ಕೋವಿಡ್-19 ನಿಯಂತ್ರಣಕ್ಕೆ ಮುಂದಿನ ದಿನಗಳಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ
ಮೈಸೂರು

ಕೋವಿಡ್-19 ನಿಯಂತ್ರಣಕ್ಕೆ ಮುಂದಿನ ದಿನಗಳಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ

January 4, 2021

ಮೈಸೂರು,ಜ.3(ಎಂಟಿವೈ)- ಮೈಸೂರಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಮುಂದಿನ ಎರಡು ತಿಂಗಳವರೆಗೂ ಅಧಿಕಾರಿಗಳು ಮೈಮರೆಯದೇ ಕಟ್ಟೆಚ್ಚರದೊಂದಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸೂಚಿಸಿದ್ದಾರೆ.

ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಕೋವಿಡ್-19 ಹಾಗೂ ಇನ್ನಿತರ ವಿಷಯ ಕುರಿತಂತೆ ಭಾನು ವಾರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಾಹಿತಿ ಸಂಗ್ರಹಿಸಿದ ಬಳಿಕ ವ್ಯಾಕ್ಸಿನ್ ಬಂದಿದ್ದರೂ ಇನ್ನು 2-3 ತಿಂಗಳು ಮೈಮರೆಯದೇ ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ವಿವಿಧ ಇಲಾಖೆಗಳು ಪರಸ್ಪರ ಸಹಕಾರ, ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೈಸೂರಲ್ಲಿ ಪ್ರಸ್ತುತ ಕೋವಿಡ್-19 ನಿರ್ವಹಣೆ ಹಾಗೂ ನಿಯಂ ತ್ರಣಕ್ಕೆ ಕೈಗೊಂಡಿರುವ ಕ್ರಮ ಉತ್ತಮವಾಗಿದೆ. ಈಗಾಗಲೇ ವ್ಯಾಕ್ಸಿನ್ ಡ್ರೈ ರನ್ ನಡೆಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಏನಾದರೂ ಲೋಪದೋಷ ಕಂಡುಬಂದಿದ್ದರೆ ತಿಳಿಸಬೇಕು. ಮುಂದಿನ ದಿನ ಗಳಲ್ಲಿ ವ್ಯಾಕ್ಸಿನ್ ಹಾಕಲು ಏನು ಕ್ರಮ ಕೈಗೊಳ್ಳುತ್ತೀರಾ? ದಿನಕ್ಕೆ ಎಷ್ಟು ಮಂದಿಗೆ ವ್ಯಾಕ್ಸಿನ್ ಕೊಡಲು ಸಾಧ್ಯ? ಎಂಬುದರ ಬಗ್ಗೆ ತಿಳಿಸಿ, ಸಮಸ್ಯೆಗಳಿದ್ದರೆ ಪಟ್ಟಿ ಮಾಡಿ ಕಳಿಸಿ, ಅದನ್ನು ನಿವಾರಣೆ ಮಾಡಲು ಕ್ರಮ ಕೈಗೊಳ್ಳುತ್ತೇವೆ. ವ್ಯಾಕ್ಸಿನ್ ಬಂದಾಗ ಅವುಗಳನ್ನು ಸುರಕ್ಷಿತವಾಗಿಡಲು ಯಾವ ತರ ಸಿದ್ಧತೆ
ಮಾಡಿಕೊಂಡಿದ್ದೀರಾ? ಎಂದು ಪ್ರಶ್ನಿಸಿ, ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದರು.

ಇದುವರೆಗೆ ಯಶಸ್ವಿಯಾಗಿ ಕೈಗೊಂಡಿರುವ ಕ್ರಮದ ಬಗ್ಗೆ ಮೆಚ್ಚುಗೆ ಇದೆ. ಚೆನ್ನಾಗಿ ನಿಭಾಯಿಸಿದ್ದೀರಾ. ಮುಂದಿನ ದಿನಗಳಲ್ಲೂ ಇನ್ನಷ್ಟು ಉತ್ತಮ ಕಾರ್ಯ ಕೈಗೊಳ್ಳುವ ಅವಶ್ಯಕತೆ ಇದೆ. ಎರಡು ಡೋಸ್ ವ್ಯಾಕ್ಸಿನ್ ಹಾಕಬೇಕಾಗಿರುವುದರಿಂದ ಹೆಚ್ಚಿನ ಸಮಯ ಬೇಕಾಗುತ್ತದೆ. ಇದನ್ನು ಎಲ್ಲರೂ ಮನಗಂಡು ಕೆಲಸ ಮಾಡಬೇಕು. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಎಲ್ಲೆಡೆ ಗುಂಪುಗೂಡದೆ, ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯಗೊಳಿಸಬೇಕು. ಈ ನಿಟ್ಟಿನಲ್ಲಿ ಪೊಲೀಸರು ಕಾರ್ಯಚರಣೆ ಮಾಡಬೇಕು. ಇಲ್ಲಿಯವರೆಗೆ ಕೈಗೊಂಡಿರುವ ಕ್ರಮಗಳನ್ನು ಮುಂದುವರೆಸಿ, ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್, ಜಿಲ್ಲಾಧಿಕಾರಿ ರೋಹಿಣಿ ಸಿಂದೂರಿ, ಜಿ.ಪಂ ಸಿಇಓ ಬಿ.ಎ.ಪರಮೇಶ್, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಜಿಲ್ಲಾ ಆರೋ ಗ್ಯಾಧಿಕಾರಿ ಡಾ.ಟಿ.ಅಮರನಾಥ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಎಸ್‍ಪಿ ಸಿ.ಬಿ.ರಿಷ್ಯಂತ್ ಪಾಲ್ಗೊಂಡಿದ್ದರು. ಸಭೆಗೂ ಮುನ್ನ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಲಿಂಗರಾಜು ಅವರೊಂದಿಗೆ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದರು. ಉಪವಿಭಾಗಾಧಿಕಾರಿ ಡಾ.ಎನ್.ಸಿ.ವೆಂಕಟರಾಜು, ಕಾರ್ಮಿಕ ಇಲಾಖೆ ಡಿ.ಸಿ.ತಮ್ಮಣ್ಣ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಮೈಸೂರಲ್ಲಿ ಕೈಗಾರಿಕಾ ಪ್ರಗತಿ ಆಗಿಲ್ಲ
ಮೈಸೂರು,ಜ.3(ಎಂಟಿವೈ)-ಮೈಸೂರು ಜಿಲ್ಲೆಯಲ್ಲಿ ನಿರೀಕ್ಷಿ ಸಿದ ಪ್ರಮಾಣದಲ್ಲಿ ಕೈಗಾರಿಕಾ ಅಭಿವೃದ್ಧಿ ಆಗಿಲ್ಲ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ವಿಷಾ ದಿಸಿದ್ದಾರೆ. ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಭಾನು ವಾರ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಲಿಂಗರಾಜು ಅವರಿಂದ ಜಿಲ್ಲೆಯ ಕೈಗಾರಿಕಾ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದ ಬಳಿಕ ಮಾತನಾಡಿದ ಅವರು, ಮೈಸೂರಲ್ಲಿ ಕಳೆದ 20-25 ವರ್ಷದಿಂದಲೂ ಕೈಗಾರಿಕಾ ಅಭಿವೃದ್ಧಿ ಆಗಿಲ್ಲದಂತೆ ಕಂಡು ಬರುತ್ತಿದೆ. ರಸ್ತೆ, ರೈಲು ಸಂಪರ್ಕ ಉತ್ತಮವಾಗಿದೆ. ವಿಮಾನ ಸಂಪರ್ಕ ಸುಧಾರಿಸುತ್ತಿದ್ದರೂ ಬೃಹತ್ ಕೈಗಾರಿಕೆಗಳು ಸ್ಥಾಪನೆಯಾಗದೇ ಇರುವುದು ವಿಷಾದನೀಯ ಎಂದರು.

ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಲಿಂಗರಾಜು ಮುಖ್ಯ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ 11 ಕೈಗಾರಿಕಾ ಪ್ರದೇಶವಿದ್ದು, 5 ಕೈಗಾರಿಕಾ ವಸಾಹತು(ಎಸ್ಟೇಟ್) ಇದೆ. ಅದರಲ್ಲಿ ಹೆಬ್ಬಾಳು, ಹೂಟಗಳ್ಳಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಆಗಿದೆ. ತಾಂಡ್ಯ, ಹಿಮ್ಮಾವು, ಅಡಕನಹಳ್ಳಿ ಕೈಗಾರಿಕಾ ಪ್ರದೇಶ ಸೇರಿದಂತೆ ಇನ್ನಿತರ ಕೈಗಾರಿಕಾ ಪ್ರದೇಶ ಅಭಿವೃದ್ಧಿಯತ್ತ ಸಾಗುತ್ತಿದೆ. ಹಿಮ್ಮಾವು ಪ್ರದೇಶದಲ್ಲಿ ಏಷ್ಯನ್ ಪೇಯಿಂಟ್ಸ್ ಬಂದಿರುವುದರಿಂದ ಆ ಕಾರ್ಖಾನೆಗೆ ಪೂಕರವಾಗಿರುವ 8 ಕಾರ್ಖಾನೆಗಳು ಆರಂಭವಾಗುತ್ತಿದೆ. ಟಿವಿಎಸ್ ಕಾರ್ಖಾನೆಗೆ ಅವಲಂಭಿಸಿರುವ 3 ಕಾರ್ಖಾನೆ ಸ್ಥಾಪನೆಯಾಗಿವೆ. ನಂಜಗೂಡು ವಲಯದಲ್ಲಿ ಕೈಗಾರಿಕಾ ಸ್ಥಾಪನೆಗೆ 2029 ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ರಸ್ತೆ ಹಾಗೂ ಇನ್ನಿತರ ಉದ್ದೇಶಕ್ಕೆ ಬಳಸಿಕೊಳ್ಳಲು ಮೀಸಲಿಡುವ ಭೂಮಿ ಹೊರತುಪಡಿಸಿ 1500 ಎಕರೆ ಭೂಮಿ ಕೈಗಾರಿಕಾ ಸ್ಥಾಪನೆಗೆ ಲಭ್ಯವಿದೆ. ಹಿಮ್ಮಾವು ಪ್ರದೇಶದಲ್ಲಿ 500 ಎಕರೆ ಭೂಮಿ ಯಾರಿಗೂ ಅಲಾರ್ಟ್ ಮಾಡಿಲ್ಲ ಎಂದು ವಿವರಿಸಿದರು.

ನೌಕರರ ಸಮಸ್ಯೆಗೆ ಬಗ್ಗೆ ಮಾಹಿತಿ ಪಡೆದರು: ಹಿಮ್ಮಾವು ಪ್ರದೇಶದಲ್ಲಿರುವ ಏಷ್ಯನ್ ಪೇಂಟ್ಸ್ ಕಾರ್ಖಾನೆ ನಿರ್ಮಿಸಲು ಭೂಮಿ ನೀಡಿರುವ ರೈತರಿಗೆ ಆ ಸಂಸ್ಥೆಯಲ್ಲೇ ಉದ್ಯೋಗ ನೀಡುವಂತೆ ಆಗ್ರಹಿಸಿ ರೈತ ಸಂಘಟನೆ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ, ರೀಡ್ ಅಂಡ್ ಟೇಲರ್ ಕಾರ್ಖಾನೆಯ ಸಮಸ್ಯೆ, ಐಟಿಸಿ ನೌಕರರ ಸಮಸ್ಯೆ ಸೇರಿದಂತೆ ವಿವಿಧ ಕೈಗಾರಿಕೆಗಳಲ್ಲಿನ ನೌಕರರ ಸಮಸ್ಯೆ ಬಗ್ಗೆ ಮಾಹಿತಿ ಪಡೆದರು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಏಷ್ಯನ್ ಪೇಂಟ್ಸ್ ಕಾರ್ಖಾನೆ ಸಂಬಂಧಿಸಿದಂತೆ 42 ದಿನದಿಂದ ಅಹೋರಾತ್ರಿ ನಡೆಸಲಾಗುತ್ತಿದೆ. ಕಾರ್ಖಾನೆ ಆಡಳಿತ ಮಂಡಳಿ ನಿಲುವು, ರೈತ ಸಂಘಟನೆಗಳ ಬೇಡಿಕೆ ಬಗ್ಗೆ ಮಾಹಿತಿ ನೀಡಿದರೆ, ಇತರೆ ಸಮಸ್ಯೆ ಕುರಿತಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳು ವಿವರಣೆ ನೀಡಿದರು. ಎಲ್ಲವನ್ನು ಆಲಿಸಿದ ಮುಖ್ಯ ಕಾರ್ಯದರ್ಶಿಗಳು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

 

 

Translate »