ಆದಿವಾಸಿಗಳಿಗೆ ಮನೆ ಬಾಗಿಲಲ್ಲಿ ಉಚಿತ ಆರೋಗ್ಯ ಸೇವೆ
ಮೈಸೂರು

ಆದಿವಾಸಿಗಳಿಗೆ ಮನೆ ಬಾಗಿಲಲ್ಲಿ ಉಚಿತ ಆರೋಗ್ಯ ಸೇವೆ

August 2, 2018
  •  ಯೋಜನೆಗೆ ಚಾಲನೆ ನೀಡಿದ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್
  •  8 ಕೋಟಿ ವೆಚ್ಚದಲ್ಲಿ 16 ವಾಹನಗಳ ವ್ಯವಸ್ಥೆ
  • ಮೈಸೂರು, ಕೊಡಗು, ಚಾ.ನಗರ ಸೇರಿ 8 ಜಿಲ್ಲೆ ಅರಣ್ಯ ವ್ಯಾಪ್ತಿ ಆದಿವಾಸಿಗಳಿಗೆ ಸೇವೆ ಲಭ್ಯ

ಬೆಂಗಳೂರು: ಅರಣ್ಯದಲ್ಲಿನ ಆದಿವಾಸಿಗಳ ಮನೆ ಬಾಗಿಲಲ್ಲಿ ಉಚಿತ ಆರೋಗ್ಯ ಸೇವೆ ಕಲ್ಪಿಸುವ ನೂತನ ಯೋಜನೆಗೆ ರಾಜ್ಯ ಸರ್ಕಾರ ಇಂದಿಲ್ಲಿ ಚಾಲನೆ ನೀಡಿದೆ.

ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆ, ಬೆಳಗಾವಿ ಸಹಯೋಗದಲ್ಲಿ ಈ ಆರೋಗ್ಯ ಸೇವೆ ಕಾರ್ಯ ಕ್ರಮ ಅನುಷ್ಠಾನಗೊಂಡಿದ್ದು, ಮೊದಲ ಹಂತ ದಲ್ಲಿ ಮೈಸೂರು, ಚಾಮರಾಜನಗರ ಹಾಗೂ ಕೊಡಗು ಭಾಗದ ಅರಣ್ಯ ವಾಸಿಗಳಿಗೆ ಸ್ಥಳದಲ್ಲೇ ಉಚಿತ ಆರೋಗ್ಯ ಸೇವೆ ಲಭ್ಯವಾಗಲಿದೆ.

ಸಂಚಾರಿ ಆರೋಗ್ಯ ಘಟಕ ಸೇವೆಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಈ ವಿಷಯ ತಿಳಿಸಿದ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಮುಂದಿನ ದಿನಗಳಲ್ಲಿ ಎಲ್ಲಾ ಅರಣ್ಯ ಆದಿವಾಸಿಗಳಿಗೆ ಈ ಸೌಲಭ್ಯ ವಿಸ್ತರಿಸಲಾಗುವುದು ಎಂದರು. 8 ಕೋಟಿ ವೆಚ್ಚದಲ್ಲಿ 16 ವಾಹನಗಳ ನಿರ್ಮಾಣವಾಗಿದ್ದು, ಈ ವಾಹನಗಳು ಎಂಟು ಜಿಲ್ಲೆಗಳ ಅರಣ್ಯ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಲಿವೆ.

ವಿಶೇಷವಾಗಿ ಸಿದ್ಧಪಡಿಸಿರುವ ವಾಹನದಲ್ಲಿ ಒಬ್ಬ ವೈದ್ಯರು, ನರ್ಸ್ ಹಾಗೂ ಸಹಾಯಕರ ಜೊತೆ ಅಗತ್ಯ ಔಷಧಿ ಮತ್ತು ಸಲಕರಣೆಗಳು ಇರಲಿವೆ.

ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಸಂಬಂಧಪಟ್ಟ ರೋಗಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ, ಅದೇ ತಂಡ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಿದೆ.

ಇತ್ತೀಚೆಗೆ ಅರಣ್ಯವಾಸಿಗಳಲ್ಲಿ ಕೆಲವು ಮಾರಣಾಂತಿಕ ಕಾಯಿಲೆಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಚಾಮರಾಜನಗರ, ಮೈಸೂರು, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಹಾಗೂ ಬೆಳಗಾವಿ ಜಿಲ್ಲಾ ವ್ಯಾಪ್ತಿಯ ಅರಣ್ಯ ಪ್ರದೇಶದ ಆದಿವಾಸಿಗಳ ಮನೆ ಬಾಗಿಲಿಗೆ ಆರೋಗ್ಯ ಸೇವೆ ಕಲ್ಪಿಸುವ ಯೋಜನೆ ಜಾರಿಗೊಳಿಸಲಾಗಿದೆ ಎಂದರು.

ಪ್ರತಿ ದಿನ ಎರಡು ಗ್ರಾಮಗಳಿಗೆ ಈ ವೈದ್ಯರ ತಂಡ ಪ್ರತ್ಯೇಕವಾಗಿ ಭೇಟಿ ನೀಡಿ, ಆ ಹಳ್ಳಿಯ ಎಲ್ಲಾ ಆದಿವಾಸಿಗಳ ಆರೋಗ್ಯ ಪರಿಶೀಲನೆ ಮಾಡಲಿದೆ. ಅಷ್ಟೇ ಅಲ್ಲ, ಅಗತ್ಯ ಕಂಡು ಬಂದರೆ ಉಚಿತವಾಗಿ ಸ್ಥಳದಲ್ಲೇ ಔಷಧಿ ವಿತರಣೆ ಮಾಡಲಿದೆ ಎಂದು ಡಾ. ಪರಮೇಶ್ವರ್ ತಿಳಿಸಿದರು.

ಸಂಚಾರಿ ಆರೋಗ್ಯ ಘಟಕ ಯೋಜನೆಗೆ ಚಾಲನೆ ನೀಡಿದ ನಂತರ ಉಪ ಮುಖ್ಯಮಂತ್ರಿಗಳು, ಲಂಡನ್ ಮಹಾನಗರದ ಉಪ ಮಹಾಪೌರರಾದ ಷರ್ಲಿ ರೋಡ್ರಿಗಸ್ ಅವರನ್ನು ಭೇಟಿ ಮಾಡಿ, ರಾಜ್ಯದ ಪಾಲಿಕೆ ಮತ್ತು ನಗರ ಪ್ರದೇಶಗಳಲ್ಲಿ ಕಸ ವಿಲೇವಾರಿ ಮತ್ತು ಸಂಚಾರಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿದ ಲಂಡನ್‍ನ ಮಹಾಪೌರರು ಇದಕ್ಕೆ ಸಂಬಂಧಪಟ್ಟಂತೆ ಸಮಗ್ರ ವರದಿ ಮತ್ತು ಆರ್ಥಿಕ ನೆರವು ಕಲ್ಪಿಸುವ ಬಗ್ಗೆಯೂ ನಾವು ಚಿಂತನೆ ಮಾಡುವುದಾಗಿ ತಿಳಿಸಿದ್ದಾರೆ. ಕಸ ವಿಲೇವಾರಿ, ಸಂಚಾರ ನಿಯಂತ್ರಣ, ಅಷ್ಟೇ ಅಲ್ಲದೆ ಪರಿಸರ ಮಾಲಿನ್ಯ ತಡೆಗಟ್ಟಲು ಅಗತ್ಯ ಕಾರ್ಯಕ್ರಮಗಳನ್ನು ನೀಡುವುದಾಗಿ ಭರವಸೆಯಿತ್ತಿದ್ದಾರೆ.

Translate »