ತನ್ವೀರ್ ವಿರುದ್ಧ ಹೇಳಿಕೆ ನೀಡಿದರೆ ಜಮೀರ್  ಅಹಮದ್ ವಿರುದ್ಧ ಕೆಪಿಸಿಸಿ ಅಧ್ಯಕ್ಷರಿಗೆ ದೂರು ಬೆಂಬಲಿಗರ ಎಚ್ಚರಿಕೆ
ಮೈಸೂರು

ತನ್ವೀರ್ ವಿರುದ್ಧ ಹೇಳಿಕೆ ನೀಡಿದರೆ ಜಮೀರ್  ಅಹಮದ್ ವಿರುದ್ಧ ಕೆಪಿಸಿಸಿ ಅಧ್ಯಕ್ಷರಿಗೆ ದೂರು ಬೆಂಬಲಿಗರ ಎಚ್ಚರಿಕೆ

June 22, 2018

ಮೈಸೂರು: ಮಾಜಿ ಸಚಿವ, ಎನ್‍ಆರ್ ಕ್ಷೇತ್ರದ ಶಾಸಕ ತನ್ವೀರ್‍ಸೇಠ್ ವಿರುದ್ಧ ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ ನೀಡುವುದು ಇದು ಹೀಗೇ ಮುಂದುವರೆದರೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿಗೆ ತೆರಳಿ ಕೆಪಿಸಿಸಿ ಅಧ್ಯಕ್ಷರಿಗೆ ದೂರು ನೀಡಬೇಕಾಗುತ್ತದೆ ಎಂದು ಕಾಂಗ್ರೆಸ್‍ನ ಅಜೀಜ್‍ಸೇಠ್ ಬ್ಲಾಕ್ ಅಧ್ಯಕ್ಷ ಅಬ್ದುಲ್‍ಖಾದರ್ ಶಾಹಿದ್ ಎಚ್ಚರಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ವೀರ್‍ಸೇಠ್ ಅವರನ್ನು ಉದ್ದೇಶಿಸಿ `ನಿಮ್ಮ ಕ್ಷೇತ್ರಕ್ಕೆ ಬರುತ್ತೇನೆ, ಜನ ಯಾರನ್ನು ಬೆಂಬಲಿಸುತ್ತಾರೋ ನೋಡೋಣ’ ಎಂದು ಜಮೀರ್ ಅಹಮ್ಮದ್ ಹೇಳಿಕೆ ನೀಡಿದ್ದಾರೆ. ಒಂದೇ ಪಕ್ಷದಲ್ಲಿದ್ದು ಈ ರೀತಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಎನ್‍ಆರ್ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ ಎಂದು ತಿಳಿಸಿದರು.

ತನ್ವೀರ್ ಸೋಲಿಸಲು ಹಿಂಬಾಲಕರನ್ನು ಬಿಟ್ಟಿದ್ದರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎನ್‍ಆರ್ ಕ್ಷೇತ್ರದಲ್ಲಿ ಎಸ್‍ಡಿಪಿಐ ಅಭ್ಯರ್ಥಿ ಗೆಲ್ಲಿಸುವ ಸಲುವಾಗಿ ತನ್ವೀರ್‍ಸೇಠ್ ಅವರನ್ನು ಸೋಲಿಸಲು ಜಮೀರ್, ಕ್ಷೇತ್ರದಲ್ಲಿ ತಮ್ಮ ಹಿಂಬಾಲಕರನ್ನು ಬಿಟ್ಟಿದ್ದರು. ಇದಕ್ಕೆ ನನ್ನ ಬಳಿ ಸಾಕ್ಷ್ಯಗಳಿವೆ ಎಂದು ಅಬ್ದುಲ್‍ಖಾದರ್ ಶಾಹಿದ್ ಕಿಡಿಕಾರಿದರು. ಎನ್‍ಆರ್ ಕ್ಷೇತ್ರದ ಕಾರ್ಯಕರ್ತರಾದ ಎಂ.ಡಿ.ವೆಂಕಟೇಶ್, ಚಿಕ್ಕತಾಯಮ್ಮ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »