ಮೈಸೂರು: ಮೈಸೂರಿನ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಏರ್ಪಡಿಸಲಾಗಿತ್ತು. ಮುಕ್ತ ಗಂಗೋತ್ರಿಯಲ್ಲಿರುವ ವಿಜ್ಞಾನ ಭವನದಲ್ಲಿ ಯೋಗ ಶಿಕ್ಷಕರಿಂದ ಯೋಗ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು. ರಾಜ್ಯ ಮುಕ್ತ ವಿವಿಯ ತಾಂತ್ರಿಕ ಮತ್ತು ಬೋಧಕ ವರ್ಗದ ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಯೋಗದ ಮಹತ್ವದ ಬಗ್ಗೆ ಅರಿತುಕೊಂಡರು.
ರಾಷ್ಟ್ರೀಯ ಯೋಗ ಚಾಂಪಿಯನ್ ಮತ್ತು ಯೊಗ ಚಿನ್ನದ ಪದಕ ವಿಜೇತ ಯೋಗ ಪ್ರಕಾಶ್, 85 ವರ್ಷದ ಅಂತಾರಾಷ್ಟ್ರೀಯ ಯೋಗ ಪಟು ಡಿ.ಎನ್.ಮುದ್ದುಕೃಷ್ಣ, 70 ವರ್ಷ ವಯೋಮಾನದ ರಾಷ್ಟ್ರೀಯ ಯೋಗ ಪಟು ಡಿ.ಎನ್.ಶಾಂತಕುಮಾರ್ ಅವರು ಯೋಗದ ಹಲವು ಕಠಿಣಆಸನಗಳನ್ನು ಪ್ರದರ್ಶಿಸಿ, ನೆರೆದಿದ್ದವರ ಹುಬ್ಬೇರುವಂತೆ ಮಾಡಿದರು.
85 ವರ್ಷ ವಯಸ್ಸಿನ ಬಿ.ಎನ್.ಮುದ್ದುಕೃಷ್ಣ ಅವರು ಮಹಾ ಕಾಲಭೈರವಾಸನ, ಯೋಗ ನಿದ್ರಾಸನ, ಏಕಪಾದಾಸನ, ಓಂಕಾರಾಸನ, ಸರ್ಪಾಸನ, ಚಕೋರಾಸನಗಳನ್ನು ಪ್ರದರ್ಶಿಸಿದರೆ, ಶಾಂತಕುಮಾರ್ ಅವರು ಮಹಾ ಕಾಳಾಸನ, ಉತ್ತಿಷ್ಟ ಪಾದಾಂಕುಶಾಸನ, ಸಾಲಾಂಬ ಶೀರ್ಷಾಸನ, ಪದ್ಮಾಸನ, ಉಪ ವಿಷ್ಟ ಕೋನಾಸನಗಳನ್ನು ಪ್ರದರ್ಶಿಸಿದರು.
ಯೋಗ ಗುರು ಯೋಗ ಪ್ರಕಾಶ್ ಅವರು, ಬದತ್ತ ಪದ್ಮಾಸನ, ಪದ್ಮಮಯೂರಾಸನ, ಉತ್ತಿತ್ತ ಏಕಪಾದ ಕೌಂಡಿನ್ಯಾಸನ, ಅಷ್ಟ ವಕ್ರಾಸನ, ಭುಜ ಪೀಡಾಸನ, ಶ್ರೀಕೃಷ್ಣಾಸನಗಳನ್ನು ಪ್ರದರ್ಶಿಸಿ ಗಮನ ಸೆಳೆದರು.
ಯೋಗ ಭೂಮಿ ಮೈಸೂರು
ಇದಕ್ಕೂ ಮುನ್ನ ಮಾತನಾಡಿದ ಅಂತಾರಾಷ್ಟ್ರೀಯ ಯೋಗ ಗುರು ಯೋಗ ಪ್ರಕಾಶ್ ಅವರು, ಮೈಸೂರು ಯೋಗ ಭೂಮಿ. ಯೋಗಕ್ಕೆ ನಾಂದಿ ಹಾಡಿದ್ದೇ ಮೈಸೂರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ತಿರುಮಲೆ ಕೃಷ್ಣಮಾಚಾರ್ ಯೋಗ ಕಲಿಸಿದರು. ಮೈಸೂರಿನ ಮಹಾರಾಜ, ಪರಕಾಲ ಮಠ, ಸರ್ಕಾರಿ ಆಯುರ್ವೇದ ಕಾಲೇಜು ಇನ್ನಿತರ ಕಡೆಗಳಲ್ಲಿ ಯೋಗ ಕೇಂದ್ರUಳಿದ್ದವು. ಇಡೀ ದೇಶದಲ್ಲಿ ಯೋಗದ ಗುರುಗಳು ಮೈಸೂರಿನವರೇ ಆಗಿದ್ದಾರೆಂಬುದು ಹೆಮ್ಮೆಯ ವಿಚಾರ ಎಂದರು.
ಶರೀರವನ್ನು ದಂಡಿಸುವುದು ಯೋಗ. ಯೋಗದಿಂದ ಮನಸ್ಸು ಶುದ್ಧಿಯಾಗುವ ಜೊತೆಗೆ ದೇಹದ ಅಂದವೂ ಹೆಚ್ಚುತ್ತದೆ. ಮಾನವನಿಗೆ ಶರೀರ ಬಲ, ಮನಸ್ಸಿನ ಬಲ ಚೆನ್ನಾಗಿರಬೇಕಾದರೆ ಯೋಗದಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕರಾಮುವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಎ.ಖಾದರ್ ಪಾಷ, ಯೋಗ ಗುರುಗಳಾದ ಡಿ.ಎನ್.ಮುದ್ದುಕೃಷ್ಣ, ಡಿ.ಎನ್.ಶಾಂತಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು