ಮೈಸೂರು, ಸೆ.26(ಆರ್‍ಕೆ)- ಚಿನ್ನದ ಸರ ಹಾಗೂ ದ್ವಿಚಕ್ರ ವಾಹನಗಳನ್ನು ಕಳ್ಳತನ ಸಂಬಂಧ ನಾಲ್ವರನ್ನು ಮೈಸೂರಿನ ಕೆ.ಆರ್. ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರಿನ ಮಂಡಿಮೊಹಲ್ಲಾ, 2ನೇ ಈದ್ಗಾ ನಿವಾಸಿ ಅಮ್ಜದ್ ಮಗ ಮೊಹಮದ್ ಫರಾಜ್ ಅಲಿಯಾಸ್ ಸಾಹಿಲ್, ಅಲಿಯಾಸ್ ದೇವಿ(28), ಹುಣಸೂರು ಪಟ್ಟಣದ ಶಬೀರ್ ನಗರ ನಿವಾಸಿ ಸಮೀವುಲ್ಲಾ ಮಗ ನಿಮ್ರಾನ್ ಖಾನ್ ಅಲಿಯಾಸ್ ನಿಮ್ರಾನ್ (21), ಬೆಂಗ ಳೂರಿನ ಕೆ.ಜಿ. ಹಳ್ಳಿ ಭಾರತ ಮಾತಾ ಲೇಔಟ್ 4ನೇ ಕ್ರಾಸ್ ನಿವಾಸಿ ಕೌಸರ್‍ಖಾನ್ ಮಗ ಅರ್ಬಾಜ್ ಖಾನ್ ಅಲಿಯಾಸ್ ಅರ್ಬಾಜ್ (24) ಹಾಗೂ ಸದ್ದಾಂ ನಗರದ ಡಾ. ಅಂಬೇಡ್ಕರ್ ಮುಖ್ಯರಸ್ತೆ ನಿವಾಸಿ ರಿಯಾಜ್ ಖಾನ್ ಮಗ ಜಿಬ್ರಾನ್ ಖಾನ್ ಅಲಿಯಾಸ್ ಜಿಬ್ಬು ಅಲಿಯಾಸ್ ಇರ್ಫಾನ್(21) ಬಂಧಿತ ಆರೋಪಿಗಳಾಗಿದ್ದು, ಅವರಿಂದ 14,10,000 ರೂ. ಮೌಲ್ಯದ 6 ಚಿನ್ನದ ಸರ ಹಾಗೂ ವಿವಿಧ ಮಾದರಿಯ ಏಳು ದ್ವಿಚಕ್ರವಾಹನ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೈಸೂರಿನ ಕೆ.ಆರ್. ಪೊಲೀಸ್ ಠಾಣೆ ಆವರಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮೈಸೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಗೀತಾ ಪ್ರಸನ್ನ, ಸೆಪ್ಟೆಂಬರ್ 21ರಂದು ಮಧ್ಯಾಹ್ನ 3 ಗಂಟೆ ವೇಳೆಗೆ ಚಾಮುಂಡಿಬೆಟ್ಟದಲ್ಲಿ ಪೊಲೀಸರು ಗಸ್ತಿನಲ್ಲಿದ್ದಾಗ ಉತ್ತನಹಳ್ಳಿ ಕಡೆಗೆ ಹೋಗುವ ಜಂಕ್ಷನ್ ಬಳಿ ನಾಲ್ವರು ಯುವಕರು ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್ ಮತ್ತು ಡಿಯೋ ಸ್ಕೂಟರ್ ನಿಲ್ಲಿಸಿಕೊಂಡು ನಿಂತಿದ್ದರು. ಪೊಲೀಸ್ ಜೀಪನ್ನು ಕಂಡ ತಕ್ಷಣ ಓಡಿ ಹೋಗಲು ಯತ್ನಿಸಿದಾಗ ಸಂಶಯಗೊಂಡ ಪೊಲೀಸ್ ಸಿಬ್ಬಂದಿ ಸುತ್ತುವರಿದು, ಅವರನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ ವೇಳೆ ಮೈಸೂರು, ಬೆಂಗಳೂರು, ಮಂಡ್ಯ ಸೇರಿದಂತೆ ವಿವಿಧೆಡೆ ಚಿನ್ನದ ಸರ ಹಾಗೂ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ದ್ದಾರೆಂಬುದು ತಿಳಿಯಿತು ಎಂದರು.
ಮೈಸೂರಿನ ಕೆ.ಆರ್. ಠಾಣೆಯ ವ್ಯಾಪ್ತಿ ಯಲ್ಲಿ 4, ವಿದ್ಯಾರಣ್ಯಪುರಂ ಹಾಗೂ ಕುವೆಂಪು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದೊಂದು ಚಿನ್ನದ ಸರ ಕಳವು ಪ್ರಕರಣ ವಲ್ಲದೆ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿ, ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದೊಂದು ದ್ವಿಚಕ್ರ ವಾಹನ ಕಳವು ಪ್ರಕರಣದಲ್ಲಿ ನಾಲ್ವರು ಯುವಕರು ಭಾಗಿಯಾಗಿದ್ದಾರೆಂಬ ವಿಷಯ ಬಯಲಿಗೆ ಬಂದಿತು. ಆರೋಪಿಗಳಿಂದ ಒಟ್ಟು 14.10 ಲಕ್ಷ ರೂ. ಮೌಲ್ಯದ 7 ದ್ವಿಚಕ್ರವಾಹನ ಗಳು ಹಾಗೂ 6 ಚಿನ್ನದ ಸರಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಗೀತಾ ಪ್ರಸನ್ನ ತಿಳಿಸಿದರು.
50 ಪ್ರಕರಣಗಳಲ್ಲಿ ಭಾಗಿ : ಬಂಧಿತರ ಪೈಕಿ ಪ್ರಮುಖ ಆರೋಪಿ ಮೊಹಮದ್ ಫರಾಜ್ ಎಂಬಾತ ಈ ಹಿಂದೆ ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ವಿವಿಧೆಡೆ 50ಕ್ಕೂ ಹೆಚ್ಚು ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಮೈಸೂರಿನ ಕೆ.ಆರ್.ಠಾಣೆಯಲ್ಲಿ 1, ಎನ್.ಆರ್. ಠಾಣೆಯಲ್ಲಿ 2, ಲಷ್ಕರ್ ಠಾಣೆಯಲ್ಲಿ 2, ನಜರ್‍ಬಾದ್ ಠಾಣೆಯಲ್ಲಿ 3, ವಿವಿ.ಪುರಂ ಠಾಣೆಯಲ್ಲಿ 3, ಜಯಲಕ್ಷ್ಮಿಪುರಂ ಠಾಣೆ ಯಲ್ಲಿ 2, ಅಶೋಕಪುರಂ ಠಾಣೆಯಲ್ಲಿ 1, ವಿಜಯನಗರ ಠಾಣೆಯಲ್ಲಿ 5, ಉದಯಗಿರಿ ಠಾಣೆಯಲ್ಲಿ 1, ಸರಸ್ವತಿಪುರಂ ಠಾಣೆಯಲ್ಲಿ 2, ವಿದ್ಯಾರಣ್ಯಪುರಂ ಠಾಣೆಯಲ್ಲಿ 2, ಲಕ್ಷ್ಮೀಪುರಂ ಠಾಣೆಯಲ್ಲಿ 1, ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ 3, ಸುಬ್ರಹ್ಮಣ್ಯ ಪುರಂ ಠಾಣೆಯಲ್ಲಿ 2, ಗಿರಿನಗರ ಠಾಣೆಯಲ್ಲಿ 1, ಬಸವನಗುಡಿ ಠಾಣೆಯಲ್ಲಿ 1, ನಂಜನಗೂಡು ಪಟ್ಟಣ ಠಾಣೆಯಲ್ಲಿ 1, ಕೊಳ್ಳೇಗಾಲ ಟೌನ್ ಪೊಲೀಸ್ ಠಾಣೆಯಲ್ಲಿ 1, ಕೆ.ಆರ್.ನಗರ ಠಾಣೆಯಲ್ಲಿ 1, ಶ್ರೀರಂಗಪಟ್ಟಣದಲ್ಲಿ 1, ಮಂಡ್ಯ ಪಶ್ಚಿಮ ಠಾಣೆಯಲ್ಲಿ 1 ಕಳ್ಳತನ ಪ್ರಕರಣ ಮೊಹಮದ್ ಫರಾಜ್ ವಿರುದ್ದ ದಾಖಲಾಗಿರುವುದು ಇದೀಗ ಬೆಳಕಿಗೆ ಬಂದಿದೆ ಎಂದು ಗೀತಾ ಪ್ರಸನ್ನ ತಿಳಿಸಿದರು.
ಅರ್ಬಾಜ್‍ಖಾನ್ ವಿರುದ್ದ ಬೆಂಗಳೂರಿನ ಕಳಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ 1 ಹಾಗೂ ಜಬ್ರೀನ್ ಖಾನ್ ವಿರುದ್ದ ಬೆಂಗಳೂರಿನ ವಿದಾನಸೌಧ ಪೊಲೀಸ್ ಠಾಣೆಯಲ್ಲಿ 1 ಕಳವು ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ. ಈ ನಾಲ್ವರು ಆರೋಪಿಗಳು ಹೊಂಚು ಹಾಕಿ ಮಹಿಳೆಯರಿಂದ ಸರ ಅಪರಹಣ ಮಾಡುವುದು ಹಾಗೂ ನಕಲಿ ಕೀ ಬಳಸಿ ದ್ವಿಚಕ್ರವಾಹನಗಳನ್ನು ಪಾರ್ಕಿಂಗ್ ಸ್ಥಳದಿಂದ ಕಳವು ಮಾಡಿದ ನಂತರ ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಐಷಾರಾಮಿ ಜೀವನ ನಡೆಸುವುದು ಚಾಳಿಯಾಗಿತ್ತು.
ಡಿಸಿಪಿಗಳಾದ ಡಾ.ಎ.ಎನ್. ಪ್ರಕಾಶ್‍ಗೌಡ, ಗೀತಾ ಪ್ರಸನ್ನ ಅವರ ಮಾರ್ಗದರ್ಶನ ದಂತೆ ಕೆ.ಆರ್. ಉಪ ವಿಭಾಗದ ಎಸಿಪಿ ಪೂರ್ಣಚಂದ್ರ ತೇಜಸ್ವಿ ಅವರ ಮೇಲ್ವಿಚಾರಣೆಯಲ್ಲಿ ನಡೆದ ಪತ್ತೆ ಕಾರ್ಯಾಚರಣೆಯ ನೇತೃತ್ವವನ್ನು ಕೆ.ಆರ್. ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ಎಲ್.ಶ್ರೀನಿವಾಸ್ ಮತ್ತು ಸಬ್‍ಇನ್‍ಸ್ಪೆಕ್ಟರ್ ಸಿ.ಎನ್. ಸುನೀಲ್ ವಹಿಸಿದ್ದರು. ಸಿಬ್ಬಂದಿಗಳಾದ ಡಿ.ಬಿ . ಸುರೇಶ್, ಮೊಖದರ್ ಶರೀಫ್, ಗಂಗಾಧರ, ಎಂ. ಶ್ರೀನಿವಾಸ ಪ್ರಸಾದ್, ಎಸ್.ಸತೀಶ್ ಕುಮಾರ್, ಅಭಿಷೇಕ್ ಬೆಂಜಮಿನ್, ಎಂ. ಮಧು, ಸರತ್‍ಕುಮಾರ್, ಎನ್. ರಾಗಿಣಿ, ತಾಂತ್ರಿಕ ಘಟಕದ ಇನ್‍ಸ್ಪೆಕ್ಟರ್ ಲೋಲಾಕ್ಷಿ, ಸಿಬ್ಬಂದಿಗಳಾದ ಮಂಜುನಾಥ, ಗುರುದೇವ ಆರಾಧ್ಯ, ಕುಮಾರ್, ಶ್ಯಾಮ್ ರವರು ಈ ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.