ನಗುವನಹಳ್ಳಿ, ಬೋಗಾದಿ ಜನರ ನಿದ್ದೆಗೆಡಿಸಿರುವ ಚಿರತೆಗಳು
ಮೈಸೂರು

ನಗುವನಹಳ್ಳಿ, ಬೋಗಾದಿ ಜನರ ನಿದ್ದೆಗೆಡಿಸಿರುವ ಚಿರತೆಗಳು

May 26, 2018

ಮೈಸೂರು:  ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿಯಲ್ಲಿ ಚಿರತೆ ಸಾಕು ಪ್ರಾಣ ಗಳ ಬೇಟೆಯಾಡಿದ್ದು, ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಇತ್ತ ಮೈಸೂರು ತಾಲೂಕಿನ ಜಟ್ಟಿಹುಂಡಿ, ಬೋಗಾದಿಯಲ್ಲಿ ಎರಡು ಮರಿಗಳೊಂದಿಗೆ ಚಿರತೆ ಕಾಣ ಸಿಕೊಳ್ಳುವ ಮೂಲಕ ಆತಂಕ ಉಂಟು ಮಾಡಿದೆ.

ಕಳೆದ ಎರಡು ವಾರದಿಂದ ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿಯಲ್ಲಿ ಚಿರತೆ ಉಪಟಳ ನೀಡುತ್ತಿದ್ದು, ಗ್ರಾಮಸ್ಥರ ಮೇಕೆ, ಕುರಿ, ನಾಯಿ, ಬೆಕ್ಕು ಹಾಗೂ ಹಂದಿಯನ್ನು ಬೇಟೆಯಾಡಿದೆ. ಗ್ರಾಮದ ನಿವಾಸಿ ಅಣ್ಣಯ್ಯ ಅವರಿಗೆ ಸೇರಿದ ಬೆಕ್ಕು ಮತ್ತು ನಾಯಿಯನ್ನು ಬಲಿ ಪಡೆದಿದೆ. ಅಲ್ಲದೆ ಗುರುವಾರ ಮಧ್ಯಾಹ್ನ ಜಮೀನಿನ ಮರವೊಂದರ ಮೇಲಿದ್ದ ಚಿರತೆ, ಹಂದಿಯನ್ನು ಹತ್ಯೆ ಮಾಡಿದೆ. ಈ ದೃಶ್ಯವನ್ನು ಅಣ್ಣಯ್ಯ ಕಣ್ಣಾರೆ ಕಂಡಿದ್ದಾರೆ. ಹಂದಿಯನ್ನು ಅರ್ಧ ತಿಂದು ಸ್ಥಳದಿಂದ ಕಾಲ್ಕಿತ್ತಿದೆ.

ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಅರಣ್ಯ ಇಲಾಖೆ ನಗುವನಹಳ್ಳಿಯ ಜಮೀನೊಂದರಲ್ಲಿ ಬೋನ್ ಇಟ್ಟು ಚಿರತೆಯ ಸೆರೆಗೆ ಕ್ರಮ ಕೈಗೊಂಡಿದ್ದಾರೆ. ಇಂದು ಬೆಳಿಗ್ಗೆ ಗ್ರಾಮಸ್ಥರ ಸಹಾಯದಿಂದ ಬೋನ್ ಅನ್ನು ಇಡಲಾಗಿದ್ದು, ಬೋನ್‍ನಲ್ಲಿ ಚಿರತೆ ಬಲಿ ಪಡೆದಿದ್ದ ಹಂದಿಯ ಕಳೇಬರವನ್ನು ಇಡಲಾಗಿದೆ. ಬೋನ್ ಸುತ್ತಲೂ ಹೊಂಗೆ ಸೊಪ್ಪನ್ನು ಮುಚ್ಚಿ, ಉಪಟಳ ನೀಡುತ್ತಿರುವ ಚಿರತೆಗಾಗಿ ಅರಣ್ಯ ಇಲಾಖೆ ಬಲೆ ಬೀಸಿದೆ.

ಬೋಗಾದಿ ಆತಂಕ : ಕಳೆದ ಆರು ತಿಂಗಳ ಹಿಂದೆ ಬೋಗಾದಿ, ಜಟ್ಟಿಹುಂಡಿ ಹಾಗೂ ಇನ್ನಿತರೆ ಗ್ರಾಮಗಳಲ್ಲಿ ಕಾಣ ಸಿಕೊಂಡು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಚಿರತೆ ಇದೀಗ ಎರಡು ಮರಿಯೊಂದಿಗೆ ಸಂಜೆ ಹಾಗೂ ರಾತ್ರಿ ಗ್ರಾಮದ ರಸ್ತೆಗಳಲ್ಲಿ ಕಾಣ ಸಿಕೊಳ್ಳುವ ಮೂಲಕ ಸ್ಥಳೀಯರಲ್ಲಿ ಭಯದ ವಾತಾವರಣ ಉಂಟುಮಾಡಿದೆ. ಕಳೆದ ರಾತ್ರಿ ಬೋಗಾದಿಯಲ್ಲಿರುವ ವಿಲ್ಲಾ ಸೆಂಟ್ ಜೋಸೆಫ್ ಕಾನ್ವೆಂಟ್ ಆವರಣದಲ್ಲಿ ಮರಿಯೊಂದಿಗೆ ಓಡಾಡಿರುವ ಚಿರತೆಯ ದೃಶ್ಯ ಶಾಲೆಯ ಆವರಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಕು ನಾಯಿಯನ್ನು ಹೊತ್ತೊಯ್ಯಲು ಮರಿಯೊಂದಿಗೆ ಬಂದಿದ್ದ ಚಿರತೆ ಶಾಲೆಯ ಆವರಣದಲ್ಲಿ ರಾಜಾರೋಷವಾಗಿ ಸುತ್ತಾಡಿದೆ. ಈ ಶಾಲೆಯ ಆವರಣಕ್ಕೆ ರಾತ್ರಿ ವೇಳೆಯೇ ಬರುವ ಚಿರತೆಯನ್ನು ಕಂಡು ಅಲ್ಲಿಯೇ ವಾಸ್ತವ್ಯ ಹೂಡಿರುವ ವಯೋವೃದ್ಧ ಸಿಸ್ಟರ್‍ಗಳು ಭಯಭೀತರಾಗಿದ್ದಾರೆ. ಆರು ತಿಂಗಳ ಹಿಂದೆಯೂ ಇದೇ ಶಾಲೆಯ ಆವರಣದಲ್ಲಿ ಚಿರತೆ ಸುತ್ತಾಡುತ್ತಾ ನಾಯಿಯೊಂದನ್ನು ಹೊತ್ತೊಯ್ದಿತ್ತು. ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಸಮೀಪದಲ್ಲಿಯೇ ಬೋನ್‍ವೊಂದನ್ನು ಮೂರ್ನಾಲ್ಕು ದಿನ ಇಟ್ಟು ಚಿರತೆಯನ್ನು ಸೆರೆ ಹಿಡಿಯುವುದಕ್ಕೆ ಯತ್ನಿಸಿದ್ದರು. ಆದರೆ ಚಿರತೆ ಬೋನಿಗೆ ಬೀಳದೆ ಕಣ್ಮರೆಯಾಗಿತ್ತು. ಆರು ತಿಂಗಳ ನಂತರ ಎರಡು ಮರಿಗಳೊಂದಿಗೆ ಚಿರತೆ ಕಾಣ ಸಿಕೊಂಡಿರುವುದು ಈ ಭಾಗದ ಗ್ರಾಮಸ್ಥರಲ್ಲಿ ಭಯ ಉಂಟು ಮಾಡಿದೆ. ಜೊತೆಯಲ್ಲಿ ಮರಿ ಇರುವುದರಿಂದ ಜನರ ಮೇಲೂ ದಾಳಿ ಮಾಡಬಹುದು ಎಂಬ ಆತಂಕ ಗ್ರಾಮಸ್ಥರಲ್ಲಿದೆ.

Translate »