಸ್ಯರ ನೇಮಕವಾಗಬೇಕಾಗಿದೆ. ಬಹುತೇಕ ಪ್ರಮುಖ ನಿಗಮ ಮಂಡಳಿಗಳು ಜೆಡಿಎಸ್ ಸಚಿವರ ವ್ಯಾಪ್ತಿಯಲ್ಲಿವೆ. ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರು `ಅಂದರಿಕೂ ಮಂಚಿ ವಾಡು’ (ಎಲ್ಲರಿಗೂ ಒಳ್ಳೆಯವರು) ಎಂಬಂತೆ ವರ್ತಿಸುತ್ತಿದ್ದಾರೆ. ಜೆಡಿಎಸ್ ನಾಯಕರು ಹೇಳುವ ಎಲ್ಲಾ ವಿಚಾರಗಳಿಗೂ ತಲೆದೂಗುತ್ತಿದ್ದಾರೆ ಎಂಬ ಅಸಮಾಧಾನವನ್ನು ಕೆಲವು ಸಚಿವರು ವ್ಯಕ್ತಪಡಿಸಿದ್ದು, ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ನೀವೇ ನ್ಯಾಯ ಒದಗಿಸಬೇಕೆಂದು ಸಿದ್ದ ರಾಮಯ್ಯ ಬಳಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲೇ ಈ ಔತಣಕೂಟ ಏರ್ಪಡಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ನಿಗಮ ಮಂಡಳಿ ನೇಮಕಾತಿ ವೇಳೆ ಉಪ ಮುಖ್ಯಮಂತ್ರಿಗಳನ್ನು ನಂಬಿ ಕೂರಲು ಸಾಧ್ಯವಿಲ್ಲ ಎಂದು ಕೆಲವು ಸಚಿವರು ಹೇಳುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯನವರು ಈ ವಿಚಾರದಲ್ಲಿ ಮಧ್ಯೆ ಪ್ರವೇಶ ಮಾಡಬೇಕು ಎಂಬ ಮನವಿಯನ್ನೂ ಮಾಡಿದ್ದಾರೆ ಎಂದು ಹೇಳಲಾಗಿದೆ.

ಸಂಪುಟದ ನಿರ್ಧಾರಗಳು, ಅಧಿಕಾರಿಗಳ ವರ್ಗಾವಣೆ, ನಿಗಮ ಮಂಡಳಿ ನೇಮಕಾತಿ ಸೇರಿದಂತೆ ಆಡಳಿತಾತ್ಮಕ ವಿಚಾರಗಳಲ್ಲಿ ಹಿತೋಪದೇಶ ನೀಡುವ ಸಲುವಾಗಿಯೇ ಸಿದ್ದರಾಮಯ್ಯ ತಮ್ಮ ಪಕ್ಷದ ಸಚಿವರಿಗೆ ಮಾತ್ರ ಔತಣ ಕೂಟ ಏರ್ಪಡಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

Translate »