ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಇಂದು ಮಹತ್ವದ ತೀರ್ಪು
ಮೈಸೂರು

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಇಂದು ಮಹತ್ವದ ತೀರ್ಪು

September 30, 2020

ಲಖನೌ, ಸೆ.29- ಶತಮಾನಗಳಷ್ಟು ಹಳೆಯದಾದ ಶ್ರೀ ರಾಮಮಂದಿರದ ದಾವೆ ಇತ್ಯರ್ಥವಾಗಿ ಕೆಲ ತಿಂಗಳು ಕಳೆದಿವೆ. ಈಗ ಬಾಬ್ರಿ ಮಸೀದಿ ಕೇಸ್ ಅಂತಿಮಘಟ್ಟ ತಲುಪಿದ್ದು, ತೀರ್ಪು ನಾಳೆ (ಬುಧವಾರ) ಪ್ರಕಟವಾಗಲಿದೆ. ಇಡೀ ದೇಶದ ಕಣ್ಣು ಲಖನೌ ದತ್ತ ನೆಟ್ಟಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಇದಾಗಲೇ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಪ್ರದೇಶ ಸೇರಿದಂತೆ ಎಲ್ಲೆಡೆ ಭಾರೀ ಭದ್ರತೆ ಕೈಗೊಳ್ಳಲಾಗಿದೆ ಎನ್ನಲಾಗಿದೆ. 27 ವರ್ಷ ಗಳಷ್ಟು ಹಳೆಯದಾದ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಇದಾಗಿದ್ದು, ಉತ್ತರ ಪ್ರದೇಶದ ಲಖನೌನ ಸಿಬಿಐ ವಿಶೇಷ ನ್ಯಾಯಾಲಯ ನಾಳೆ ಅಂತಿಮ ತೀರ್ಪು ಪ್ರಕಟಿಸಲಿದೆ. ಪ್ರಕರಣದ 32 ಆರೋಪಿಗಳೂ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಿಬಿಐ ಕೋರ್ಟ್ ಕಳೆದ ವಿಚಾರಣೆ ವೇಳೆಯೇ ನಿರ್ದೇಶಿಸಿತ್ತು. ಬಿಜೆಪಿಯ ಹಿರಿಯ ನಾಯಕರಾದ 92 ವರ್ಷದ ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಉಮಾಭಾರತಿ, ಕಲ್ಯಾಣ್ ಸಿಂಗ್, ವಿನಯ್ ಕಟಿಯಾರ್, ಸಾಕ್ಷಿ ಮಹಾರಾಜ್ ಸೇರಿ ದಂತೆ 32 ಮಂದಿ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ. ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಹರಡುವುದು (ಸೆಕ್ಷನ್ 153 ಎ), ರಾಷ್ಟ್ರೀಯ ಏಕೀಕರಣದ ಮೇಲೆ ಪರಿಣಾಮ ಬೀರುವ ಹೇಳಿಕೆಗಳನ್ನು ನೀಡುವುದು (ಸೆಕ್ಷನ್ 153 ಬಿ) ಅಥವಾ ಸಾರ್ವಜನಿಕ ಕಿಡಿಗೇಡಿತನಕ್ಕೆ (ಸೆಕ್ಷನ್ 505) ಸೇರಿದಂತೆ ಭಾರತೀಯ ಅಪರಾಧ ಸಂಹಿತೆ (ಐಪಿಸಿ) ಅಡಿಯಲ್ಲಿ ವಿವಿಧ ಅಪರಾಧಗಳಿಗೆ ಅವರ ಮೇಲೆ ಆರೋಪ ಹೊರಿಸಲಾಗಿದೆ. ಮುರುಳಿ ಮನೋಹರ್ ಜೋಷಿ ಜು.23ರಂದು, ಅಡ್ವಾಣಿಯವರು ಜು.24ರಂದು ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದರು. ಇಬ್ಬರೂ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 351 ಸಾಕ್ಷಿದಾರರು ಹಾಗೂ 600 ಸಾಕ್ಷ್ಯಗಳನ್ನು ಸಿಬಿಐ ಕೋರ್ಟ್‍ನಲ್ಲಿ ಹಾಜರುಪಡಿಸಿದೆ. ಸೆ.1ರಂದೇ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಾದ-ಪ್ರತಿವಾದ ಮುಕ್ತಾಯಗೊಂಡಿದೆ.

Translate »