ಕಲಿಯಲು ಬದುಕಿರಿ… ಬದುಕಲು ಕಲಿಸಿರಿ!!
ಅಂಕಣಗಳು, ಚಿಂತನೆ

ಕಲಿಯಲು ಬದುಕಿರಿ… ಬದುಕಲು ಕಲಿಸಿರಿ!!

August 26, 2018

ನಮ್ಮ ಶಿಕ್ಷಣ ಪದ್ಧತಿ ಸರಿಯಾಗಿಲ್ಲ ಎಂಬುದು ತಿಳಿದಿರುವ ವಿಚಾರ. ಈ ಬಗ್ಗೆ ಅನೇಕ ಶಿಕ್ಷಣ ತಜ್ಞರೇ ಹೇಳುತ್ತಲೇ ಇದ್ದಾರೆ. ಅಷ್ಟಕ್ಕೂ ಈಗ ಜಾರಿಯಲ್ಲಿರುವ ಶಿಕ್ಷಣ ಪದ್ಧತಿ ನಮ್ಮದಲ್ಲ. ಅದು ಬ್ರಿಟಿಷರು ತಮ್ಮ ಆಡಳಿತ ನಿರ್ವಹಣೆಗೆ ಮಾಡಿಕೊಂಡಿದ್ದ ವ್ಯವಸ್ಥೆ. ತಮ್ಮ ಕಛೇರಿಗಳಲ್ಲಿ ಕಾರಕೂನರಾಗಿ ಕೆಲಸ ನಿರ್ವಹಿಸಲು ಇಂಗ್ಲೆಂಡ್‍ನಿಂದ ಜನರನ್ನು ಕರೆಸಬೇಕಾಗಿತ್ತು. ಇದು ಬಹಳ ದುಬಾರಿ. ಹಾಗಾಗಿ ಇಲ್ಲಿನವರನ್ನೇ ಈ ಕೆಲಸಕ್ಕೆ ನೇಮಿಸಿಕೊಂಡಲ್ಲಿ ಅವರಿಗೆ ಬಹಳ ಕಡಿಮೆ ಖರ್ಚಿನಲ್ಲಿ ಜನ ಸಿಗುತ್ತಿದ್ದರು. ಹಾಗಾಗಿ ಅದನ್ನೇ ಶಿಕ್ಷಣ ನೀತಿ ಮಾಡಿದರು. ಕಚೇರಿಗಳಲ್ಲಿ ಕಾರಕೂನರಾಗಿ ಕೆಲಸ ಮಾಡಲು ಅಗತ್ಯವಾದ ಶೀಘ್ರ ಲಿಪಿ, ಬೆರಳಚ್ಚು ಮಾಡುವುದು, ಲೆಕ್ಕ ನಿರ್ವಹಣೆ ಗಾಗಿ ವಾಣಿಜ್ಯ ಶಿಕ್ಷಣ ಇವುಗಳನ್ನು ನಮಗೆ ಕಲಿಸಿದರು. ಇದರ ಜೊತೆಗೆ ನಮಗೆ ದೇಶಭಕ್ತಿ ಭಾವನೆ ಬಾರದಂತೆ ನಮ್ಮ ಚರಿತ್ರೆಯನ್ನೂ ಅವರೇ ರಚಿಸಿದರು. ಹೀಗಾಗಿ ಹಲವು ಶತಮಾನ ಅವರು ಬಹಳ ಕಡಿಮೆ ಖರ್ಚಿ ನಲ್ಲಿ ಈ ದೇಶದ ಆಡಳಿತ ನಡೆಸಿ ಹೋದರು. ತಾವು ತೊಲಗಿದರೂ ತಾವೇ ರೂಪಿಸಿದ್ದ ಶಿಕ್ಷಣ ವ್ಯವಸ್ಥೆಯನ್ನು ಇಲ್ಲಿಯೇ ಬಿಟ್ಟುಹೋದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನಾವು ಪ್ರಮುಖ ವಾಗಿ ಶಿಕ್ಷಣ ಹಾಗೂ ಕೈಗಾರಿಕೆಗಳ ಬಗ್ಗೆ ವಿಶೇಷ ಗಮನ ಹರಿಸಬೇಕಾಗಿತ್ತು. ಆದರೆ ಇವೆರಡೂ ಕ್ಷೇತ್ರ ನಿರೀಕ್ಷಿತ ಪ್ರಮಾಣದಲ್ಲಿ ದೇಶದ ನಾಯಕರ ಗಮನ ಸೆಳೆಯಲಿಲ್ಲ. ಹಾಗಾಗಿ ಬ್ರಿಟಿಷರು ರೂಪಿಸಿದ ಶಿಕ್ಷಣ ವ್ಯವಸ್ಥೆಯೇ ಮುಂದುವರೆಯಿತು. ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳ ನಂತರವೂ ನಮಗೆ ಎಂತಹ ಶಿಕ್ಷಣ ಬೇಕಾಗಿದೆ? ಎಂಬ ಬಗ್ಗೆ ನಮಗೆ ನಿಖರ ಕಲ್ಪನೆಯೇ ಇಲ್ಲ. ಈಗಲೂ ನಮ್ಮ ಶಿಕ್ಷಣ ಗುಮಾಸ್ತರನ್ನು ತಯಾರು ಮಾಡುವ ಶಿಕ್ಷಣವೇ ಆಗಿದೆ.

ಪ್ರತಿವರ್ಷ ದೇಶದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಸಮಿತಿಗಳು, ಪಠ್ಯ ಪುಸ್ತಕಕ್ಕೆ ಸಂಬಂಧಿಸಿದ ಸಮಿತಿಗಳು ರಚನೆಯಾಗುತ್ತವೆ. ಈ ಸಮಿತಿಗಳಿಗೂ ನಿರ್ದಿಷ್ಟ ಮಾರ್ಗಸೂಚಿ ಇದ್ದಂತೆ ಕಾಣುವುದಿಲ್ಲ. ಶಿಕ್ಷಣದ ಬದಲಾವಣೆ ಎಂದರೆ ಪಠ್ಯ ಪುಸ್ತಕದ ಬದಲಾವಣೆ ಎಂಬಂತಾಗಿದೆ. ಈ ಸಮಿತಿಗಳು ನಿಗದಿಪಡಿಸುವ ಪಠ್ಯಪುಸ್ತಕಗಳು ಪ್ರಕಟಣೆಯಾದ ನಂತರ ಟೀಕೆಗೆ ಗುರಿಯಾಗುತ್ತವೆ. ಈ ಬದಲಾವಣೆಯಿಂದ ಆದ ಪ್ರಯೋಜನವೇನು? ಆ ಸಮಿತಿಗಳೂ ನಂತರ ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ. ಟೀಕೆಗಳು ಜಾಸ್ತಿ ಯಾದಾಗ ಮತ್ತೊಂದು ಸಮಿತಿ ರಚನೆಯಾಗುತ್ತದೆ. ಅದು ನೀಡುವ ವರದಿ ಏನಾಗುತ್ತದೋ ತಿಳಿಯದು.

ಇಂದಿಗೂ ನಮ್ಮ ವಿದ್ಯಾರ್ಥಿಗಳು (ಹಣ ಇರುವವರು) ಅಮೇರಿಕಾ, ಆಸ್ಟ್ರೇಲಿಯಾಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಹೋಗುವುದು ತಪ್ಪಿಲ್ಲ. ನಮ್ಮಲ್ಲಿಯೂ ಬಿ.ಇ. ಮಾಡಿದವರಿಗೆ ಎಂ.ಟೆಕ್ ಓದುವ ಅವಕಾಶ ವಿದೆ. ಎಂ.ಟೆಕ್ ಮಾಡಿದವರು ಅಧ್ಯಾಪಕರಾಗಿ ಕೆಲಸ ಮಾಡಬೇಕೋ? ಅಥವಾ ದೇಶದ ಆಡಳಿತ ವ್ಯವಸ್ಥೆಗೆ ಸೇರ್ಪಡೆಯಾಗಬೇಕೋ? ಮಿಲಿಟರಿ ಸೇವೆಗೆ ಸೇರ ಬೇಕೋ? ಖಾಸಗಿ ಸಂಸ್ಥೆಗಳಿಗೆ ಸೇರಬೇಕೋ? ಸರ್ಕಾರದ ಉದ್ಯೋಗ ಅರಸಬೇಕೋ? ಗೊತ್ತಾಗುತ್ತಿಲ್ಲ.

ಅಮೇರಿಕಾದಲ್ಲಿ ಎಂ.ಎಸ್. ಮಾಡಿದರೆ ಅದು ಇಲ್ಲಿನ ಎಂ.ಟೆಕ್. ಗಿಂತ ಉತ್ತಮವಾಗಿದ್ದು, ಅವರಿಗೆ ಹೆಚ್ಚಿನ ವೇತನದ ಕೆಲಸ ದೊರಕುತ್ತದೆ ಎಂಬ ಭಾವನೆ ಇದೆ. ಅದೇ ನಮ್ಮಲ್ಲಿ ಎಂ.ಟೆಕ್ ಮಾಡಿದವರಿಗೆ ಖಂಡಿತಾ ಉತ್ತಮ ಉದ್ಯೋಗಾವಕಾಶ ದೊರಕುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲಾಗುವುದಿಲ್ಲ. ಅನೇಕ ಸಲ ಇತರೆ ಪದವಿ ಪಡೆದವರಂತೆ ಇವರೂ ಬೇರೆ ಬೇರೇ (ತಮ್ಮ ಓದಿಗೆ ಸಂಬಂಧಿಸದ) ಉದ್ಯೋಗಕ್ಕೆ ಸೇರ ಬೇಕಾಗುತ್ತದೆ. ಅಮೇರಿಕಾ ಇಂತಹ ಎಂ.ಎಸ್ ಪದವಿಯ ಶಿಕ್ಷಣ ಕೊಡಬಹುದಾದರೆ ನಮ್ಮ ದೇಶಕ್ಕೆ ಅಂತಹ ಶಿಕ್ಷಣ ಕೊಡಲು ಏಕೆ ಸಾಧ್ಯವಾಗುತ್ತಿಲ್ಲ? ಒಂದಂತೂ ನಿಜ. ಖಂಡಿತಾ ನಮ್ಮ ಎಂ.ಟೆಕ್ ಶಿಕ್ಷಣ ಇತರೆ ದೇಶಗಳ ಶಿಕ್ಷಣಕ್ಕಿಂತ ಉತ್ತಮವಾಗಿದೆ. ಇಲ್ಲವೆನ್ನಲಾಗುವುದಿಲ್ಲ. ಆದರೆ ಇಂದು ಎಂ.ಎಸ್ ಪದವಿ ಶಿಕ್ಷಣಕ್ಕೆ ಹೋದವರಲ್ಲಿ ಎಷ್ಟು ಜನ ಪದವಿ ಪಡೆದು ಭಾರತಕ್ಕೆ ಹಿಂದಿರುಗುತ್ತಾರೆ? ಅಮೇರಿಕಾದಲ್ಲಿ ಎಂ.ಎಸ್ ಪದವಿ ಪಡೆಯಲು ಸುಮಾರು 50-60 ಲಕ್ಷ ರೂಪಾಯಿ ಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಮಧ್ಯಮ ವರ್ಗದ ಜನರಿಗೆ ಇಷ್ಟು ಹಣ ಹೊಂದಿಸಿ ತಮ್ಮ ಮಕ್ಕಳನ್ನು ಅಲ್ಲಿಗೆ ಕಳುಹಿಸಲು ಸಾಧ್ಯವಾಗುವುದಿಲ್ಲ. ಆದರೇನಂತೆ? ಪ್ರತೀ ವರ್ಷ ನಮ್ಮ ದೇಶದಿಂದ ಸಹಸ್ರಾರು ವಿದ್ಯಾರ್ಥಿಗಳು ಅಲ್ಲಿಗೆ ತೆರಳುತ್ತಾರೆ. ನಮ್ಮ ಬ್ಯಾಂಕುಗಳು ಇದಕ್ಕಾಗಿ ಉದಾರವಾಗಿ ಸಾಲ ನೀಡುತ್ತವೆ. ನಮ್ಮ ದೇಶದಲ್ಲಿ ಶಿಕ್ಷಣಕ್ಕೆ ನೀಡುವ ಸಾಲಕ್ಕಿಂತ ಅಲ್ಲಿ ಹೋಗುವವರಿಗೆ ಸುಲಭವಾಗಿ ಕೇಳಿದಷ್ಟು ಸಾಲ ಸಿಗುತ್ತದೆ ಎಂದು ಹೇಳಲಾಗುತ್ತದೆ. (ಬಡ್ಡಿದರ ಎಷ್ಟಾದರೂ ಇರಲಿ). ವಿದೇಶದಲ್ಲಿ ಶಿಕ್ಷಣ ಪಡೆಯಲು ಸಾಲವೇನೋ ಸಿಗುತ್ತದೆ. ಮಕ್ಕಳೂ ಅಮೇರಿಕಾಗೆ ಹೋಗಿ ಓದಿ ಪದವಿ ಪಡೆಯುತ್ತಾರೆ. ಆದರೆ ಮಾಡಿದ ಸಾಲ ತೀರಿಸುವುದು ಹೇಗೆ? ಅದಕ್ಕಾಗಿ ಅವರು ಅಲ್ಲಿ ಓದುತ್ತಿರುವಾಗಲೇ ಪಾರ್ಟ್ ಟೈಮ್ ಕೆಲಸಕ್ಕೆ ಸೇರುತ್ತಾರೆ. ಪದವಿ ಪಡೆದ ನಂತರ ಒಂದೆರಡು ವರ್ಷ ಅಲ್ಲಿಯೇ ಕೆಲಸ ಮಾಡಿ ಸಾಲ ತೀರಿದ ನಂತರ ಮರಳಿ ದೇಶಕ್ಕೆ ಬರುವುದಾಗಿ ಹೇಳಿ ಅಲ್ಲಿ ಕೆಲಸಕ್ಕೆ ಸೇರುತ್ತಾರೆ. ಅವರಿಗೆ ಗೊತ್ತು. ನಮ್ಮ ದೇಶದಲ್ಲಿ ಅವರುಗಳಿಗೆ ಅಂತಹ ದೊಡ್ಡ ಮೊತ್ತದ ಕೆಲಸ ಸಿಗುವುದಿಲ್ಲ. (ಈಗಂತೂ ನಮ್ಮ ರೂಪಾಯಿಯ ಮೌಲ್ಯ ದಿನದಿಂದ ದಿನಕ್ಕೆ ಕುಸಿಯುತ್ತಿರುವುದರಿಂದ, ಅಲ್ಲಿ ಡಾಲರ್‍ಗಳಲ್ಲಿ ಸಂಪಾದಿಸಿದ ಹಣವನ್ನು ರೂಪಾಯಿಗೆ ಪರಿವರ್ತನೆ ಮಾಡಿದಾಗ ಬಹಳ ಹೆಚ್ಚು ಹಣ ಅಲ್ಲಿ ಸಿಗುತ್ತದೆ. ಹಾಗಾಗಿ ಮಾಡಿದ ಸಾಲ ತೀರಿಸುವುದು ಸುಲಭ. ಸಾಲ ತೀರಿಸುವುದು ಭಾರತದ ರೂಪಾಯಿಯಲ್ಲೇ ಆಗಿರುವುದರಿಂದ ಇದು ಇನ್ನೂ ಸುಲಭ ಮಾರ್ಗ). ಒಂದೆರಡು ವರ್ಷ ಅಲ್ಲಿ ಕೆಲಸ ಮಾಡಿದ ನಂತರ ಅವರು ದೇಶಕ್ಕೆ ಹಿಂದಿರುಗಲು ಮನಸ್ಸು ಮಾಡಬಹುದೇ? ಎಂದರೆ ಬಹುತೇಕ ಉತ್ತರ ಇಲ್ಲವೆಂದೇ ಆಗಿರುತ್ತದೆ. ಏಕೆಂದರೆ ಸಾಲ ತೀರಿದ ನಂತರವೂ ಮತ್ತೊಂದೆರಡು ವರ್ಷ ಅಲ್ಲೇ ಕೆಲಸ ಮಾಡಿದರೆ ಕೈತುಂಬಾ ಹಣ ಮಾಡಿಕೊಂಡು ಬಂದು ಇಲ್ಲಿ ಆರಾಮವಾಗಿರಬಹುದಲ್ಲ !!! ಅಂದರೆ ಇಷ್ಟು ಹೊತ್ತಿಗೆ ಐದಾರು ವರ್ಷಗಳು ಕಳೆದಿರುತ್ತದೆ. ತಂದೆ ತಾಯಿಗೂ ಅವರನ್ನು ಬಿಟ್ಟು ಬಾಳಬಹುದೆಂಬ ಧೈರ್ಯ ಬಂದಿರುತ್ತದೆ. ಮಕ್ಕಳು ಅಲ್ಲಿ ವೈಭವಯುತ ವಾದ, ವಿಲಾಸೀ ಜೀವನ ನಡೆಸುತ್ತಿರುವಾಗ ಇಲ್ಲಿಗೆ ಬಂದು ಏನು ಮಾಡುವುದು? ಹಾಗಾಗಿ ಅವರು ಅಲ್ಲೇ ಮತ್ತೊಂದಷ್ಟು ವರ್ಷ ಇರುವುದಾಗಿ ಹೇಳಿದರೆ ಪೋಷಕರು ಆಗದು ಎಂದು ಹೇಳುವುದಿಲ್ಲ. ಆ ಮಕ್ಕಳು ಮುಂದೆ ಇಲ್ಲಿಗೆ ಬರುವುದೇ ಇಲ್ಲ. ನಿಮ್ಮ ಮಕ್ಕಳು ಎಲ್ಲಿದ್ದಾರೆ? ಎಂದರೆ ಅಮೇರಿಕಾದಲ್ಲಿ, ಆಸ್ಟ್ರೇಲಿಯಾದಲ್ಲಿ ಎಂದು ಹೇಳುವುದರಲ್ಲಿ ನಮ್ಮವರಿಗೆ ಹೆಮ್ಮೆ. ಆ ಮಕ್ಕಳಿಗಾಗಿ, ಅವರ ವಿದ್ಯಾಭ್ಯಾಸಕ್ಕಾಗಿ ನಮ್ಮ ದೇಶ ಮಾಡಿದ ಖರ್ಚು ಏನಾಗಬೇಕು? ಅದು ವ್ಯರ್ಥವೇ? ಇನ್ನು ಮುಂದೆ ಈ ದೇಶಕ್ಕೆ ಅವರು ಬರುವುದಿಲ್ಲ ಎಂದಾದರೆ, ಅವರ ಮೇಲೆ ಈ ದೇಶ ಮಾಡಿದ ವೆಚ್ಚ ‘ಸಾಲ’ ಎಂದು ಅವರು ತೀರಿಸಬೇಡವೇ? ಈ ಬಗ್ಗೆ ಹೇಳುವವರ್ಯಾರು? ಆ ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡಿದ ನಂತರ ಓದಿಗಾಗೋ, ಕೆಲಸಕ್ಕೋ ಹೋಗು ವಾಗ ಇಷ್ಟು ವರ್ಷವಾದ ನಂತರ ಭಾರತಕ್ಕೆ ಹಿಂದಿರುಗಬೇಕು ಎಂಬ ಷರತ್ತು ವಿಧಿಸಲು ತೊಡಕು ಗಳೇನೋ ತಿಳಿಯದು. ಇದಿಷ್ಟೂ ಹೇಳುವಾಗ ನಮ್ಮ ಮಕ್ಕಳು ವಿದೇಶಗಳಲ್ಲಿ ದುಡಿದು ಹೆಸರು ಮಾಡು ವುದು ಬೇಡವೆಂದಲ್ಲ. ಆದರೆ ನಾವು ಸಾಕಿ ಸಲಹಿದ, ಅವರ ವಿದ್ಯಾಭ್ಯಾಸಕ್ಕಾಗಿ ಈ ದೇಶದ ಹಣ ಖರ್ಚು ಮಾಡಿರುವಾಗ ಅವರಿಂದ ಈ ದೇಶಕ್ಕೆ ಉಪಕಾರ ವಾಗಬೇಡವೇ? ಈ ಮಾತುಗಳು ಅನೇಕ ಪೋಷಕರಿಗೆ ಇಷ್ಟ ವಾಗದಿರಬಹುದು. ಆದರೂ ನಮ್ಮ ದೇಶದ ಬಗ್ಗೆಯೂ ಯೋಚಿಸಬೇಡವೇ? ಈ ಬಗ್ಗೆ ಪೋಷಕ ರನ್ನು ಕೇಳಿದಾಗ ಅವರೇನೆನ್ನುತ್ತಾರೆ? ನಮ್ಮ ಮಕ್ಕಳಿಗೆ ಅಲ್ಲಿನಷ್ಟು ವೇತನ, ಇನ್ನಿತರೆ ಸವಲತ್ತು ಈ ದೇಶದಲ್ಲೂ ಸಿಕ್ಕರೆ ಅವರು ವಾಪಸ್ ಬರಬಹುದು. ಅಂತಹ ಪರಿಸ್ಥಿತಿ ನಮ್ಮ ದೇಶದಲ್ಲಿಲ್ಲವಲ್ಲಾ, ಏನು ಮಾಡಲಾಗುತ್ತದೆ ಎಂದು ಜಾಣ್ಮೆಯ ಉತ್ತರ ನೀಡಬಹುದು. ಇರಲಿ.

ಇಲ್ಲಿ ಈ ವಿಷಯ ಪ್ರಸ್ತಾಪಿಸಿದ ಉದ್ದೇಶ, ನಮ್ಮ ಎಂ.ಟೆಕ್ ಏಕೆ ಎಂ.ಎಸ್.ನಂತೆ ಆಕರ್ಷಿ ಸುತ್ತಿಲ್ಲಾ? ಎಂಬುದೇ ಆಗಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ನಮಗೆ ಅಮೇರಿಕಾ, ಆಸ್ಟ್ರೇಲಿಯಾದಂತಹ ದೇಶದ ಶಿಕ್ಷಣಕ್ಕೆ ಮಕ್ಕಳು ಏಕೆ ಇಷ್ಟಪಡುತ್ತಾರೆ? ಇಲ್ಲಿಯೇ ಏಕೆ ಅಂತಹ ಶಿಕ್ಷಣ ನೀಡಲಾಗುತ್ತಿಲ್ಲಾ? ಇಷ್ಟು ವರ್ಷವಾದರೂ ನಮ್ಮ ಮಕ್ಕಳು ಹಾಗೂ ಪೋಷಕರಿಗೆ ಈ ವಿದೇಶೀ ವ್ಯಾಮೋಹ ಏಕೆ ದಿನೇ ದಿನೆ ಹೆಚ್ಚಾಗುತ್ತಲೇ ಇದೆ? ಹಾಗೆ ನೋಡಿದರೆ ಮೊದಲಿನಿಂದಲೂ ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ವಿಶ್ವವಿಖ್ಯಾತವಾದದ್ದೇ. ಬಹಳ ಹಿಂದಿನಿಂದಲೂ ಇಲ್ಲಿ ವ್ಯಾಸಂಗ ಮಾಡಲು ದೇಶ ವಿದೇಶಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬರು ತ್ತಿದ್ದರು. ಆದರೆ ಇಂದು ಕೇವಲ ಚೈನಾ, ಆಫ್ರಿಕನ್ ದೇಶಗಳಂತಹ ಕೆಲವು ದೇಶಗಳನ್ನು ಹೊರತುಪಡಿ ಸಿದರೆ ನಮ್ಮ ದೇಶಕ್ಕೆ ವ್ಯಾಸಂಗ ಮಾಡಲು ವಿದೇಶದಿಂದ ಬರುವುದಿಲ್ಲ. ಹಾಗೆÀ ಬಂದರೆ ಅದು ಯೋಗ ಕಲಿಯಲು ಮಾತ್ರ ಎನಿಸುವಂತಾಗಿದೆ. ಹಾಗಾದರೆ ಸಹಸ್ರಾರು ವರ್ಷಗಳ ನಮ್ಮ ವಿದ್ಯಾಭ್ಯಾಸ ಪದ್ಧತಿಯು ಇಂದು ಆ ಮಟ್ಟದಲ್ಲಿಲ್ಲ ಎಂದು ಒಪ್ಪಿಕೊಳ್ಳ ಬೇಕಲ್ಲವೇ? ಏಕೆ ಇಂತಹ ದುರ್ಗತಿ ನಮಗೆ ಬಂದಿದೆ. ಈಗ ನಮ್ಮ ದೇಶದಲ್ಲಾಗುತ್ತಿರುವಂತೆ ವಿದೇಶಗಳಲ್ಲಿ ಪದವಿ ಪಡೆದವರಲ್ಲಿ ಎಷ್ಟು ವಿದ್ಯಾರ್ಥಿಗಳು ನಮ್ಮ ದೇಶಕ್ಕೆ ಉನ್ನತ ವ್ಯಾಸಂಗಕ್ಕಾಗಿ ಬರುತ್ತಾರೆ? ಅಂತಹ ವಿಶೇಷ ಶಿಕ್ಷಣ ನೀಡುವ ವ್ಯವಸ್ಥೆಯೇ ನಮ್ಮಲ್ಲಿ ಲ್ಲವೇ? ಇಷ್ಟೊಂದು ಹಣ ಖರ್ಚುಮಾಡಿ ಸ್ಥಾಪಿಸಿ ರುವ ಐಐಟಿಗಳು ಏಕೆ ವಿದೇಶೀ ವಿದ್ಯಾರ್ಥಿಗಳನ್ನು ಆ ಮಟ್ಟಿಗೆ ಆಕರ್ಷಿಸುತ್ತಿಲ್ಲ?

ಈ ಮಾತುಗಳಲ್ಲಿ ಕೇವಲ ಇಂಜಿನಿಯರಿಂಗ್ ವಿಭಾಗಕ್ಕೆ ಮಾತ್ರ ಸೇರಿದ್ದಲ್ಲ. ಅದು ವೈದ್ಯಕೀಯ ಕ್ಷೇತ್ರವಾಗಿರಬಹುದು, ಎಂ.ಬಿ.ಎ., ಇತರೆ ಪದವಿ ಗಳಾಗಿರಬಹುದು. ಈಗಲೂ ಹೆಚ್ಚಿನ ವಿದ್ಯಾಭ್ಯಾಸ ಕ್ಕಾಗಿ ವಿದೇಶಕ್ಕೆ ಹೋಗಿ ಬಂದ ವೈದ್ಯರು, ತಮ್ಮ ಪದವಿಯ ಜೊತೆಗೆ ಆ ದೇಶದ ಹೆಸರನ್ನೂ ಹಾಕಿ ಕೊಳ್ಳುತ್ತಾರೆ. ಅದೊಂದು ರೀತಿಯ ಹೆಚ್ಚು ಗಾರಿಕೆ. ಹಾಗಾದರೆ ನಮ್ಮ ವೈದ್ಯಕೀಯ ಶಿಕ್ಷಣವೂ ಉನ್ನತ ಮಟ್ಟದಲ್ಲಿಲ್ಲವೇ? ನಮ್ಮ ದೇಶದ ಎಂ.ಬಿ.ಎ ಇತರೆ ದೇಶಗಳ ಮಟ್ಟದಲ್ಲಿಲ್ಲವೇ? ಇದ್ದಿದ್ದರೆ ಇಷ್ಟೊಂದು ವಿದ್ಯಾರ್ಥಿಗಳು ಬೇರೆ ದೇಶಕ್ಕೆ ಉನ್ನತ ಶಿಕ್ಷಣಕ್ಕೆಂದು ಏಕೆ ಹೋಗುತ್ತಿದ್ದರು? ಯೋಚಿಸ ಬೇಡವೇ? ಹಾಗಿದ್ದರೆ ಇಷ್ಟು ವರ್ಷಗಳಲ್ಲಿ ರಚನೆ ಯಾದ ಶಿಕ್ಷಣದ ಬಗೆಗಿನ ಆಯೋಗಗಳು ಈ ಬಗ್ಗೆ ಏಕೆ ಗಮನಹರಿಸಲಿಲ್ಲ? ಅದು ಕೇವಲ ಔಪಚಾರಿ ಕತೆಗಷ್ಟೇ ಸೀಮಿತವಾಯಿತೇ? ಅಂದರೆ ಇಂದಿಗೂ ನಮಗೆ ಯಾವ ರೀತಿಯ ಶಿಕ್ಷಣಬೇಕು ಎಂಬುದೇ ನಮಗೆ ತಿಳಿಯುತ್ತಿಲ್ಲವೇ?

ಮುಂದುವರಿಯುವುದು

Translate »