ಜೂ.24ರಂದು ಧಾರವಾಡದಲ್ಲಿ 7ನೇ ಅಖಿಲ ಭಾರತ ದಲಿತ ಯುವ ಸಾಹಿತ್ಯ ಸಮ್ಮೇಳನ
ಮೈಸೂರು

ಜೂ.24ರಂದು ಧಾರವಾಡದಲ್ಲಿ 7ನೇ ಅಖಿಲ ಭಾರತ ದಲಿತ ಯುವ ಸಾಹಿತ್ಯ ಸಮ್ಮೇಳನ

June 22, 2018

ಮೈಸೂರು: ದಲಿತ ಸಾಹಿತ್ಯ ಪರಿಷತ್ತಿನ (ದಸಾಪ) `7ನೇ ಅಖಿಲ ಭಾರತ ದಲಿತ ಯುವ ಸಾಹಿತ್ಯ ಸಮ್ಮೇಳನ’ ಜೂ.24ರಂದು ಧಾರವಾಡದಲ್ಲಿ ನಡೆಯಲಿದೆ ಎಂದು ದಸಾಪ ಮೈಸೂರು ಜಿಲ್ಲಾಧ್ಯಕ್ಷ ಡಾ.ಬಿ.ಕೆ.ಪುಟ್ಟನಂಜಯ್ಯ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಪು ಸಭಾಂಗಣದಲ್ಲಿ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಚಿಂತಕಿ ಡಾ.ಸಮತಾ ಬಿ.ದೇಶಮಾನೆ ಅವರನ್ನು ಆಯ್ಕೆ ಮಾಡಲಾಗಿದ್ದು, ಅಂದು ಬೆಳಿಗ್ಗೆ 9.30ಕ್ಕೆ ಸಾಹಿತಿ ಡಾ.ಧರಣಿದೇವಿ ಮಾಲಗತ್ತಿ ಸಮ್ಮೇಳನದ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಹೇಳಿದರು.

ಇದೇ ವೇಳೆ ದಸಾಪ ಪ್ರಕಟಿಸಿರುವ ಗ್ರಂಥಗಳನ್ನು ಐಪಿಎಸ್ ಅಧಿಕಾರಿ ಡಾ.ಎಂ.ನಂಜುಂಡಸ್ವಾಮಿ ಹಾಗೂ ದಸಾಪ ಮುಖವಾಣಿ `ದಲಿತೋದಯ’ ಪತ್ರಿಕೆಯನ್ನು ಪತ್ರಕರ್ತ ಡಾ.ಮಲ್ಲಿಕಾರ್ಜುನ ಸಿದ್ದಣ್ಣನವರ್ ಬಿಡುಗಡೆ ಮಾಡಲಿದ್ದಾರೆ. 11.30ಕ್ಕೆ `ಸಮತಾ ಭಾರತ ಕಟ್ಟುವ ಪ್ರಯತ್ನದ ಸಾಧಕ-ಬಾಧಕಗಳು ಮತ್ತು ದಲಿತ ಸಾಹಿತ್ಯದ ಸಂವೇದನೆಗಳು’ ಕುರಿತಂತೆ ಸಂವಾದ ಗೋಷ್ಠಿ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ವಿಶೇಷ ಉಪನ್ಯಾಸ, 2.30ಕ್ಕೆ ಕಾವ್ಯ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ದಸಾಪ ಗೌರವ ಪ್ರಶಸ್ತಿ: ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಮೈಸೂರಿನ ಡಾ.ಎಂ.ಎಸ್.ಶೇಖರ್, ಬೆಳಗಾವಿಯ ಡಾ.ರಂಗರಾಜ ವನದುರ್ಗ, ಶಿವಮೊಗ್ಗದ ಡಾ.ಶಿವಾನಂದ ಕೆಳಗಿನಮನಿ, ಬಳ್ಳಾರಿಯ ಡಾ.ಶಾಂತನಾಯ್ಕ ಶಿರಗಾನಹಳ್ಳಿ ಹಾಗೂ ಕಲಬುರ್ಗಿಯ ಡಾ.ಅಮೃತಾ ಕಟಕೆ ಅವರಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

`ಬ್ರಹದ್ದೇಶಿ ಪ್ರಶಸ್ತಿ’ಗೆ ಬೆಳಗಾವಿಯ ಯಾದವೇಂದ್ರ ಪೂಜಾರ, `ದಲಿತ ಚೇತನ ಪ್ರಶಸ್ತಿ’ಗೆ ಶಹಪೂರದ ಬುದ್ಧಘೋಷ ದೇವೇಂದ್ರ ಹೆಗಡೆ, `ದಲಿತ ಸಿರಿ ಪ್ರಶಸ್ತಿ’ಗೆ ಚಿತ್ರ ಕಲಾವಿದ ಧಾರವಾಡದ ಪ್ರತಾಪ ಬಹುರೂಪಿ ಹಾಗೂ `ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ’ಗೆ ಹೊಸಪೇಟೆಯ ಮಂಜುಳಾ ಹರಪನಹಳ್ಳಿ ಅವರು ಭಾಜನರಾಗಿದ್ದಾರೆ. ಅದೇ ರೀತಿ ಯುವ ಸಾಹಿತ್ಯ ದತ್ತಿ ಪ್ರಶಸ್ತಿಗಳನ್ನು 13 ಮಂದಿಗೆ ಪ್ರದಾನ ಮಾಡಲಾಗುವುದು. ಸಂಜೆ 6ಕ್ಕೆ ದಸಾಪ ರಾಜ್ಯಾಧ್ಯಕ್ಷ ಡಾ.ಅರ್ಜುನ್ ಗೊಳಸಂಗಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಸಮಾರೋಪ ಭಾಷಣವನ್ನು ಸಾಹಿತಿಗಳಾದ ಬೀದರಿನ ಡಾ.ಜಯದೇವಿ ಗಾಯಕವಾಡ ಮಾಡಲಿದ್ದಾರೆ ಎಂದು ವಿವರಿಸಿದರು. ದಸಾಪದ ಪಿ.ಸೋಮಶೇಖರ್, ಎನ್.ಸಿ.ವಿಜಯಕುಮಾರ್, ರಾಮರಾಜು ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »