ಪ್ರಜಾಪ್ರಭುತ್ವ ವಿರೋಧಿ ಮೈಸೂರು ಪಾಲಿಕೆ ವಾರ್ಡ್, ಮೀಸಲಾತಿ ಪುನರ್ವಿಂಗಡಣೆ
ಮೈಸೂರು

ಪ್ರಜಾಪ್ರಭುತ್ವ ವಿರೋಧಿ ಮೈಸೂರು ಪಾಲಿಕೆ ವಾರ್ಡ್, ಮೀಸಲಾತಿ ಪುನರ್ವಿಂಗಡಣೆ

June 22, 2018
  • ಮಾಜಿ ಮೇಯರ್ ಸಂದೇಶ್‍ಸ್ವಾಮಿ ಆರೋಪ
  • ಅರ್ಹರಿಗೆ ಅನ್ಯಾಯವಾಗಲಿರುವ ಮೀಸಲಾತಿ
  • ಸಂಸದ, ಶಾಸಕರ ಮೂಲಕ ಸರ್ಕಾರದ ಗಮನ ಸೆಳೆಯಲೆತ್ನ

ಮೈಸೂರು: ಮೈಸೂರು ಮಹಾನಗರಪಾಲಿಕೆ ಪುನರ್ರಚಿತ ವಾರ್ಡ್ ಹಾಗೂ ಮೀಸಲಾತಿಯ ಬಗ್ಗೆ ಮೈಸೂರಿನಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಮಾಜಿ ಮೇಯರ್ ಹಾಗೂ ನಗರಪಾಲಿಕೆ ಸದಸ್ಯ ಸಂದೇಶ್ ಸ್ವಾಮಿ ಇಂದಿಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ವಾರ್ಡ್‍ವಾರು ಮೀಸಲಾತಿ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಮೈಸೂರು ನಗರದ ವಾರ್ಡ್‍ವಾರು ಮೀಸಲಾತಿಯಲ್ಲಿ ಸಾಕಷ್ಟು ನ್ಯೂನತೆ ಇದೆ. ರಿಂಗ್ ರಸ್ತೆಯ ಒಳಗಿರುವ ಮುಡಾದಿಂದ ಪಾಲಿಕೆಗೆ ಹಸ್ತಾಂತರವಾಗಿರುವ ಹೊಸ ಬಡಾವಣೆಗಳನ್ನು ನೂತನ ವಾರ್ಡ್ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿಲ್ಲ. ಇದರಿಂದ ಆ ಪ್ರದೇಶದ ಜನ, ಪ್ರಜಾಪ್ರಭುತ್ವದ ಪ್ರಕಾರ ಹಕ್ಕುಗಳಿಂದ ವಂಚಿತರಾಗಲಿದ್ದಾರೆ ಎಂದು ದೂರಿದರು.

ಮೈಸೂರಿನ ರಾಮಕೃಷ್ಣನಗರ, ದಟ್ಟಗಳ್ಳಿ 2 ಮತ್ತು 3ನೇ ಹಂತÀ, ವಿಜಯನಗರ 3 ಮತ್ತು 4ನೇ ಹಂತ, ಕಂದಾಯ ಬಡಾವಣೆಗಳು, ಸೊಸೈಟಿ ಬಡಾವಣೆಗಳು, ಆಲನಹಳ್ಳಿ ಲೇಔಟ್, ನಂದಿನಿ ಬಡಾವಣೆ, ಆಲನಹಳ್ಳಿ ಗ್ರಾಮ ಸೇರಿದಂತೆ ವಿವಿಧ ಹೊಸ ಬಡಾವಣೆಗಳನ್ನು ಪಾಲಿಕೆಗೆ ಮುಡಾ ಹಸ್ತಾಂತರಿಸಿದೆ. ಆದರೆ ಈ ಬಗ್ಗೆ ರಾಜ್ಯಪತ್ರದಲ್ಲಿ ಪ್ರಕಟವಾಗಿಲ್ಲ. ಇದರಿಂದಾಗಿ ಆಡಳಿತಾತ್ಮಕ ನಿರ್ವಹಣೆ ಸಮಸ್ಯೆ ಉಂಟಾಗಿದೆ,. ರಾಜ್ಯಪತ್ರದಲ್ಲಿ ನಗರಪಾಲಿಕೆಯಲ್ಲಿ ಇಲ್ಲ ಎಂಬ ಕಾರಣಕ್ಕೆ ಯಾವುದೇ ಖಾತೆ, ಕಂದಾಯ, ಮೂಲ ಸೌಕರ್ಯವನ್ನು ಪಾಲಿಕೆಯವರು ಕೊಡುತ್ತಿಲ್ಲ. ಹೀಗಾಗಿ ಈ ಪ್ರದೇಶದ ಜನರು ಅತಂತ್ರರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಿಂಗ್ ರಸ್ತೆಯ ಒಳಗಿನ ಎಷ್ಟು ಬಡಾವಣೆಗಳು ಪಾಲಿಕೆ ವ್ಯಾಪ್ತಿಗೆ ಸೇರಿದೆ ಎಂಬ ಬಗ್ಗೆ ಮಾಹಿತಿ ನೀಡಿದರೆ ಅದನ್ನು ಸಂಪುಟದ ಅನುಮತಿ ಪಡೆಯಲಾಗುವುದು ಎಂದಿದ್ದರು. ಆದರೆ ಅಷ್ಟರಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಸಂಪುಟದ ಅನುಮತಿ ದೊರೆತಿಲ್ಲ. ನಿಯಮದ ಪ್ರಕಾರ ಮೈಸೂರು ಬಿ ದರ್ಜೆ ನಗರವಾಗಿದ್ದರಿಂದ 15 ಸಾವಿರ ಜನಸಂಖ್ಯೆಗೆ ಒಂದು ವಾರ್ಡ್ ರಚಿಸಬೇಕಾಗುತ್ತದೆ. ಆದರೆ ಸಚಿವ ಸಂಪುಟದ ಮುಂದೆ ಇದ್ದರೂ ಅಧಿಕಾರಿಗಳು ಸರ್ಕಾರ ಹೋಗುತ್ತಿದ್ದಂತೆ ಮಂಜೂರಾತಿ ಇಲ್ಲದಿದ್ದರೂ ಡಿ ಲಿಮಿಟೇಷನ್ ಮಾಡಿದ್ದಾರೆ. 2007-08 ರಲ್ಲಿದ್ದ ಕ್ಯಾಟಗರಿ ಬದಲಾಯಿಸದೇ ಅದೇ ರೀತಿ 2013ರಲ್ಲಿ ಪುನರಾವರ್ತನೆ ಮಾಡಿದ್ದರು. ಈಗ ಮತ್ತೊಮ್ಮೆ ಅದೇ ದಾರಿ ಹಿಡಿದಿದ್ದಾರೆ. ಇದು ಕಾನೂನು ಬಾರಹಿವಾಗಿದ್ದು, ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಲಿದೆ. ಮಾತ್ರವಲ್ಲ ಜನರ ಹಕ್ಕು ಕಸಿದಂತಾಗಲಿದೆ ಎಂದು ಆರೋಪಿಸಿದರು.

ಈಗ ಮಾಡಿರುವ ವಾರ್ಡ್‍ಗಳ ಬದಲಾವಣೆ ಆಗಬೇಕು. ಹೊಸ ಪುನರ್ರಚನೆ ನಿಯಮ ಪ್ರಕಾರವೇ ಹೊಸ ಬದಲಾವಣೆ ಮಾಡಬೇಕು. ಹಾಲಿ ಇರುವ ನಗರಪಾಲಿಕೆ ಆಡಳಿತ ಸೆ.4ರವರೆಗೆ ಇದ್ದು, ಅಲ್ಲಿಯವರೆಗೂ ಬದಲಾವಣೆಗೆ ಅವಕಾಶವಿದೆ. ಆದರೆ ಅದನ್ನು ಬಿಟ್ಟು ತರಾತುರಿಯಿಂದ ವಾರ್ಡ್ ಪುನರ್ರಚನೆ, ಮೀಸಲಾತಿ ಪ್ರಕಟಿಸಿರುವುದು ನಿಯಮ ಬಾಹಿರವಾದದ್ದು ಎಂದು ದೂರಿದರು.

ರಿಂಗ್ ರಸ್ತೆಯ ಒಳಗಿರುವ ಹೊಸ ಬಡಾವಣೆಗಳನ್ನು ಒಳಪಡಿಸಿಕೊಂಡು ಸಚಿವ ಸಂಪುಟದ ಮುಂದಿರುವ ಪಟ್ಟಿಯನ್ನು ಪರಿಶೀಲಿಸಿ ಮಾಡಿದರೆ ಈಗಿರುವ 65 ವಾರ್ಡ್‍ಗಳು 90 ವಾರ್ಡ್‍ಗಳಾಗಲಿವೆ. ಇದರಿಂದ ಹಕ್ಕು ವಂಚಿತ ಸಮುದಾಯದವರಿಗೂ ನ್ಯಾಯ ದೊರಕಿದಂತಾಗುತ್ತದೆ. ಅದು ಬಿಟ್ಟು ಹಳೇ ಮೀಸಲಾತಿಯನ್ನೇ ಮುಂದುವರಿಸಿದರೆ ಪ್ರಜಾಪ್ರಭುತ್ವದ ನಿಯಮದ ಪ್ರಕಾರ ನಿಜವಾದ ಅರ್ಹರ ಹಕ್ಕು ಕಸಿದಂತಾಗುತ್ತದೆ ಎಂದು ಆರೋಪಿಸಿದರು.

ಈ ಬಗ್ಗೆ ಸಂಸದ ಪ್ರತಾಪ್‍ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಅವರ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಮಹದೇವಪ್ಪ ಉಪಸ್ಥಿತರಿದ್ದರು.

Translate »