ಇಂದಿನಿಂದ ರಂಗಾಯಣದಲ್ಲಿ ‘ಗ್ರೀಷ್ಮ ರಂಗೋತ್ಸವ’ ಸಿಜಿಕೆ ನೆನಪಿನ ಹವ್ಯಾಸಿ ನಾಟಕೋತ್ಸವ
ಮೈಸೂರು

ಇಂದಿನಿಂದ ರಂಗಾಯಣದಲ್ಲಿ ‘ಗ್ರೀಷ್ಮ ರಂಗೋತ್ಸವ’ ಸಿಜಿಕೆ ನೆನಪಿನ ಹವ್ಯಾಸಿ ನಾಟಕೋತ್ಸವ

May 26, 2018

ಮೈಸೂರು: ಮೈಸೂರಿನ ರಂಗಾಯಣದ ಭೂಮಿಗೀತದಲ್ಲಿ ನಾಳೆ(ಮೇ.26)ಯಿಂದ ಜೂನ್ 24ರವರೆಗೆ ಸಿಜಿಕೆ ನೆನಪಿನ ಹವ್ಯಾಸಿ ನಾಟಕೋತ್ಸವ `ಗ್ರೀಷ್ಮ ರಂಗೋತ್ಸವ’ ನಡೆಯಲಿದ್ದು, ರಾಜ್ಯದ ಬೇರೆ ಹವ್ಯಾಸಿ ರಂಗ ತಂಡಗಳು ವಿಭಿನ್ನ ಅಭಿರುಚಿವುಳ್ಳ ನಾಟಕ ಪ್ರದರ್ಶಿಸಲಿವೆ ಎಂದು ರಂಗಾಯಣದ ನಿರ್ದೇಶಕಿ ಭಾಗೀರಥಿಬಾಯಿ ಕದಂ ತಿಳಿಸಿದ್ದಾರೆ.

ರಂಗಾಯಣದ ಆವರಣದಲ್ಲಿರುವ ಶ್ರೀರಂಗದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುರೂಪಿ, ಚಿಣ್ಣರಮೇಳದ ನಂತರ ಗ್ರೀಷ್ಮ ರಂಗೋತ್ಸವ ನಡೆಸಲಾಗುತ್ತದೆ. ರಂಗಭೂಮಿಯನ್ನು ಜನಪರ ಚಳುವಳಿಯನ್ನಾಗಿ ರೂಪಿಸಿದ ರಂಗ ಚೇತನ ಪೆÇ್ರ.ಸಿ.ಜಿ. ಕೃಷ್ಣಸ್ವಾಮಿ ಅವರ ಹೆಸರಿನಲ್ಲಿ ರಂಗಾಯಣದ ವತಿಯಿಂದ ಪ್ರತಿ ವರ್ಷ ಸಿಜಿಕೆ ಹವ್ಯಾಸಿ ನಾಟಕೋತ್ಸವ ನಡೆಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಸಾಲಿನ ಗ್ರೀಷ್ಮ ನಾಟಕೋತ್ಸವ ನಾಳೆಯಿಂದ ಜೂನ್ 24ರವರೆಗೆ ನಡೆಯಲಿದೆ. ಈ ಹಿಂದೆ ಗ್ರೀಷ್ಮ ನಾಟಕೋತ್ಸವ ನಾಟಕಗಳು ಭಾನುವಾರದಂದು ಮಾತ್ರ ಪ್ರದರ್ಶನಗೊಳ್ಳುತ್ತಿದ್ದವು. ಈ ಬಾರಿ ಶನಿವಾರ ಮತ್ತು ಭಾನುವಾರ ಎರಡು ದಿನವೂ ಏರ್ಪಡಿಸಲಾಗಿದೆ. ಹೀಗೆ 10 ನಾಟಕಗಳು ಪ್ರದರ್ಶನಗೊಳ್ಳಲಿವೆ.

ಹವ್ಯಾಸಿ ತಂಡಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಗ್ರೀಷ್ಮ ನಾಟಕೋತ್ಸವ ನಡೆಸಲಾಗುತ್ತದೆ. ಈ ಬಾರಿ 74 ಹವ್ಯಾಸಿ ನಾಟಕ ತಂಡಗಳು ಅರ್ಜಿ ಸಲ್ಲಿಸಿದ್ದವು. ಅವುಗಳಲ್ಲಿ ಅತ್ಯುತ್ತಮ ತಂಡಗಳನ್ನು ವಿಭಾಗೀಯ ಮಟ್ಟದಲ್ಲಿ ಆಯ್ಕೆ ಮಾಡಲಾಗಿದೆ. ಈ ಹಿಂದೆ ಹವ್ಯಾಸಿ ತಂಡಗಳು ನಾಟಕ ಪ್ರದರ್ಶಿಸಿದರೆ ರಂಗಾಯಣದ ವತಿಯಿಂದ ಗೌರವ ಧನ ಅಥವಾ ಸಂಭಾವನೆ ನೀಡುತ್ತಿರಲಿಲ್ಲ. ಆದರೆ ನಾಟಕ ವೀಕ್ಷಿಸುವುದಕ್ಕೆ ಬರುವವರಿಂದ ಸಂಗ್ರಹವಾಗುತ್ತಿದ್ದ ಪ್ರವೇಶ ಶುಲ್ಕದ ಹಣವನ್ನು ನೀಡಲಾಗುತ್ತಿತ್ತು. ಈ ಬಾರಿ ಎಲ್ಲಾ ಹವ್ಯಾಸಿ ತಂಡಗಳಿಗೂ ರಂಗಾಯಣದ ವತಿಯಿಂದ 20 ಸಾವಿರ ಗೌರವ ಧನ ನೀಡಲಾಗುತ್ತದೆ. ಅಲ್ಲದೆ ಬರುವ ಮತ್ತು ವಾಪಸ್ಸಾಗುವ ಖರ್ಚನ್ನು ರಂಗಾಯಣವೇ ಭರಿಸುತ್ತದೆ. ಎಲ್ಲಾ ನಾಟಕಗಳು ರಂಗಾಯಣ ಭೂಮಿಗೀತದಲ್ಲಿ ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.

ನಾಳೆ ಚಾಲನೆ: ನಾಳೆ ಸಂಜೆ 6ಕ್ಕೆ ರಂಗಾಯಣದ ಭೂಮಿಗೀತೆಯಲ್ಲಿ ಹಿರಿಯ ರಂಗಕರ್ಮಿ ಎಸ್.ಮಾಲತಿ ಸಾಗರ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಡಿ. ಭಾರತಿ ಭಾಗವಹಿಸಲಿದ್ದು, ನಿರ್ದೇಶಕಿ ಭಾಗೀರಥಿ ಬಾಯಿ ಕದಂ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಂಗಾಯಣದ ಜಂಟಿ ನಿರ್ದೇಶಕ ವಿ.ಎಸ್. ಮಲ್ಲಿಕಾರ್ಜುನಸ್ವಾಮಿ, ಸಂಚಾಲಕ ಸಂತೋಷ ಕುಮಾರ್ ಕುಸನೂರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಾಟಕೋತ್ಸವದ ಸಂಚಾಲಕ ಸಂತೋಷ ಕುಮಾರ್ ಕುಸನೂರು ಇದ್ದರು.

ನಾಟಕಗಳು: ಮೇ 26: ರಂದು ಮೈಸೂರಿನ ಇಂಡಿಯನ್ ಥಿಯೇಟರ್ ತಂಡದಿಂದ ಹೆಚ್.ಎಸ್. ಉಮೇಶ್ ನಿರ್ದೇಶನದ `ಭೀಮಣ್ಣನ ಮಗ’, ಮೇ 27: ಹೊಸನಗರದ ಥಿಯೇಟರ್ ಸಮುರಾಯ್ ತಂಡದಿಂದ ಪೆÇ್ರ.ಹೆಚ್.ಎಸ್.ಶಿವಪ್ರಕಾಶ್ ರಚನೆಯ, ಪಬಿತ್ರರಾಭಾ ನಿರ್ದೇಶನದ `ಮದುವೆ ಹೆಣ್ಣು’, ಜೂ. 2: ಕಲಬುರಗಿಯ ವಿಶ್ವರಂಗ ತಂಡದಿಂದ ಪ್ರಸನ್ನ ರಚನೆಯ, ವಿಶ್ವರಾಜ ಪಾಟೀಲ ನಿರ್ದೇಶನದ `ಕೊಂದವರ್ಯಾರು’, ಜೂ. 3: ಬೆಳಗಾವಿಯ ರಂಗಸಂಪದ ತಂಡದಿಂದ ಶಿರೀಶ್ ಜೋಷಿ ರಚನೆ, ನಿರ್ದೇಶನದ `ಗತಿ’, ಜೂ. 9: ಹೆಗ್ಗೋಡಿನ ಜನಮನದಾಟ ತಂಡದಿಂದ ಎಂ. ಗಣೇಶ್ ನಿರ್ದೇಶನದ `ಕುರುಕ್ಷೇತ್ರ’, ಜೂ. 10: ಸವದತ್ತಿಯ ರಂಗ ಆರಾಧನ ತಂಡದಿಂದ ಎಂ.ಎಸ್.ಕೆ. ಪ್ರಭು ರಚನೆಯ, ಜಯತೀರ್ಥ ಜೋಶಿ ನಿರ್ದೇಶನದ `ಗುಲಾಮನ ಸ್ವಾತಂತ್ರ್ಯ ಯಾತ್ರೆ’, ಜೂ. 16: ಮೈಸೂರಿನ ನಟನ ರಂಗತಂಡದಿಂದ ರವೀಂದ್ರನಾಥ ಠಾಗೋರ್ ರಚನೆಯ, ಡಾ. ಶ್ರೀಪಾದಭಟ್ ನಿರ್ದೇಶನದ `ಕೆಂಪು ಕಣಗಿಲೆ’, ಜೂ. 17: ಬೆಂಗಳೂರಿನ ಸಂಚಾರಿ ರಂಗತಂಡದಿಂದ ಎಸ್. ರಾಮನಾಥ ನಿರ್ದೇಶನದ `ರಂಗಜಂಗಮ’, ಜೂ. 23: ಬೆಂಗಳೂರಿನ ಹಸ್ಮಿ ಥಿಯೇಟರ್ ಪೆÇೀರಂನ ವತಿಯಿಂದ ಟಿ.ಹೆಚ್.ಲವಕುಮಾರ್ ರಚನೆಯ, ವಿಶಾಲ್‍ಪಾಟೀಲ್ ನಿರ್ದೇಶನದ `ಕಿಚ್ಚಿಲ್ಲದ ಬೇಗೆ’, ಜೂ. 24: ಬೆಂಗಳೂರು ಥಿಯೇಟರ್ ಕಲೆಕ್ಟೀವ್ ತಂಡದಿಂದ ವೆಂಕಟೇಶ್ ಪ್ರಸಾದ್ ಅವರ ರೂಪಾಂತರ, ನಿರ್ದೇಶನದ `ಒಂದು ಪ್ರೀತಿಯ ಕಥೆ’.

 

Translate »