ಮೈಸೂರು ರೇಸ್ ಕೋರ್ಸ್ ಸ್ಥಳಾಂತರಿಸುವುದರಿಂದ  ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿ ಆಗಲಿದೆಯೇ!?
ಮೈಸೂರು

ಮೈಸೂರು ರೇಸ್ ಕೋರ್ಸ್ ಸ್ಥಳಾಂತರಿಸುವುದರಿಂದ  ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿ ಆಗಲಿದೆಯೇ!?

June 22, 2018

ಬಾಕಿ ಇರುವ ಬೇಕಾದಷ್ಟು ಅಭಿವೃದ್ಧಿ ಕಾರ್ಯಗಳನ್ನು ಮೊದಲು ಪೂರ್ಣಗೊಳಿಸಿ: ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‍ಗೆ ಬಿಜೆಪಿ ರಾಷ್ಟ್ರೀಯ ಮುಖಂಡ ಬಿ.ಪಿ.ಮಂಜುನಾಥ್ ಸಲಹೆ

ಮೈಸೂರು: ಮೈಸೂರು ಮಹಾರಾಜರ ಕೊಡುಗೆಗಳಲ್ಲಿ ಒಂದಾದ ಮೈಸೂರು ರೇಸ್ ಕೋರ್ಸ್ ಅನ್ನು ಸ್ಥಳಾಂತರಿಸುವ ಪ್ರಸ್ತಾಪವನ್ನು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಕೈಬಿಟ್ಟು, ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಒತ್ತು ನೀಡುವುದು ಒಳಿತು ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಬಿ.ಪಿ.ಮಂಜುನಾಥ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ನಗರದ ಹೃದಯ ಭಾಗದಲ್ಲಿರುವ ರೇಸ್ ಕೋರ್ಸ್‍ನ ಸುಮಾರು 150 ಎಕರೆ ಪ್ರದೇಶ ಅಚ್ಚ ಹಸಿರಿನಿಂದ ಕೂಡಿದೆ. ಮೈಸೂರು ಮಹಾರಾಜರ ಕೊಡುಗೆಗಳಲ್ಲಿ ಒಂದಾದ ಇದನ್ನು ಸ್ಥಳಾಂತರಿಸಬೇಕೆಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಪ್ರಸ್ತಾಪಿಸಿದ್ದಾರೆ. ಅವರು ಇದರಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ಇಲ್ಲಿ ಕೇವಲ ಕುದುರೆಗಳು ಮಾತ್ರ ಓಡಲ್ಲ. ಗಾಲ್ಫ್ ಆಟಕ್ಕೂ ಇಲ್ಲೇ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಾಲ್ಫ್ ಆಡುವ ಅನೇಕ ಪಟುಗಳು ಇಲ್ಲೇ ಅಭ್ಯಾಸ ಮಾಡುತ್ತಾರೆ. ರೇಸ್ ಕ್ಲಬ್‍ನಲ್ಲಿ ಸುಮಾರು 3 ಸಾವಿರ ಮಂದಿ ನೌಕರಿ ಮಾಡುತ್ತಿದ್ದರೆ, ಗಾಲ್ಫ್ ಕ್ಲಬ್‍ನಲ್ಲಿ 300 ಮಂದಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ವಾರ್ಷಿಕವಾಗಿ 400 ಕೋಟಿ ರೂ. ವಹಿವಾಟು ನಡೆಸುತ್ತಿರುವ ರೇಸ್ ಕೋರ್ಸ್ ಮೂಲಕ ಸರ್ಕಾರಕ್ಕೆ ಪ್ರತಿ ವರ್ಷ 39 ಕೋಟಿ ರೂ. ತೆರಿಗೆ ಸಂದಾಯವಾಗುತ್ತಿದೆ. ಇಂತಹ ಸಂಸ್ಥೆಯನ್ನು ಸ್ಥಳಾಂತರ ಮಾಡಿದರೆ, ಅದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮೈಸೂರು ರೇಸ್ ಕ್ಲಬ್ ಚಾರಿಟಬಲ್ ಐ ಹಾಸ್ಪಿಟಲ್ ಮೂಲಕ ಇಲ್ಲಿಯವರೆಗೆ 70 ಸಾವಿರಕ್ಕೂ ಹೆಚ್ಚು ಬಡ ಜನರಿಗೆ ಉಚಿತ ವೈದ್ಯಕೀಯ ಸೇವೆ ಒದಗಿಸಿದ್ದು, ಕಣ್ಣಿನ ಶಸ್ತ್ರಚಿಕಿತ್ಸೆ ಹಾಗೂ ಸಾಧನ ಸಲಕರಣೆಗಳನ್ನು ನೀಡಲಾಗಿದೆ. ದೇಶದ ಯಾವುದೇ ರೇಸ್ ಕ್ಲಬ್‍ಗಳು ಇಂತಹ ಗುಣಮಟ್ಟದ ಸೇವಾ ಕಾರ್ಯ ಮಾಡಿಲ್ಲ ಎಂದರು.

ಒಂದು ವೇಳೆ ಸ್ಥಳಾಂತರಕ್ಕೆ ಕೈ ಹಾಕಿದರೆ, ಅದಕ್ಕೆ ಹತ್ತಾರು ವರ್ಷಗಳೇ ಬೇಕಾಗಬಹುದು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರಕ್ಕೆ ಒಂದೇ ವರ್ಷ ಆಯಸ್ಸು ಎಂದು ಭವಿಷ್ಯ ನುಡಿದಿದ್ದು, ಈ ಹಿನ್ನೆಲೆಯಲ್ಲಿ ಸಾ.ರಾ.ಮಹೇಶ್ ಎಷ್ಟು ದಿನ ಸಚಿವರಾಗಿ ಇರುತ್ತಾರೆ ಎಂಬುದೇ ಅನುಮಾನ. ಹೀಗಿರುವಾಗ ಇವರು ಸ್ಥಳಾಂತರಕ್ಕೆ ಮುಂದಾದರೆ, ಮುಂದೊಂದು ದಿನ ಇಲ್ಲಿ ಕಾಂಕ್ರಿಟ್ ಕಟ್ಟಡಗಳು ತಲೆ ಎತ್ತಿ ರಿಯಲ್ ಎಸ್ಟೇಟ್ ದಂಧೆಗೆ ಆಸ್ಪದವಾಗುವ ಸಾಧ್ಯತೆಗಳನ್ನು ತಳ್ಳಿ ಹಾಕಲಾಗದು ಎಂದು ಎಚ್ಚರಿಸಿದರು.

ಬಟಾನಿಕಲ್ ಗಾರ್ಡನ್: ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ರೇಸ್ ಕೋರ್ಸ್ ಸ್ಥಳಾಂತರ ಮಾಡಿ ಆ ಜಾಗದಲ್ಲಿ ಬಟಾನಿಕಲ್ ಗಾರ್ಡನ್ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇದು ಸ್ವಾಗತಾರ್ಹ. ಆದರೆ ಅದನ್ನು ಬೇರೆ ಜಾಗದಲ್ಲಿ ಮಾಡಲು ಅವಕಾಶವಿದೆ. ಜೊತೆಗೆ ರೇಸ್ ಕೋರ್ಸ್ ಮೈದಾನ ಸಮತಟ್ಟು ಪ್ರದೇಶವಾಗಿದ್ದು, ಇಲ್ಲಿ ಬಟಾನಿಕಲ್ ಗಾರ್ಡನ್ ನಿರ್ಮಾಣ ಸಾಧ್ಯವಿಲ್ಲ ಎಂದು ಬಿ.ಪಿ.ಮಂಜುನಾಥ್ ಪ್ರತಿಪಾದಿಸಿದರು.

ಲಲಿತಮಹಲ್ ಹೋಟೆಲ್‍ಗೆ ಹೊಸ ಸ್ಪರ್ಶ ನೀಡಿ: ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಅನೇಕ ಕೆಲಸ ಕಾರ್ಯಗಳನ್ನು ಮಾಡಲು ಸಚಿವ ಸಾ.ರಾ.ಮಹೇಶ್ ಅವರಿಗೆ ಅವಕಾಶವಿದೆ. ಮೈಸೂರಿನ ಲಲಿತಮಹಲ್ ಅರಮನೆಯನ್ನು ಪ್ರವಾಸಿಗರ ಆಕರ್ಷಣೀಯ ತಾಣವಾಗಿ ಮಾಡಲು ಇದರ ಉಸ್ತುವಾರಿ ಹೊಂದಿರುವ ಜಂಗಲ್ ಲಾಡ್ಜ್‍ನಿಂದ ಸಾಧ್ಯವಾಗಿಲ್ಲ. ಆದರೆ ತಾಜ್ ಗ್ರೂಪ್ ನಿರ್ವಹಣೆಯಲ್ಲಿರುವ ಹೈದರಾಬಾದಿನ ಪಾಲಕ್‍ನಾಮ ಅರಮನೆಗೆ ಪ್ರವಾಸಿಗರು ಕಿಕ್ಕಿರಿದು ಬರುತ್ತಾರೆ. ಇದೇ ರೀತಿಯಲ್ಲಿ ಲಲಿತಮಹಲ್ ಅರಮನೆಯನ್ನು ಅಭಿವೃದ್ಧಿಪಡಿಸಲು ಸಾ.ರಾ.ಮಹೇಶ್ ಮುಂದಾಗಬಹುದು ಎಂದು ಸಲಹೆ ನೀಡಿದರು.

`ಹಸಿರು ವಲಯ’ ಎಂದು ಘೋಷಿಸಲಿ: ರೇಸ್ ಕೋರ್ಸ್ ಎದುರು ಕಾರಂಜಿ ಕೆರೆ ಹಾಗೂ ಮೃಗಾಲಯದ ನಡುವೆ ನಿರ್ಮಿಸಿರುವ `ಬೃಹತ್ ಅಕ್ವೇರಿಯಂ’ ಅಂತಿಮ ರೂಪವಿಲ್ಲದೇ, ನಿರುಪಯುಕ್ತವಾಗಿದೆ. ಪುರಭವನದ ಮಲ್ಟಿ ಲೆವೆಲ್ ಪಾರ್ಕಿಂಗ್ ಕಾಮಗಾರಿ ಗುತ್ತಿಗೆ ಪಡೆದಿದ್ದ ಹೈದರಾಬಾದಿನ ಛಾಬ್ರಿಯಾ ಗ್ರೂಪ್ 18 ಕೋಟಿ ರೂ. ಪಡೆದು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದೆ.

ಕೆಆರ್‍ಎಸ್‍ನ ಬೃಂದಾವನ ಉದ್ಯಾನವನವನ್ನು ಅಭಿವೃದ್ಧಿಗೊಳಿಸುವ ಅಗತ್ಯವಿದೆ. ಹೀಗೆ ಅರೆಬರೆಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲು ಸಚಿವರು ಗಮನ ಹರಿಸಬೇಕು. ಅದಾಗ್ಯೂ ಸಚಿವರು ರೇಸ್ ಕೋರ್ಸ್ ಅನ್ನು ಬಟಾನಿಕಲ್ ಗಾರ್ಡನ್ ಮಾಡಬೇಕಿದ್ದರೆ, ಮೊದಲು ಸಚಿವ ಸಂಪುಟದಲ್ಲಿ ಈ ಜಾಗವನ್ನು `ಹಸಿರು ವಲಯ’ ಎಂದು ಘೋಷಣೆ ಮಾಡಿಸಬೇಕು ಎಂದು ಒತ್ತಾಯಿಸಿದರು. ಮಾಜಿ ಉಪಮೇಯರ್ ಮಹಾದೇವಮ್ಮ, ಮುಖಂಡರಾದ ಬಸಂತ್‍ಕುಮಾರ್, ಮಂಜು ಸಿ.ಗೌಡ, ಹೇಮಂತ್‍ಕುಮಾರ್, ಬಸವರಾಜು ಪತ್ರಿಕಾ ಗೋಷ್ಠಿಯಲ್ಲಿದ್ದರು.

Translate »