ನವದೆಹಲಿ/ಚೆನ್ನೈ, ಏ. 17- ತಮಿಳು ನಟ,ಹಾಸ್ಯ ಕಲಾವಿದ ವಿವೇಕ್ ತೀವ್ರ ಹೃದಯಾಘಾತಕ್ಕೀಡಾಗಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ನಸುಕಿನ ಜಾವ ಮೃತಪಟ್ಟಿದ್ದು ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ನಾಯಕರು, ಕಲಾವಿದರು ಕಂಬನಿ ಮಿಡಿದಿದ್ದಾರೆ.
ಖ್ಯಾತ ನಟ ವಿವೇಕ್ ಅಕಾಲಿಕ ನಿಧನವು ಅನೇಕರನ್ನು ದುಃಖಿತಗೊಳಿ ಸಿದೆ. ಅವರ ಹಾಸ್ಯಪ್ರಜ್ಞೆ ಮತ್ತು ಬುದ್ಧಿವಂತಿಕೆಯ ಸಂಭಾಷಣೆ ಗಳು ಜನರನ್ನು ರಂಜಿಸಿದವು. ಚಲನಚಿತ್ರ ಜೀವನದಲ್ಲಿ, ಪರಿಸರ ಮತ್ತು ಸಮಾಜದ ಬಗೆಗಿನ ಅವರ ಕಾಳಜಿಯು ಅಚ್ಚಳಿಯದ್ದು. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಈ ಸಂದರ್ಭದಲ್ಲಿ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಧಾನ ಮಂತ್ರಿ ಮೋದಿ ಹೇಳಿದ್ದಾರೆ.
ಅವರ ಹಠಾತ್ ನಿಧನಕ್ಕೆ ಇಡೀ ದಕ್ಷಿಣ ಭಾರತ ಚಿತ್ರರಂಗ ಕೂಡ ಕಣ್ಣೀರು ಹಾಕಿದೆ. ಸೂಪರ್ ಸ್ಟಾರ್ ರಜನಿಕಾಂತ್, ಚಿನ್ನಕಲೈವನರ್ ಎಂದೇ ಜನಪ್ರಿಯರಾಗಿದ್ದ ವಿವೇಕ್ ಅವರ ನಿಧನದಿಂದ ತುಂಬಾ ದುಃಖವಾಗಿದೆ. ‘ಶಿವಾಜಿ’ ಚಿತ್ರದ ಚಿತ್ರೀಕರಣ ವೇಳೆ ಅವರೊಂದಿಗೆ ಕಳೆದ ಪ್ರತಿ ಕ್ಷಣ ನೆನಪಿನಲ್ಲಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ. ಖ್ಯಾತ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್, ವಿವೇಕ್ ಅವರ ಜೊತೆ ಮುಂಬರುವ ಚಿತ್ರ ಇಂಡಿಯನ್ 2ನಲ್ಲಿ ನಟಿಸುತ್ತಿದ್ದಾರೆ. ನಟನ ಕೆಲಸ ನಟಿಸುವುದಕ್ಕೆ ಕೊನೆಯಾಗುವುದಿಲ್ಲ.
ನಟಿಸುವುದಕ್ಕಿಂತ ಆಚೆ ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡಬೇಕು ಎಂಬ ಬಲವಾದ ನಂಬಿಕೆ ವಿವೇಕ್‍ಗಿತ್ತು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ತತ್ವಗಳಲ್ಲಿ ಬಲವಾದ ನಂಬಿಕೆಯಿಟ್ಟವರು. ವಿವೇಕ್ ಹಸಿರು ಕ್ರಾಂತಿಯ ಹೋರಾಟಗಾರ. ಅವರ ಸಾವು ನಿಜಕ್ಕೂ ದೊಡ್ಡ ನಷ್ಟ ಎಂದು ಬರೆದಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್, ನೀವು ನಮ್ಮನ್ನು ಇಂದು ಅಗಲಿ ಹೋದಿರಿ ಎಂದು ನಂಬಲೇ ಸಾಧ್ಯವಾಗುತ್ತಿಲ್ಲ. ದಶಕಗಳ ಕಾಲ ನಮ್ಮನ್ನು ರಂಜಿಸಿ ದವರು ನಿಮ್ಮ ಪರಂಪರೆಯನ್ನು ಇಂದು ಬಿಟ್ಟು ಹೋಗಿದ್ದೀರಿ ಎಂದು ಬರೆದಿದ್ದಾರೆ. ಖ್ಯಾತ ನಟ ಪ್ರಕಾಶ್ ರಾಜ್, ಪ್ರೀತಿಯ ಗೆಳೆಯಾ, ಇಷ್ಟು ಬೇಗ ನಮ್ಮನ್ನೆಲ್ಲಾ ಬಿಟ್ಟು ಹೋದೆಯಾ, ನಿಮ್ಮ ಆಲೋಚನೆಗಳು ಮತ್ತು ಗಿಡಗಳನ್ನು ನೆಟ್ಟಿದ್ದಕ್ಕೆ ಧನ್ಯವಾದಗಳು, ನಿಮ್ಮ ಬುದ್ಧಿವಂತಿಕೆ, ಹಾಸ್ಯಪ್ರಜ್ಞೆಯಿಂದ ಇಷ್ಟು ವರ್ಷಗಳ ಕಾಲ ರಂಜಿಸಿದ್ದಕ್ಕೆ ಧನ್ಯವಾದಗಳು, ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.