ಒಕ್ಕಲಿಗ ಎಂಬ ಕಾರಣಕ್ಕೆ ಮಂತ್ರಿ ಮಾಡ್ತಾರೆ-ಡಿಕೆಶಿ
ಮೈಸೂರು

ಒಕ್ಕಲಿಗ ಎಂಬ ಕಾರಣಕ್ಕೆ ಮಂತ್ರಿ ಮಾಡ್ತಾರೆ-ಡಿಕೆಶಿ

December 26, 2019

ರಾಮನಗರ,ಡಿ.25- ನಾನು ಏನೇ ವಿಶ್ವಮಾನವ ತತ್ವವನ್ನು ಹೇಳಿದರೂ, ನನ್ನ ಲೆಕ್ಕಾಚಾರ, ನನ್ನ ಮಂತ್ರಿ ಮಾಡುವುದು ನಾನು ಒಕ್ಕಲಿಗ ಎಂಬ ಕಾರಣದಿಂದಲೇ. ಅದರಿಂದ ನಾನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಶಿವಕುಮಾರ್ ಸೂಚ್ಯವಾಗಿ ಹೇಳಿದ್ದಾರೆ.

ರಾಮನಗರದಲ್ಲಿಂದು ಒಕ್ಕಲಿಗರ ಭವನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಹೆಸರು, ಧರ್ಮಗಳನ್ನು ಬದಲಾವಣೆ ಮಾಡಿ ಕೊಳ್ಳಬಹುದು ಆದರೆ ಜಾತಿಯನ್ನು ಬದ ಲಾಯಿಸಿಕೊಳ್ಳಲು ಸಾಧ್ಯವಿಲ್ಲ. ಒಕ್ಕಲಿಗ ಸಮುದಾಯ ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿರುವ ಸಮುದಾಯವಾಗಿದೆ ಎಂದರು.

ರಾಜ್ಯದ ಮೊದಲ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರಿಂದ ಹಿಡಿದು, ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯ ಮಂತ್ರಿಗಳಾದ ಎಸ್.ಎಂ.ಕೃಷ್ಣ, ಕುಮಾರಸ್ವಾಮಿ ಸೇರಿದಂತೆ ಎಲ್ಲ ಒಕ್ಕಲಿಗ ನಾಯಕರು ಜಾತ್ಯತೀತ ತತ್ವದ ಮೇಲೆ ರಾಜ್ಯದಲ್ಲಿ ಆಡಳಿತ ನಡೆಸಿದ್ದಾರೆ. ಈ ಸಮು ದಾಯ ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿದ್ದು, ಎಲ್ಲರನ್ನು ಸಹೋ ದರ ಮನೋಭಾವದಿಂದ ಕಾಣುತ್ತಿದೆ ಎಂದರು.

ಒಕ್ಕಲಿಗರು, ಭೂಮಿ ತಾಯಿ ಮಕ್ಕಳು ಎಂದು ಕರೆಸಿಕೊಳ್ಳುವ ಭಾಗ್ಯ ಎಲ್ಲರಿಗೂ ಸಾಧ್ಯವಿಲ್ಲ. ಇದು ನಮ್ಮ ಭಾಗ್ಯ. ಹೀಗಾಗಿ ಜಾತ್ಯತೀತ ತತ್ವದಲ್ಲಿ ಬದುಕುತ್ತಿರುವ ನಾವು ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಸಮಾಜಕ್ಕೆ ಉತ್ತಮ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು. ನನ್ನ ಮೇಲೆ ಸುಳ್ಳಿನ ಆರೋಪ ಮಾಡಿದಾಗ, ನನ್ನ ಮೇಲೆ ರಾಜಕೀಯವಾಗಿ ಷಡ್ಯಂತ್ರ ಮಾಡಿದಾಗ ಪಕ್ಷಭೇದ ಮರೆತು, ನನ್ನ ಜತೆ ನಿಂತ ಎಲ್ಲ ಈ ಸಮಾಜದ, ಜಿಲ್ಲೆಯ ನಾಗರಿಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಾನು ಯಾವುದೇ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಲ್ಲ, ಯಾರಿಗೋ ಮೋಸ ಮಾಡಿಲ್ಲ. ನನ್ನ ಬದುಕು ಚೆನ್ನಾಗಿತ್ತು. ನಾನು ತಪ್ಪು ಮಾಡಿದ್ದರೆ ಆ ದೇವರು ಶಿಕ್ಷೆ ನೀಡಲಿ ಆ ಶಿಕ್ಷೆ ಅನುಭವಿಸಲು ಈ ಡಿ.ಕೆ.ಶಿವಕುಮಾರ್ ಸಿದ್ಧನಿದ್ದೇನೆ ಎಂದು ಹೇಳಿದರು.

ರಾಮನಗರ ಬದಲು `ಬೆಂಗಳೂರು ದಕ್ಷಿಣ’ ಜಿಲ್ಲೆ ಮಾಡಬೇಕಿತ್ತು
ರಾಮನಗರ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಒಂದು ತಪ್ಪು ಮಾಡಿಬಿಟ್ಟರು. ಅದು ರಾಮನಗರ ಜಿಲ್ಲೆ ಮಾಡಿದ್ದು ತಪ್ಪಲ್ಲ, ಜಿಲ್ಲೆಗೆ ರಾಮನಗರ ಎಂದು ಹೆಸರಿಟ್ಟಿದ್ದು ತಪ್ಪು ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ರಾಮನಗರ ಜಿಲ್ಲೆಗೆ ಬೇಕಾದ ಸವಲತ್ತುಗಳನ್ನೆಲ್ಲಾ ನೀಡಿದ್ದರು. ಡಿಸಿ ಕಚೇರಿ, ಎಸ್‍ಪಿ ಕಚೇರಿ, ರಾಜೀವ್ ಗಾಂಧಿ ವಿವಿ ಸೇರಿದಂತೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಿದ್ದರು. ಆದರೆ ಹೆಸರು ಬೇಕಲ್ವಾ, ನಾವು ಬೆಂಗಳೂರಿನವರು ರಾಮನಗರ ಜಿಲ್ಲೆ ಅಂತಾ ಹೆಸರಿಡುವ ಬದಲು ಬೆಂಗಳೂರು ದಕ್ಷಿಣ ಎಂದು ಹೆಸರಿಡಬೇಕಿತ್ತು. ಈ ವಿಚಾರವಾಗಿ ಎಚ್‍ಡಿಕೆಯವರ ಬಳಿ ಪ್ರಸ್ತಾಪಿಸಿದ್ದೆ. ಅವರು ಏನೋ ಆಗಿ ಬಿಡ್ತು ಬಿಡಣ್ಣಾ ಎಂದರು. ಆದರೆ ಬೆಂಗಳೂರು ದಕ್ಷಿಣ ಎಂದರೆ ನಮ್ಮ ಆಸ್ತಿಯ ಮೌಲ್ಯಗಳೆಲ್ಲಾ ಹೆಚ್ಚುತ್ತಿದ್ದವು ಎಂದು ಡಿಕೆಶಿ ತಿಳಿಸಿದರು.

ಕರ್ನಾಟಕ ಎಂದಾಕ್ಷಣ 5ಕೆ ಗಳನ್ನು ನೆನೆಯಲೇಬೇಕು ಎಂದು ಈ ಹಿಂದೆಯೇ ಹೇಳಿದ್ದೇನೆ. ಅದು ಬೆಂಗಳೂರು ಕಟ್ಟಿದ್ದ ಕೆಂಪೇಗೌಡ್ರು, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ, ವಿಶ್ವಮಾನವತೆ ಸಾರಿದ ಕುವೆಂಪು, ವಿಕಾಸಸೌಧ ಕಟ್ಟಿದ ಎಸ್.ಎಂ.ಕೃಷ್ಣ ಹಾಗೂ ಸುವರ್ಣಸೌಧ ಕಟ್ಟಿದ ಕುಮಾರಸ್ವಾಮಿ ಎಂದು ತಿಳಿಸಿದರು. ಕೆಂಗಲ್ ಹನುಮಂತಯ್ಯನವರು ಬೆಂಗಳೂರನ್ನು ರಾಜದಾನಿ ಮಾಡದಿದ್ದರೇ ಒಕ್ಕಲಿಗರ ಪರಿಸ್ಥಿತಿ ಏನೋ ಆಗುತ್ತಿತ್ತು, ದಾವಣಗೆರೆ, ಹುಬ್ಬಳ್ಳಿ ರಾಜದಾನಿ ಆಗಿದ್ದರೆ ಏನಾಗುತ್ತಿತ್ತು ಎಂದು ಪ್ರಶ್ನಿಸಿಕೊಳ್ಳುವಂತೆ ಡಿಕೆಶಿ ಹೇಳಿದರು.

Translate »