ಹಂಚಿಕೆಯಾಗಿದ್ದ 1132 ನಿವೇಶನಗಳ ಮಂಜೂರಾತಿ ರದ್ದಿಗೆ ಮುಡಾ ನಿರ್ಧಾರ
ಮೈಸೂರು

ಹಂಚಿಕೆಯಾಗಿದ್ದ 1132 ನಿವೇಶನಗಳ ಮಂಜೂರಾತಿ ರದ್ದಿಗೆ ಮುಡಾ ನಿರ್ಧಾರ

August 3, 2019

ಮೈಸೂರು, ಆ.2(ಆರ್‍ಕೆ)-ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ರೈತರಿಗೆ ನೂರಾರು ಕೋಟಿ ರೂ. ಪರಿಹಾರ ಮತ್ತು ಅದರ ಬಡ್ಡಿ ಬಾಕಿಯೂ ಸೇರಿದಂತೆ ಭಾರೀ ಆಡಳಿತ ನಿರ್ವಹಣಾ ವೆಚ್ಚದಿಂದಾಗಿ ಆರ್ಥಿಕ ಸಂಕಷ್ಟ ದಲ್ಲಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರ (ಮುಡಾ)ಕ್ಕೆ ಒಳ್ಳೆಯ ಕಾಲ ಬಂದಿದೆ.

ಅರ್ಜಿ ಸಲ್ಲಿಸಿ, 15 ವರ್ಷಗಳಿಂದ ಕಾಯು ತ್ತಿರುವ ಸುಮಾರು ಒಂದು ಲಕ್ಷಕ್ಕೂ ಅಧಿಕ ನಿವೇಶನಾಕಾಂಕ್ಷಿ (ಕೆಲವರು ನಿಧನರಾಗಿ ದ್ದಾರೆ)ಗಳಿಗೆ ಬಡಾವಣೆ ಅಭಿವೃದ್ಧಿಪಡಿಸಿ, ನಿವೇಶನ ನೀಡಲಾಗದ ಕಾರಣ ಮುಡಾ ವರಮಾನವೂ ಅಷ್ಟಕ್ಕಷ್ಟೇ. ವಾಹನಗಳ ನಿರ್ವಹಣೆ, ಸಿಬ್ಬಂದಿಗಳ ವೇತನ, ಕಚೇರಿ ನಿರ್ವಹಣಾ ವೆಚ್ಚ, ಭದ್ರತಾ ಸಿಬ್ಬಂದಿ, ಹೊರ ಗುತ್ತಿಗೆ ಆಧಾರದ ಡೇಟಾ ಎಂಟ್ರಿ ಆಪರೇಟರ್‍ಗಳ ಸಂಭಾವನೆ, ಕೋರ್ಟ್ ಕೇಸ್‍ಗಳಿಗೆ ವಕೀಲರುಗಳಿಗೆ ಸಂಭಾವನೆ, ಬಾಕಿ ಉಳಿಸಿಕೊಂಡಿರುವ ರೈತರ ಪರಿಹಾರ ಹಣ, ಅದರ ಮೇಲಿನ ಬಡ್ಡಿ ಹಾಗೂ ಇನ್ನಿತರ ವೆಚ್ಚಗಳನ್ನು ಭರಿಸಲು ಪ್ರಾಧಿಕಾರವು ವಿವಿಧ ಬಡಾವಣೆಗಳ ಮೂಲೆ ಮತ್ತು ಸಿಎ ನಿವೇಶನಗಳ ಹರಾಜು ಮಾರಾಟದಿಂದ ಬರುವ ಹಣವನ್ನೇ ಅವಲಂಬಿಸಿದೆ. ಖಾಸಗಿ ಬಡಾವಣೆಗಳಿಗೆ ನಕ್ಷೆ ಅನುಮೋದನೆ, ನಿವೇಶನ ಬಿಡುಗಡೆ, ಮನೆ ನಿರ್ಮಿಸಲು ಪ್ಲಾನ್ ಅಪ್ರೂವಲ್, ನಿವೇಶನ ಮತ್ತು ಕಟ್ಟಡಗಳ ತೆರಿಗೆ, ಸಿಆರ್ ಶುಲ್ಕ, ದಂಡ ಶುಲ್ಕ, ಖಾತಾ ನೋಂದಣಿ, ವರ್ಗಾವಣೆ, ಕ್ರಯ ವರ್ಗಾವಣೆ ಸೇರಿದಂತೆ ಹಲವು ಬಾಬತ್ತಿನ ಶುಲ್ಕ ಸಂಗ್ರಹವಾಗುತ್ತಿದೆಯಾದರೂ, ಮೈಸೂರು ನಗರ ಹಾಗೂ ಹೊರವಲಯದ ರಸ್ತೆ, ಚರಂಡಿ, ಕುಡಿಯುವ ನೀರು, ಉದ್ಯಾನ, ಸಮುದಾಯ ಭವನ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಮುಡಾಗೆ ಬಹುಪಾಲು ಹಣ ಖರ್ಚಾಗಿ ಹೋಗುತ್ತದೆ. ಪ್ರಾಧಿಕಾರವನ್ನು ಸಂಕಷ್ಟದಿಂದ ಪಾರು ಮಾಡಿ ಆರ್ಥಿಕವಾಗಿ ಸಬಲಗೊಳಿಸಲು ಪಾಳು ಬಿದ್ದಿರುವ ನಿವೇಶನಗಳನ್ನು ಗುರುತಿಸಿ ಮಾರಾಟ ಮಾಡುವ ಮೂಲಕ ಆದಾಯ ಸೃಜಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

1132 ನಿವೇಶನಗಳ ಮಂಜೂರಾತಿ ರದ್ದು: ನಿಯಮಾವಳಿಯಂತೆ ಮಂಜೂರಾದ, ನಿಗದಿತ ಅವಧಿಯಲ್ಲಿ ಪೂರ್ಣ ಹಣ ಪಾವತಿಸದ ಮೈಸೂರಿನ ವಿವಿಧ ಬಡಾವಣೆಯಲ್ಲಿನ 1994ರಿಂದ ಈವರೆಗಿನ 20×30, 30×40 ಹಾಗೂ 50×80 ಅಡಿ ಅಳತೆಯ ನಿವೇಶನಗಳ ಮಂಜೂರಾತಿ ರದ್ದು ಮಾಡಲು ನಿರ್ಧರಿಸಿರುವ ಮುಡಾ ಆಡಳಿತ ಮಂಡಳಿ, ಮೂರ್ನಾಲ್ಕು ದಿನಗಳಲ್ಲಿ ಅಧಿಸೂಚನೆ ಹೊರಡಿಸಲು ಅಂತಿಮ ಸಿದ್ಧತೆ ಮಾಡಿಕೊಂಡಿದೆ. ರದ್ದುಪಡಿಸಿದ 1132 ನಿವೇಶನಗಳ ಪೈಕಿ ಶೇಕಡಾ 75ರಷ್ಟು ಸೈಟುಗಳನ್ನು ಹರಾಜು ಪ್ರಕ್ರಿಯೆಗೊಳಪಡಿಸಿ ಪ್ರಸ್ತುತ ನೋಂದಣಾಧಿಕಾರಿ ಕಚೇರಿ (ಎಸ್‍ಆರ್) ಮಾರ್ಗಸೂಚಿ ದರದ ಆಧಾರದ ಮೇಲೆ ಮಾರಾಟ ಮಾಡಲು ಪ್ರಾಧಿಕಾರವು ತಯಾರಿ ನಡೆಸಿದೆ.

300 ಕೋಟಿ ರೂ. ಆದಾಯ ನಿರೀಕ್ಷೆ: ಹೀಗೆ ಹರಾಜು ಮಾಡಿದಲ್ಲಿ ಭೂಮಿ ಬೆಲೆ ಗಗನಕ್ಕೇರಿರುವುದರಿಂದ ನಿವೇಶನಗಳ ಹರಾಜು ಮಾರಾಟದಿಂದ ಸರಿ ಸುಮಾರು 250 ರಿಂದ 300 ಕೋಟಿ ರೂ. ವರಮಾನ ಬರಬಹುದೆಂದು ನಿರೀಕ್ಷಿಸಲಾಗಿದೆ.

1132ರ ಪೈಕಿ ಉಳಿದ ಶೇಕಡಾ 25 ರಷ್ಟು ನಿವೇಶನಗಳನ್ನು ‘ಎ’, ‘ಬಿ’ ಮತ್ತು ‘ಸಿ’ ವರ್ಗ (ಕ್ಯಾಟಗರಿ)ವನ್ನಾಗಿ ವಿಂಗಡಿಸಿ ಕರ್ನಾಟಕ ನಿವೇಶನಗಳ ಹಂಚಿಕೆ ನಿಯಮಾವಳಿ ಪ್ರಕಾರ ಮರು ಮಂಜೂರಾತಿಗೆ ಚಿಂತನೆ ನಡೆಸಲಾಗಿದೆಯಾದರೂ, ಒಂದು ವೇಳೆ ಹರಾಜಿಗೆ ಉತ್ತಮ ಪ್ರತಿಕ್ರಿಯೆ ಬಂದಲ್ಲಿ ಆ ನಿವೇಶನಗಳನ್ನೂ ಹರಾಜು ಮೂಲಕವೇ ಸಂಪನ್ಮೂಲ ಕ್ರೋಢೀಕರಿಸಲು ಪ್ರಾಧಿಕಾರ ಮುಂದಾಗಿದೆ.

9,500 ನಿವೇಶನ ಗುರುತು: ಪ್ರಾಧಿಕಾರದ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಹಂಚಿಕೆಯಾಗದೇ ಉಳಿದಿರುವ ವಿವಿಧ ಅಳತೆಯ ಒಟ್ಟು 9,500 ನಿವೇಶನಗಳಿರುವುದನ್ನು ಮುಡಾ ಆಯುಕ್ತ ಪಿ.ಎಸ್. ಕಾಂತರಾಜು ಅಧಿಕಾರಿಗಳಿಂದ ಗುರುತು ಮಾಡಿಸಿದ್ದಾರೆ.

Translate »