ತಲಕಾಡಿನ ನಾಗಾಭರಣರದು ಬೆಟ್ಟದಷ್ಟು ಸಾಧನೆ: ಜಿಟಿಡಿ ಪ್ರಶಂಸೆ
ಮೈಸೂರು

ತಲಕಾಡಿನ ನಾಗಾಭರಣರದು ಬೆಟ್ಟದಷ್ಟು ಸಾಧನೆ: ಜಿಟಿಡಿ ಪ್ರಶಂಸೆ

January 24, 2021

ಮೈಸೂರು, ಜ.23(ವೈಡಿಎಸ್)- ತಲಕಾಡು ಎಂಬ ಪುಟ್ಟಹಳ್ಳಿಯಿಂದ ಬಂದ ಟಿ.ಎಸ್.ನಾಗಾ ಭರಣ, ಇಂದು ಬೆಟ್ಟದಷ್ಟು ಸಾಧನೆ ಮಾಡಿದ್ದಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ಪ್ರಶಂಸಿಸಿದರು.

ವಿಸ್ಮಯ ಬುಕ್ ಹೌಸ್ ಹೊರತಂದಿರುವ, ಗುಬ್ಬಿಗೂಡು ರಮೇಶ್ ಮತ್ತು ಎನ್.ಕೆ.ಪದ್ಮನಾಭ ಸಂಪಾದಿಸಿರುವ ‘ನಾಗಾಭರಣ ಸಿನಿಮಾವರಣ’ ಕೃತಿಯನ್ನು ಮೈಸೂರಿನ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ಬಿಡುಗಡೆಗೊಳಿಸಿದರು. ನಾಗಾಭರಣ ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ, ನಿರ್ಮಾಪಕ, ನಟ ಮತ್ತು ರಂಗಕರ್ಮಿ. ಅಖಿಲ ಭಾರತ ಮಟ್ಟ ದಲ್ಲಿ ಹೆಸರಾಗಿದ್ದಾರೆ. ಅವರ 40 ವರ್ಷಗಳ ವೃತ್ತಿ ಜೀವನದಲ್ಲಿ 36 ಚಿತ್ರಗಳನ್ನು ನಿರ್ದೇಶಿಸಿದ್ದು, 10 ಚಿತ್ರಗಳಿಗೆ ರಾಷ್ಟ್ರೀಯ, 23 ಚಿತ್ರಗಳಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಬಂದಿವೆ. 8 ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಭಾರತೀಯ ಪನೋ ರಮಾಗೆ ಆಯ್ಕೆಯಾಗಿವೆ ಎಂದು ಪ್ರಶಂಸಿಸಿದರು.

ಕನ್ನಡ ರಂಗಭೂಮಿಗೆ ನಾಗಾಭರಣ ಅವರ ಕೊಡುಗೆ ಅಪಾರ. ಹೆಸರಾಂತ ರಂಗತಜ್ಞ, ಪದ್ಮಶ್ರೀ ಬಿ.ವಿ.ಕಾರಂತ ಅವರ ಶಿಷ್ಯರಾಗಿ ತರಬೇತಿ ಪಡೆದು ರಂಗಭೂಮಿಯಲ್ಲಿ ತೊಡಗಿಸಿಕೊಂಡು 36 ನಾಟಕ ಗಳನ್ನು ಪ್ರದರ್ಶಿಸಿದ್ದಾರೆ. ಮೊದಲ ಬಾರಿಗೆ ಕಿರುತೆರೆ ಯಲ್ಲಿ ದೂರದರ್ಶನಕ್ಕೆ ಕನ್ನಡ ಧಾರಾವಾಹಿ ನಿರ್ಮಿಸಿ-ನಿರ್ದೇಶಿಸಿದ ಹಿರಿಮೆ ಅವರದು ಎಂದರು.

ಪ್ರತಿಷ್ಠಿತ ಹುದ್ದೆ: ನಾಗಾಭರಣ ಅವರು ಅನೇಕ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ್ದು, ರಾಜ್ಯ ಚಲನಚಿತ್ರ ಮಂಡಳಿ ಅಧ್ಯಕ್ಷರೂ ಆಗಿದ್ದರು. ಪ್ರಸ್ತುತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಗಿದ್ದಾರೆ. ಇದು ಕ್ಯಾಬಿನೆಟ್ ದರ್ಜೆಯದ್ದಾಗಿದೆ ಎಂದರು. `ನಾಗಾಭರಣ ಸಿನಿಮಾವರಣ’ ಕನ್ನಡ ಸಿನಿರಂಗದಲ್ಲಿ ಹೊಸ ಪ್ರಯೋಗ. ಇಂಥದ್ದು ಹೆಚ್ಚು ಆಗಬೇಕು ಎಂದರು.

ನಟರ ನಿರ್ದೇಶಕ: ನಟ ವಿಜಯ ರಾಘವೇಂದ್ರ ಮಾತನಾಡಿ, `ಚಿನ್ನಾರಿ ಮುತ್ತ’ ಸಿನಿಮಾವನ್ನು ನನ್ನ ಜೀವನದಲ್ಲಿ ಮರೆಯಲಾಗದು. ನನಗೆಷ್ಟೇ ವಯ ಸ್ಸಾಗಿದ್ದರೂ ಕೆಲವರು ಇಂದಿಗೂ `ಚಿನ್ನಾರಿ ಮುತ್ತ’ ಎಂದೇ ಗುರುತಿಸುತ್ತಾರೆ. ಆ ಸಿನಿಮಾದಲ್ಲಿ ನಾಗಾ ಭರಣ ಅವರು ನೀಡಿದ ಮಾರ್ಗದರ್ಶನ, ಕೊಟ್ಟ ಉಳಿಪೆಟ್ಟಿನಿಂದ ಉತ್ತಮ ಕಲಾವಿದನಾಗಿ ರೂಪು ಗೊಳ್ಳಲು ಸಾಧ್ಯವಾಯಿತು. ಸಿನಿಮಾ ಕಲಾವಿದರು, ತಂತ್ರಜ್ಞರನ್ನು ಅವರು ನೋಡಿಕೊಂಡ ರೀತಿ ಬೆರಗು ಮೂಡಿಸುತ್ತದೆ. ಸ್ವಲ್ಪವೂ ಕೋಪ ಮಾಡಿಕೊಳ್ಳದೆ ತಾಳ್ಮೆಯಿಂದ, ತಾವೇ ಅಭಿನಯಿಸಿ ನಟನೆ ಹೇಳಿ ಕೊಡುತ್ತಿದ್ದರು ಎಂದು ನೆನಪಿಸಿಕೊಂಡರು.

‘ನಟನೆ, ನಡವಳಿಕೆ, ಕೆಲಸವನ್ನು ಯಾವ ರೀತಿ ಖುಷಿಯಿಂದ ಮಾಡಬೇಕು ಎಂಬ ವಿಚಾರದಲ್ಲಿ ಹಲವಾರು ವಿಷಯಗಳನ್ನು ನಾಗಾಭರಣ ಅವರ ಒಡನಾಟದಿಂದ ಕಲಿತಿದ್ದೇನೆ. ನಾನು ಈಗಲೂ ಅವರ ಶಿಷ್ಯನಾಗಿಯೇ ಇದ್ದೇನೆ’ ಎಂದರು.

ಪಠ್ಯ ಪುಸ್ತಕಗಳಾಗಿವೆ: `ಜನುಮದ ಜೋಡಿ’ ಮತ್ತು `ನಾಗಮಂಡಲ’ ಚಿತ್ರಗಳು ಗುಜರಾತ್ ಮತ್ತು ರಷ್ಯಾ ಚಲನಚಿತ್ರ ಅಕಾಡೆಮಿ ಮತ್ತು ಶಾಲೆಗಳಲ್ಲಿ ಪಠ್ಯ ಪುಸ್ತಕಗಳಾಗಿವೆ. ಅವರ ಸಿನಿಮಾದಲ್ಲಿನ ಶಕ್ತಿ ಏನೆಂಬುದು ಇದರಿಂದಲೇ ತಿಳಿಯುತ್ತದೆ ಎಂದರು.

50 ವರ್ಷದ ಗೆಳೆತನ: ಹಿರಿಯ ನಟ ಸುಂದರ್ ರಾಜ್ ಮಾತನಾಡಿ, ನನ್ನ ಮತ್ತು ನಾಗಾಭರಣ ಇಬ್ಬರದೂ 50 ವರ್ಷ ಮೀರಿದ ಗೆಳೆತನ. `ನನ್ನ ಮತ್ತು ನಾಗಾಭರಣ ಗುರಿ-ಗುರು ಒಂದೇ ಆಗಿತ್ತು. ರಂಗ ಭೀಷ್ಮ ಬಿ.ವಿ.ಕಾರಂತರ ಗರಡಿಯಲ್ಲಿ ಒಟ್ಟಿಗೆ ಬೆಳೆ ದೆವು. ನಾಗಾಭರಣ ವಿಶೇಷ ಪ್ರತಿಭಾನ್ವಿತ. ಅವರು ಉತ್ತಮ ಚಿತ್ರಗಳನ್ನು ಮಾಡಿದ್ದಾರೆ. ಹಾಗಾಗಿ ಕಾರಂತರನ್ನು ನಾಗಾಭರಣ ಅವರಲ್ಲಿ ಕಾಣಲು ಸಾಧ್ಯ ಎಂದರು.

ಹಿಂದೆ ರಂಗಭೂಮಿ, ಸಿನಿಮಾದ ಟೈಟಲ್‍ಗಳು ಒಂದೊಂದು ಮುತ್ತುಗಳಂತಿದ್ದವು. ಆದರೆ, ಇಂದಿನ ಸಿನಿಮಾ ಟೈಟಲ್‍ಗಳನ್ನು ನೋಡಿದರೆ ದೇವರೇ ಕಾಪಾಡಬೇಕು. ಕನ್ನಡ ಎಂದರೆ ಸಂಸ್ಕøತಿ. ಇದನ್ನು ಪ್ರಪಂಚದಾದ್ಯಂತ ಪಸರಿಸಬೇಕು ಎಂದ ಅವರು, ನನಗೆ ಸಿನಿಮಾ ಮಾಡುವಷ್ಟು ಶಕ್ತಿ ಇಲ್ಲ. ಆದರೆ, ನಾಗಾಭರಣ ನಾಟಕ ನಿರ್ದೇಶಿಸಿದರೆ ಅದಕ್ಕೆ ನಾನೇ ದುಡ್ಡು ಹಾಕುವೆ. ಮೈಸೂರಿನಲ್ಲೇ ಮೊದಲ ಪ್ರದ ರ್ಶನ ಕಾಣುವಂತೆ ಮಾಡುವೆ’ ಎಂದರು

ಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ, ಅವರ ಪತ್ನಿ ನಾಗಿಣಿ ಭರಣ, ಕಸಾಪ ಜಿಲ್ಲಾಧ್ಯಕ್ಷ ವೈ.ಡಿ. ರಾಜಣ್ಣ, ವಿಸ್ಮಯ ಬುಕ್ ಹೌಸ್‍ನ ಪ್ರಕಾಶ್ ಚಿಕ್ಕಪಾಳ್ಯ, ಪತ್ರಕರ್ತ ಅಂಶಿಪ್ರಸನ್ನಕುಮಾರ್, ಕೃತಿಕರ್ತೃ ಹಾಗೂ ಅಂಕಣಕಾರ ಡಾ.ಗುಬ್ಬಿಗೂಡು ರಮೇಶ್, ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿ, ಮಾಜಿ ಶಾಸಕ ಬಾಲರಾಜ್ ಮತ್ತಿತರರಿದ್ದರು.

Translate »