ಮೈತ್ರಿ ಸರ್ಕಾರವೇ ಬಿದ್ದು ಹೋಗಿದೆ, ಇನ್ನು ಆಪರೇಷನ್ ಕಮಲ ಮಾಡಿ ಏನು ಪ್ರಯೋಜನ!
ಮೈಸೂರು

ಮೈತ್ರಿ ಸರ್ಕಾರವೇ ಬಿದ್ದು ಹೋಗಿದೆ, ಇನ್ನು ಆಪರೇಷನ್ ಕಮಲ ಮಾಡಿ ಏನು ಪ್ರಯೋಜನ!

August 3, 2019

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನುಡಿ

ಬೆಂಗಳೂರು, ಆ. 2(ಕೆಎಂಶಿ)- ಜೆಡಿಎಸ್-ಕಾಂಗ್ರೆಸ್ ಸರ್ಕಾರವೇ ಬಿದ್ದು ಹೋಗಿದೆ. ಬಿಜೆಪಿಯವರು ಇನ್ನೆಷ್ಟು ಶಾಸಕರನ್ನು ಸೆಳೆದರೂ ಆಗುವು ದೇನಿದೆ ಎಂದು ಮಾಜಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಪ್ರಶ್ನಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರವೇ ಬಿದ್ದು ಹೋಗಿದೆ. ಬಿಜೆಪಿ ಯವರು ಇನ್ನೂ ಹಲವು ಶಾಸಕರನ್ನು ಸೆಳೆಯಲು ಯತ್ನಿಸು ತ್ತಿದ್ದಾರೆ ಎಂಬ ಮಾತಿಗೆ ಈ ರೀತಿ ಪ್ರತಿಕ್ರಿಯಿಸಿದರು.

ಬಿಜೆಪಿಯವರು ಮತ್ತೆ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಯತ್ನ ಮಾಡುತ್ತಿದ್ದಾರೆಂದರೆ ಏನು ಮಾಡಲು ಸಾಧ್ಯ ಮಾಡಿದರೂ ನಮಗೇನು ಎಂದು ಪ್ರಶ್ನಿಸಿದರು. ಇನ್ನೇನಿದ್ದರೂ ನಾವು ಮಾಜಿಗಳು. ನಮ್ಮ ಸಂಪೂರ್ಣ ಗಮನವನ್ನು ಪಕ್ಷ ಕಟ್ಟುವ ಕಡೆ ಹರಿಸುತ್ತೇವೆ. ಕೆಪಿಸಿಸಿ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರ ನೇತೃತ್ವದಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ನಾನು ಪ್ರತಿಪಕ್ಷದ ನಾಯಕ ಸ್ಥಾನದ ಆಕಾಂಕ್ಷಿಯೂ ಅಲ್ಲ, ಕೆಪಿಸಿಸಿ ಅಧ್ಯಕ್ಷ ಪದವಿಯ ಆಕಾಂಕ್ಷಿಯೂ ಅಲ್ಲ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ದಿನೇಶ್ ಗುಂಡೂರಾವ್ ಇದ್ದಾರೆ. ಶಾಸಕಾಂಗ ಪಕ್ಷದ ನಾಯಕನ ಜಾಗದಲ್ಲಿ ಸಿದ್ದರಾಮಯ್ಯ ಇದ್ದಾರೆ ಎಂದರು.

ಸರ್ಕಾರ ಬೀಳಿಸಲು ಕಾರಣರಾದ ಅತೃಪ್ತ ಶಾಸಕರ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜೀನಾಮೆ ಕೊಟ್ಟ ಅವರು ಮುಂದೇನು ಮಾಡುತ್ತಾರೆ. ಯಾವ ಪಕ್ಷ ಸೇರುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಮುನಿರತ್ನನೂ ಸಂಪರ್ಕಿಸಿಲ್ಲ. ಬೇರೆಯ ವರೂ ಸಂಪರ್ಕಿಸಿಲ್ಲ. ಅವೆಲ್ಲ ಮಾಧ್ಯಮಗಳ ಸೃಷ್ಟಿ. ಬೇಕಿದ್ದರೆ ನಿಮ್ಮ ಬಳಿ ಇದಕ್ಕೆ ಪೂರಕವಾದ ಆಡಿಯೋ, ವಿಡಿಯೋ ದೃಶ್ಯಾವಳಿಗಳಿದ್ದರೆ ತೋರಿಸಿ ಎಂದು ಹೇಳಿದರು.

ನಾನು ಪಕ್ಷ ನಿಷ್ಠ. ಇದುವರೆಗೂ ಮಂತ್ರಿಯಾಗಿದ್ದೆ, ಈಗ ಮಾಜಿಯಾಗಿದ್ದೇನೆ. ಮರಳಿ ಜನರ ಬಳಿ ಹೋಗುತ್ತೇನೆ. ನಮ್ಮ ನಮ್ಮ ಕ್ಷೇತ್ರದ ಕಡೆ ಹೋಗಿ ಜನರ ಯೋಗ ಕ್ಷೇಮ ವಿಚಾರಿಸುವುದು, ಅವರ ಕಷ್ಟಕ್ಕೆ ಸ್ಪಂದಿಸುವುದು ನಮಗೆ ಮುಖ್ಯ ಎಂದರು.

Translate »