ಮಾಘ ಮಾಸದ 3ನೇ ದಿನ ಎಲ್ಲೆಲ್ಲೂ ಮದುವೆ-ಮಂಗಳ ಕಾರ್ಯಗಳ ಭರಾಟೆ
ಮೈಸೂರು

ಮಾಘ ಮಾಸದ 3ನೇ ದಿನ ಎಲ್ಲೆಲ್ಲೂ ಮದುವೆ-ಮಂಗಳ ಕಾರ್ಯಗಳ ಭರಾಟೆ

February 15, 2021

ಮೈಸೂರು, ಫೆ.14(ಎಂಟಿವೈ)- ಮಾಘÀ ಮಾಸದ ತೃತೀಯ ದಿನ, ಮೊದಲ ಭಾನುವಾರ ಬಲು ಶುಭದಿನ. ಹಾಗಾಗಿ ಇಂದು ಮೈಸೂರಲ್ಲಿ ಮದುವೆ, ನಾಮಕರಣ, ಗೃಹಪ್ರವೇಶ, ಸತ್ಯನಾರಾಯಣ ಪೂಜೆ ಸೇರಿದಂತೆ ಶುಭಕಾರ್ಯಗಳ ಭರಾಟೆ ಹೆಚ್ಚಾಗಿತ್ತು.

ಫೆ.14, ಒಂದೆಡೆ `ಪ್ರೇಮಿಗಳ ದಿನ’ದ ಸಂಭ್ರಮ ಯುವಜೋಡಿಗಳಲ್ಲಿ ಮನೆ ಮಾಡಿದ್ದರೆ, ಮತ್ತೊಂದೆಡೆ ಶುಭಕಾರ್ಯಗಳ ಸಡಗರ ಹೆಚ್ಚಾಗಿತ್ತು. ಇಂದು ಶುಭ ಮುಹೂರ್ತವಿದ್ದಿದ್ದರಿಂದ ಬಹಳಷ್ಟು ಮಂದಿ ಶುಭ ಸಮಾರಂಭ ಮಾತ್ರವಲ್ಲದೆ, ಧಾರ್ಮಿಕ ಆಚರಣೆಯಲ್ಲೂ ಪಾಲ್ಗೊಂಡು ಭಕ್ತಿಭಾವ ಪ್ರದರ್ಶಿಸಿದರು.

130 ಕಲ್ಯಾಣ ಮಂಟಪಗಳಲ್ಲೂ ವಿವಾಹ: ಶುಭದಿನ-ಒಳ್ಳೆಯ ಮುಹೂರ್ತವಿದ್ದ ಕಾರಣ ಇಂದೇ ವಿವಾಹ ನೆರವೇರಿಸಬೇಕೆಂಬ ಉಮೇದಿನಲ್ಲಿ ಮೈಸೂರು ನಗರ ದಲ್ಲಿನ 82 ಛತ್ರಗಳು ಸೇರಿದಂತೆ ಜಿಲ್ಲೆಯಲ್ಲಿನ 130ಕ್ಕೂ ಹೆಚ್ಚು ಕಲ್ಯಾಣಮಂಟಪಗಳನ್ನು 5-6 ತಿಂಗಳ ಹಿಂದೆಯೇ ಮುಂಗಡ ಕಾಯ್ದಿರಿಸಲಾಗಿತ್ತು. ಪರಿಣಾಮ ಇಂದು ಎಲ್ಲಾ ಕಲ್ಯಾಣಮಂಟಪಗಳಲ್ಲೂ ವಿವಾಹಗಳು ಬಲು ವಿಜೃಂಭಣೆಯಿಂದ ನೆರವೇರಿದವು.

ಕೊರೊನಾ ಹಿನ್ನೆಲೆಯಲ್ಲಿ ಜಾರಿಯಾಗಿದ್ದ ಲಾಕ್ ಡೌನ್ ತೆರವಾದ ಬಳಿಕ ವಿವಾಹ ಮಹೋತ್ಸವ ಹಾಗೂ ಶುಭ ಸಮಾರಂಭಗಳಲ್ಲಿ 500 ಅತಿಥಿಗಳು ಪಾಲ್ಗೊಳ್ಳಲು ಅವಕಾಶ ನೀಡಿದ್ದರಿಂದ ಎಲ್ಲಾ ಕಲ್ಯಾಣ ಮಂಟಪಗಳೂ ಬಂಧು-ಮಿತ್ರರಿಂದ ಕಿಕ್ಕಿರಿದಿದ್ದವು.

ದೇವಾಲಯ-ಸಮುದಾಯ ಭವನ: ಕೇವಲ ಕಲ್ಯಾಣ ಮಂಟಪಗಳಲ್ಲಷ್ಟೇ ಅಲ್ಲದೆ, ಇಂದು ಗ್ರಾಮೀಣ ಪ್ರದೇಶ ಗಳಲ್ಲಿ, ಸಮುದಾಯ ಭವನಗಳಲ್ಲಿ, ದೇವಾಲಯಗಳಲ್ಲೂ ಮದುವೆಗಳು ಅಧಿಕ ಪ್ರಮಾಣದಲ್ಲಿ ನೆರವೇರಿದವು.

ಧಾರ್ಮಿಕ ಆಚರಣೆ: ಇಂದು ಜಿಲ್ಲೆಯ ಹಲವೆಡೆ ಹೋಮ, ಸತ್ಯನಾರಾಯಣ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳೂ ಜರುಗಿದವು. ಕೆಲವರು ಮನೆಯಲ್ಲಿ ಸತ್ಯನಾರಾ ಯಣ ಪೂಜೆ ಮಾಡಿಸಿದರೆ, ಮತ್ತಷ್ಟು ಮಂದಿ ದೇವಾ ಲಯಗಳಲ್ಲಿ ವಿಶೇಷ ಪೂಜೆ, ಹೋಮ-ಹವನ ಮಾಡಿಸಿದರು.

ಈ ಕುರಿತು `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಪುರೋಹಿತ ಎಸ್.ವಿ.ಪ್ರಹ್ಲಾದರಾವ್, ಮಾಘ ಮಾಸದ ತೃತೀಯ ದಿನ ತುಂಬಾ ಶುಭಕರ. ಶುಭ ಕಾರ್ಯ ಗಳಿಗೆ ಅತ್ಯಂತ ಸೂಕ್ತ ಮುಹೂರ್ತ, ನಕ್ಷತ್ರದ ದಿನ. ಹಾಗಾಗಿಯೇ ಇಂದು ಎಲ್ಲೆಡೆ ಮದುವೆ, ನಾಮಕರಣ, ಗೃಹಪ್ರವೇಶ, ಹೊಸ ವ್ಯಾಪಾರ ಆರಂಭ, ಸತ್ಯನಾರಾಯಣ ಪೂಜೆ, ವಿಷ್ಣು ಪೂಜೆ ಮೊದಲಾದ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆದಿವೆ ಎಂದರು.

ತ್ರಿವೇಣಿ ಸಂಗಮ: ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಆಗಮಿಕ ಡಾ.ಎನ್.ಶಶಿಶೇಖರ್ ದೀಕ್ಷಿತ್ ಮಾತನಾಡಿ, ಮಾಘ ಮಾಸವೇ ವಿಶೇಷ ಹಾಗೂ ಶ್ರೇಷ್ಠ. ಮದುವೆ, ಶುಭ ಸಮಾರಂಭ ಮಾತ್ರವಲ್ಲದೆ, 3 ನದಿಗಳು ಸೇರುವ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರೆ ಒಳಿತಾಗುತ್ತದೆ ಎಂಬ ನಂಬಿಕೆ. ಅದರಂತೆ ಪ್ರತಿವರ್ಷ ಮಾಘಮಾಸದಲ್ಲಿ ಪುಣ್ಯಸ್ನಾನ ಮಾಡುವವರ ಸಂಖ್ಯೆ ಹೆಚ್ಚಿದೆ. ಕೆಲವರು ಈ ಮಾಸದಲ್ಲಿ ಪ್ರತಿದಿನ ವಿಶೇಷ ಪೂಜೆ ಮಾಡಿಸುತ್ತಾರೆ ಎಂದು ತಿಳಿಸಿದರು.

Translate »