ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಮುಷ್ಕರ
ಹಾಸನ

ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಮುಷ್ಕರ

June 18, 2019

ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್: ರೋಗಿಗಳ ಪರದಾಟ
ಹಾಸನ: ಪಶ್ಚಿಮ ಬಂಗಾಳದ ಎನ್‍ಆರ್‍ಎಸ್ ಆಸ್ಪತ್ರೆಯಲ್ಲಿ ವೈದ್ಯನ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ಅಖಿಲ ಭಾರತ ವೈದ್ಯಕೀಯ ಸಂಘ (ಐಎಂಎ) ಕರೆ ನೀಡಿರುವ ವೈದ್ಯಕೀಯ ಸೇವೆ ಬಂದ್‍ಗೆ ಹಾಸನ ಜಿಲ್ಲಾ ಐಎಂಎ ಘಟಕ ಬೆಂಬಲ ವ್ಯಕ್ತಪಡಿಸಿದ್ದು, ಜಿಲ್ಲೆಯಲ್ಲಿ ಸೋಮವಾರ ಖಾಸಗಿ ಆಸ್ಪತ್ರೆಗಳ ಒಪಿಡಿ ಸೇವೆ ಸ್ಥಗಿತಗೊಂಡು, ಚಿಕಿತ್ಸೆಗಾಗಿ ರೋಗಿಗಳು ಅಲೆದಾಟ ನಡೆಸಿದರು.

ನಗರದ ಎಲ್ಲಾ ಖಾಸಗಿ ಆಸ್ಪತ್ರೆಗಳು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ತುರ್ತು ಚಿಕಿತ್ಸೆ ಹೊರತುಪಡಿಸಿ ಇತರೆ ಯಾವುದೇ ಸೇವೆ ನೀಡಲಿಲ್ಲ.

ಹೊರ ರೋಗಿಗಳ ವಿಭಾಗ (ಒಪಿಡಿ) ಪೂರ್ಣ ಬಂದ್ ಮಾಡಿ, `ಐಎಂಎ ನಡೆಸು ತ್ತಿರುವ ರಾಷ್ಟ್ರವ್ಯಾಪಿ ಮುಷ್ಕರ ಬೆಂಬಲಿಸಿ ಹೊರರೋಗಿ ವಿಭಾಗ ಬಂದ್ ಮಾಡ ಲಾಗಿದೆ’ ಎಂಬ ಚೀಟಿ ಅಂಟಿಸಲಾಗಿತ್ತು.

ನಗರದ ಎಸ್‍ಎಸ್‍ಎಂ ಆಸ್ಪತ್ರೆ, ಮಂಗಳಾ ಆಸ್ಪತ್ರೆ, ಜನಪ್ರಿಯ, ಹೊಯ್ಸಳ, ಸ್ಪರ್ಶ್, ಎನ್‍ಡಿಆರ್‍ಕೆ, ರಾಜೀವ್, ಹೇಮಾವತಿ, ಮಲ್ನಾಡು, ಮಣಿ ಆಸ್ಪತ್ರೆ ಸೇರಿದಂತೆ ಎಲ್ಲಾ ಕ್ಲಿನಿಕ್‍ಗಳು ಸೇವೆ ಸ್ಥಗಿತಗೊಳಿಸಿದ್ದವು.

ರೋಗಿಗಳ ಅಲೆದಾಟ: ಖಾಸಗಿ ಆಸ್ಪತ್ರೆಯ ವೈದ್ಯರ ಮುಷ್ಕರದ ಬಗ್ಗೆ ಅರಿವಿಲ್ಲದೇ ದೂರದ ಊರುಗಳಿಂದ ಬಂದಿದ್ದ ರೋಗಿ ಗಳು ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ ನಡೆಸುತ್ತಿದ್ದ ದೃಶ್ಯ ಕಂಡು ಬಂದಿತು. ಕೆಲವು ಆಸ್ಪತ್ರೆ ಎದುರು ಚಿಕಿತ್ಸೆಗಾಗಿ ಕಾದು ಕುಳಿತಿದ್ದರು. ಸಂಜೆ 6ರ ಬಳಿಕ ಸೇವೆ ಒದಗಿಸಲು ಆರಂಭಿಸಲಾಯಿತು.

ಖಾಸಗಿ ವೈದ್ಯರ ಮುಷ್ಕರದ ಹಿನ್ನಲೆ ಯಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು. ವೈದ್ಯರಿಗೆ ನೀಡಲಾಗಿದ್ದ ರಜೆ ರದ್ದುಗೊಳಿಸಿ ವಾಪಸ್ ಕರೆಸಲಾಗಿತ್ತು. ಆದರೆ, ಮುಷ್ಕರಕ್ಕೆ ಬೆಂಬಲ ನೀಡುವ ಸಲುವಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸಾಂಕೇತ ವಾಗಿ ಒಪಿಡಿ ಸೇವೆಯನ್ನು ಒಂದೂವರೆ ತಾಸು ಸ್ಥಗಿತಗೊಳಿಸಲಾಗಿತ್ತು.

ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ: ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ನಗರದ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ವೈದ್ಯರು ಕಾಲೇಜಿನ ಆವರಣದಲ್ಲಿ ತೋಳಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ದೇಶದ ಒಂದಲ್ಲ ಒಂದು ಕಡೆ ರೋಗಿಗಳ ಕಡೆಯವರು ಮತ್ತು ಸಮಾಜ ವಿರೋಧಿ ಗುಂಪುಗಳು ಚಿಕಿತ್ಸೆ ವಿಫಲ ವಾಗಿದೆ ಎಂದು ಆರೋಪಿಸಿ ವೈದ್ಯರ ಮೇಲೆ ಮಾನಸಿಕವಾಗಿ ಮತ್ತು ದೈಹಿಕ ವಾಗಿ ಹಲ್ಲೆಗಳ ಪ್ರಕರಣಗಳು ನಿರಂತರ ವಾಗಿ ನಡೆಯುತ್ತಿದೆ. ಭಾರತೀಯ ವೈದ್ಯಕೀಯ ಸಂಘ ಮತ್ತು ಹಾಸನ ವೈದ್ಯಕೀಯ ವಿಜ್ಞಾನಗಳ ಸಂಘ ಹಾಗೂ ಬೋಧಕರ ಸಂWದಿಂದ ಇಂತಹ ಘಟನೆಯನ್ನು ತೀವ್ರವಾಗಿ ಖಂಡಿಸುವು ದಾಗಿ ಪ್ರತಿಭಟನಾಕಾರರು ಹೇಳಿದರು.
ಇಂತಹ ಘಟನೆಗಳಿಂದ ಮುಂದಿನ ದಿನಗಳಲ್ಲಿ ಮೆಡಿಕಲ್ ಶಿಕ್ಷಣ ಪಡೆಯಲು ಮುಂದೆ ಬರುವವರ ಸಂಖ್ಯೆ ಕಡಿಮೆ ಆಗಲಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳು ಕಡಿಮೆ ಆಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಯಾವ ವೈದ್ಯನಾಗಿರಲಿ ಒಬ್ಬ ರೋಗಿ ಬಂದಾಗ ಉತ್ತಮವಾಗಿಯೇ ಚಿಕಿತ್ಸೆ ಮಾಡುತ್ತಾರೆ. ಕೆಲ ಸಂದರ್ಭದಲ್ಲಿ ರೋಗಿ ಯನ್ನು ಬೇರೆ ಆಸ್ಪತ್ರೆಗೆ ಹೋಗಲು ಸೂಚಿ ಸುತ್ತಾರೆ. ಆರೋಗ್ಯ ಸಚಿವರು ಹೇಳಿ ದಂತೆ ವೈದ್ಯರ ಮೇಲಿನ ಹಲ್ಲೆ ಪ್ರಕರಣ ಖಂಡಿಸಿ ಸೋಮವಾರ ಬೆಳಿಗ್ಗೆ ಒಂದು ಗಂಟೆಗಳ ಕಾಲ ಸೇವೆ ನಿಲ್ಲಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮೆಡಿಕಲ್ ವಿದ್ಯಾರ್ಥಿ ಗಳು ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ಘೋಷಣೆ ಕೂಗಿದರು.

ಸರ್ಕಾರಿ ಆಸ್ಪತ್ರೆಯಲ್ಲೂ ಒಪಿಡಿ ಸ್ಥಗಿತ: ಆಕ್ರೋಶ
ವೈದ್ಯ ವಿದ್ಯಾರ್ಥಿಗಳು ಹಾಗೂ ವೈದ್ಯರು ಕಪ್ಪು ಪಟ್ಟಿ ಧರಿಸಿ ಸೋಮವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದರು. ಇದರಿಂದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ಒಪಿಡಿ ಸೇವೆ ಸ್ಥಗಿತಗೊಂಡಿತು.

ಮುಷ್ಕರದ ಮಾಹಿತಿ ಇಲ್ಲದೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಂದ ಬಂದಿದ್ದ ಸಾವಿರಾರು ರೋಗಿಗಳು ಸರ್ಕಾರಿ ಆಸ್ಪತ್ರೆಯಲ್ಲೂ ಒಪಿಡಿ ಸೇವೆ ಸ್ಥಗಿತಗೊಳಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ ಹುಡುಕಿಕೊಂಡು ಹೋದರು. ಅಲ್ಲಿಯೂ ಒಪಿಡಿ ಬಂದ್ ಆದ ಕಾರಣ ಅನಿವಾರ್ಯವಾಗಿ ಮತ್ತೆ ಸರ್ಕಾರಿ ಆಸ್ಪತ್ರೆಗೆ ಬಂದು ತಾಸುಗಟ್ಟಲೇ ಕಾದು ಚಿಕಿತ್ಸೆ ಪಡೆದರು. ಚಿಕಿತ್ಸೆಗಾಗಿ ಅಲೆದಾಡಬೇಕಾದ ಸ್ಥಿತಿ ಉಂಟಾಯಿತು. ಒಪಿಡಿ ಮುಂದೆ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂತು.

ಜಿಲ್ಲಾ ಶಸ್ತ್ರಚಿಕಿತ್ಸಕ ಕೃಷ್ಣಮೂರ್ತಿ ಪತ್ರಿಕೆಯೊಂದಿಗೆ ಮಾತನಾಡಿ, `ಆಸ್ಪತ್ರೆಯ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ರೋಗಿಗಳಿಗೆ ತೊಂದರೆ ಆಗದಂತೆ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆ ಮುಷ್ಕರದಿಂದ ರೋಗಿಗಳ ಸಂಖ್ಯೆ ಹೆಚ್ಚಾಗಿದೆ’ ಎಂದು ತಿಳಿಸಿದರು.

ಅರಸೀಕೆರೆಗೂ ತಟ್ಟಿದ ವೈದ್ಯರ ಮುಷ್ಕರದ ಬಿಸಿ
ಅರಸೀಕೆರೆ: ಪಶ್ಚಿಮ ಬಂಗಾಳದ ಕೊಲ್ಕತ್ತಾ ಎನ್‍ಆರ್‍ಎಸ್ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ನಡೆದ ಹಲ್ಲೆಯನ್ನು ವಿರೋಧಿಸಿ ದೇಶವ್ಯಾಪ್ತಿ ಐಎಂಎ ಕರೆ ನೀಡಿದ್ದ ಮುಷ್ಕರಕ್ಕೆ ನಗರದಲ್ಲಿಯೂ ಬೆಂಬಲ ವ್ಯಕ್ತವಾಯಿತು.

ಮುಷ್ಕರದಿಂದ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ವಿಭಾಗ ಸಂಪೂರ್ಣ ಬಂದ್ ಮಾಡಿ, ಒಳ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲಾಯಿತು. ಇದರಿಂದ ಸರ್ಕಾರಿ ಜೆ.ಸಿ. ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿತ್ತು.

ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಾದ ಡಾ.ನಾಗಭೂಷಣ್ ಆಸ್ಪತ್ರೆ, ಡಾ.ಶಿವಕುಮಾರ್ ಆಸ್ಪತ್ರೆ ಮತ್ತು ಡಾ.ಶಿಬಿರ ಹೆಗಡೆ ಆಸ್ಪತ್ರೆಗಳು ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳು ಒಳ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಿದ್ದು ಕಂಡುಬಂದಿತು.

ಸರ್ಕಾರಿ ಜೆ.ಸಿ.ಆಸ್ಪತ್ರೆಯಲ್ಲಿ ಎಂದಿನಂತೆ ಹೊರ ಮತ್ತು ಒಳ ರೋಗಿಗಳಿಗೆ ವೈದ್ಯರು ಚಿಕಿತ್ಸೆ ನೀಡಿದರು. ತಾಲೂಕಿನ ವಿವಿಧ ಕಡೆ ಇರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎಂದಿನಂತೆ ವೈದ್ಯರು ಕರ್ತವ್ಯಕ್ಕೆ ಹಾಜರಾಗಿ ರೋಗಿಗಳಿಗೆ ಚಿಕಿತ್ಸೆ ನೀಡಿದರು.

Translate »