ದೋಷಗಳಿದ್ದರೆ ಚರ್ಚಿಸಿ; ಕಾಯ್ದೆಯನ್ನೇ ವಿರೋಧಿಸುವುದು ಸಲ್ಲದು
ಮೈಸೂರು

ದೋಷಗಳಿದ್ದರೆ ಚರ್ಚಿಸಿ; ಕಾಯ್ದೆಯನ್ನೇ ವಿರೋಧಿಸುವುದು ಸಲ್ಲದು

December 26, 2019

ಸಿಎಎ ಕುರಿತ ಸಮಾನ ಮನಸ್ಕರ ಸಂವಾದ ಸಭೆಯಲ್ಲಿ ನಿವೃತ್ತ ಪ್ರಾಧ್ಯಾಪಕ ಬಸವರಾಜು ಅಭಿಮತ

ಮೈಸೂರು, ಡಿ.25(ಎಸ್‍ಪಿಎನ್)- ದೇಶದ ಹಿತ ದೃಷ್ಟಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ `ಪೌರತ್ವ ತಿದ್ದುಪಡಿ ಕಾಯ್ದೆ’ಯಲ್ಲಿರುವ ಸಣ್ಣ-ಪುಟ್ಟ ಲೋಪಗಳಿಗಾಗಿ, ಕಾಯ್ದೆಯನ್ನೇ ವಿರೋಧ ಮಾಡುವುದು ಸಲ್ಲದು ಎಂದು ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಬಸವರಾಜು ಅಭಿಪ್ರಾಯಪಟ್ಟರು.

ಮೈಸೂರು ಜೆಎಲ್‍ಬಿ ರಸ್ತೆಯಲ್ಲಿರುವ ಇಂಜಿನಿಯರ್‍ಗಳ ಸಂಸ್ಥೆ ಸಭಾಂಗಣ ದಲ್ಲಿ ಬುಧವಾರ ಸಮಾನ ಮನಸ್ಕರ ಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ-ಸಂವಿಧಾನ ಉಲ್ಲಂಘನೆ?’ ವಿಷಯವಾಗಿ ನಡೆದ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಮ್ಮ ನೆರೆ-ಹೊರೆ ದೇಶಗಳಿಂದ ನುಸುಳು ಕೋರರು ಭಾರತಕ್ಕೆ ಬಂದು ನೆಲೆಯೂರಿ ದ್ದಾರೆ. ಇದರಿಂದ ದೇಶದ ಭದ್ರತೆಗೆ ಅಪಾಯ ಬಂದಿದೆ. ಈ ದೃಷ್ಟಿ ಯಿಂದಲೇ `ಪೌರತ್ವ ತಿದ್ದುಪಡಿ ಕಾಯ್ದೆ’ಯ ಪ್ರಸ್ತುತತೆ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಇದರ ಅನುಷ್ಠಾನದಲ್ಲಿ ಸಣ್ಣ-ಪುಟ್ಟ ಲೋಪ ಗಳಿದ್ದರೆ ಅದನ್ನು ಸರಿಪಡಿಸಿಕೊಂಡು ಮುಂದೆ ಸಾಗುವುದು ಅನಿವಾರ್ಯ ಎಂದರು.

ಪ್ರಸ್ತುತ `ಪೌರತ್ವ ತಿದ್ದುಪಡಿ ಕಾಯ್ದೆ’ (ಸಿಎಎ) ಹಾಗೂ `ರಾಷ್ಟ್ರಿಯ ಪೌರತ್ವ ನೋಂದಣಿ’ (ಎನ್‍ಆರ್‍ಸಿ) ಬಗ್ಗೆ ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ. ಇದು ತರವಲ್ಲ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದು ಜಾರಿಗೊಳಿಸಲಾಗಿದೆ. ಈ ತಿದ್ದುಪಡಿ ಕಾಯ್ದೆಯಲ್ಲಿ ಪಕ್ಕದ 3 ದೇಶಗಳಲ್ಲಿ ಅಲ್ಪಸಂಖ್ಯಾತರಾಗಿದ್ದು, ಸಂಕಷ್ಟ ಅನುಭವಿಸಿ ಭಾರತಕ್ಕೆ ಬಂದು ಕಾಯ್ದೆಯಲ್ಲಿ ನಿರಾಶ್ರಿತರಾಗಿ ರುವವರಿಗೆ `ಪೌರತ್ವ’ ನೀಡುವ ಬಗ್ಗೆ ಉಲ್ಲೇಖ ವಾಗಿದೆ ಅಷ್ಟೇ ಎಂದು ವಿವರಿಸಿದರು.

ಇದಕ್ಕೂ ಮುನ್ನ ನಿವೃತ್ತ ಮೇಜರ್ ಜನರಲ್ ಎಸ್.ಜಿ.ಒಂಬತ್ಕರೆ ಅವರು `ಸಿಎಎ’  ರೂಪು ಗೊಂಡಿರುವ ಬಗ್ಗೆ ವಿವರಿಸುತ್ತ,  ಮೊದಲಿಗೆ 1955ರಲ್ಲಿ ಪೌರತ್ವ ಕಾಯ್ದೆ ಜಾರಿಗೆ ಬಂತು. ಕ್ರಮವಾಗಿ 1986, 1992, 2003, 2005, 2015 ಮತ್ತು 2019ರಲ್ಲಿ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಇದೀಗ ತಿದ್ದುಪಡಿಯಾಗಿ ರುವ ಪೌರತ್ವ ಕಾಯ್ದೆ ಅಂಶಗಳ ಬಗ್ಗೆ ದೇಶಾದ್ಯಂತ `ಪರ-ವಿರುದ್ಧ’ ನಡೆದಿದೆ ಎಂದು ವಿವರಿಸಿದ ಅವರು, ಕೆಲ ಅಂಶ ಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಈ ನಡುವೆ ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ `ರಾಷ್ಟ್ರೀಯ ಜನಸಂಖ್ಯಾ ನೋಂದಣಿ’ (ಎನ್‍ಪಿಆರ್)ಕಾರ್ಯಕ್ಕೆ ಚಾಲನೆ ನೀಡಿರುವುದು ಹೊಸ ವಿಷಯವಾ ಗಿದೆ ಎಂದರು.  ಪವರ್ ಪಾಯಿಂಟ್ ಪ್ರೆಸೆಂ ಟೇಷನ್ ಮೂಲಕ `ಸಿಎಎ’ಗೆ ಸಂಬಂಧಿ ಸಿದ ವಿಷಯಗಳನ್ನು ವಿವರಿಸಿದರು.

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹಾಗೂ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಈ ಸಭೆಯ ನೇತೃತ್ವ ವಹಿಸಿದ್ದರು. ಕೆಲ ಚಿಂತಕರು ಸಂವಾದದಲ್ಲಿ ಪಾಲ್ಗೊಂಡು `ಸಿಎಎ’ ಪರ-ವಿರುದ್ಧ ಗಂಭೀರ ಚರ್ಚೆ ನಡೆಸಿದರು. ಕೆಲವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತಾ ಶಾ ವಿರುದ್ಧ ಟೀಕೆ ಮಾಡಿದರು. ಆಗ ಕೆಲವರು ಸಭೆ ಯಿಂದ ಹೊರನಡೆದರು. ಈ ಕಾರ್ಯ ಕ್ರಮಕ್ಕೆ ಲಕ್ಷ್ಮೀಪುರಂ ಠಾಣೆಯ 30ಕ್ಕೂ ಹೆಚ್ಚು ಪೋಲಿಸರು ಭದ್ರತೆ ಒದಗಿಸಿದ್ದರು.

Translate »