ಎಲ್ಲಾ ವರ್ಗದ ಹಿತ ಕಾಪಾಡುವ ಅತ್ಯುತ್ತಮ ಬಜೆಟ್
ಮೈಸೂರು

ಎಲ್ಲಾ ವರ್ಗದ ಹಿತ ಕಾಪಾಡುವ ಅತ್ಯುತ್ತಮ ಬಜೆಟ್

February 3, 2019

ಮೈಸೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲಾ ವರ್ಗದ ಹಿತಾಸಕ್ತಿಗೆ ಅನು ಗುಣವಾಗಿ ಅತ್ಯುತ್ತಮ ಬಜೆಟ್ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದ ಮೈಸೂರು-ಕೊಡಗು ಸಂಸದ ಪ್ರತಾಪ್‍ಸಿಂಹ, ಪ್ರಧಾನ ಮಂತ್ರಿ ಮೋದಿ ಹಾಗೂ ಹಂಗಾಮಿ ವಿತ್ತ ಸಚಿವ ಪಿಯೂಶ್ ಗೋಯಲ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ಮೈಸೂರಿನ ಜಲದರ್ಶಿನಿ ಅತಿಥಿಗೃಹ ದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಶ್ರಮಿಕರು, ಕಾರ್ಮಿಕರು, ಬಡ ವರ್ಗ ಸೇರಿದಂತೆ ಎಲ್ಲಾ ವರ್ಗಗಳ ಹಿತಾಸಕ್ತಿಗೆ ಅನುಗುಣವಾಗಿ ಕೇಂದ್ರ ಸರ್ಕಾ ರದ ಬಜೆಟ್ ಮಂಡನೆಯಾಗಿದೆ. ಈವರೆಗೂ ಇಂತಹ ಬಜೆಟ್ ಬಂದಿರಲಿಲ್ಲ. ಪ್ರತಿಪಕ್ಷದವರು ರೈತರ ಶ್ರೇಯೋಭಿವೃದ್ಧಿ ಬಗ್ಗೆ ಕೇವಲ ಮಾತನಾಡುತ್ತಾರೆ. ಆದರೆ ನಮ್ಮ ಪಕ್ಷ ರೈತರ ಹಿತಾಸಕ್ತಿಗೆ ಒತ್ತು ನೀಡಿದೆ ಎಂಬುದಕ್ಕೆ ಬಜೆಟ್‍ನ ಅಂಶ ಗಳೇ ನಿದರ್ಶನ ಎಂದು ನುಡಿದರು.

ಕಳೆದ 4 ವರ್ಷಗಳಿಂದ ದೇಶದ ಯಾವುದೇ ಭಾಗದಲ್ಲೂ ಗೊಬ್ಬರಕ್ಕಾಗಿ ಲಾಠಿ ಪ್ರಹಾರ ನಡೆದಿಲ್ಲ. ಆದರೆ ಇದಕ್ಕೂ ಮುನ್ನ ಅಂತಹ ಘಟನೆಗಳು ಜರುಗುತ್ತಿ ದ್ದವು. ಮೋದಿ ಸರ್ಕಾರ ಎಲ್ಲಾ ಬಗೆಯ ಗೊಬ್ಬರದ ಬೆಲೆಯನ್ನು ಕಡಿಮೆ ಮಾಡಿದ್ದು, ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸಿದೆ. ಇದೀಗ ಬಜೆಟ್‍ನಲ್ಲಿ ಸಣ್ಣ-ಅತೀ ಸಣ್ಣ ರೈತರ ಬ್ಯಾಂಕ್ ಖಾತೆಗೆ ವರ್ಷಕ್ಕೆ 6 ಸಾವಿರ ರೂ. ಹಾಕಲಿದೆ. ಇದಕ್ಕಾಗಿ ಬಜೆಟ್‍ನಲ್ಲಿ 75 ಸಾವಿರ ರೂ. ಕೋಟಿ ಮೀಸಲಿಡಲಾಗಿದೆ. ಈವರೆಗೂ ಇಂತಹ ಯೋಜನೆ ಯಾರೂ ಮಾಡಿರಲಿಲ್ಲ ಎಂದು ಹೇಳಿದರು.

ಜನಧನ್ ಬ್ಯಾಂಕ್ ಖಾತೆ ಬಗ್ಗೆ ಎದುರಾಳಿಗಳು ಎಲ್ಲಿಲ್ಲದ ಟೀಕೆ ಮಾಡುತ್ತಿದ್ದರು. ಆದರೆ ಈ ಖಾತೆಯ ಮೂಲಕ ಯಾವುದೇ ಸೋರಿಕೆ ಇಲ್ಲದೇ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸೌಲಭ್ಯಗಳ ಹಣ ಸಂದಾಯ ವಾಗುತ್ತಿದೆ. ಗ್ಯಾಸ್ ಸಬ್ಸಿಡಿ, ಪಿಂಚಣಿ ಸೇರಿದಂತೆ ಹಲವು ಸೌಲಭ್ಯಗಳಲ್ಲಿ ಇದರಿಂದ ಸೋರಿಕೆ ತಪ್ಪಿದೆ. ಸಹಜವಾಗಿ ತೆರಿಗೆ ಕಟ್ಟು ವವರು ನಮಗಾಗಿ ಸರ್ಕಾರ ಏನೂ ಯೋಜನೆ ಜಾರಿಗೊಳಿಸಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮೋದಿ ಯವರು ನಿಮ್ಮ ತೆರಿಗೆಯಿಂದ ದೇಶ ಮುನ್ನಡೆ ಯುತ್ತಿದೆ ಎಂಬ ಪ್ರಶಂಸೆಯ ಮಾತನಾಡಿ ತೆರಿಗೆದಾರರಿಗೆ ಗೌರವ ಸೂಚಿಸಿದ್ದಾರೆ. ವೇತನ ಪಡೆದು ತೆರಿಗೆ ಕಟ್ಟುವವರ ಪೈಕಿ ಶೇ.70ರಷ್ಟು ತೆರಿಗೆದಾರರಿಗೆ ಬಜೆಟ್‍ನಲ್ಲಿ ವಿನಾಯಿತಿ ನೀಡಲಾಗಿದೆ. ವಾರ್ಷಿಕ 5 ಲಕ್ಷ ರೂ.ಗಳಿಂದ ಹೆಚ್ಚು ಆದಾಯ ಗಳಿಸು ವವರು ಇದರ ವ್ಯಾಪ್ತಿಗೆ ಬರಲಿದ್ದಾರೆ.

ಸದ್ಯದಲ್ಲೇ 6 ವಿಮಾನ ಹಾರಾಟ: ಉಡಾನ್ ಯೋಜನೆಯಡಿ ಮೈಸೂರಿನಿಂದ ಹೈದರಾಬಾದ್, ಕೊಚ್ಚಿ ಸೇರಿದಂತೆ ಮತ್ತಿತರ ಕಡೆಗಳಿಗೆ ಪ್ರಯಾಣಿಸಲು 6 ವಿಮಾನಗಳು ಸಿಕ್ಕಿವೆ. ಮುಂದಿನ ಎರಡೂವರೆ ತಿಂಗಳಲ್ಲಿ ಈ ವಿಮಾನಗಳು ಹಾರಾಟ ನಡೆಸಲಿವೆ. ಈ ನಡುವೆ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಾಯುಪಡೆಗೆ ಪ್ರವೇಶ ಕೊಡಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ಇದರಿಂದ ಪ್ರಯಾಣಿಕರಿಗೆ ಕಿರಿಕಿರಿಯಾಗಲಿದ್ದು, ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.

ಅಭಿವೃದ್ಧಿ ಕೆಲಸಕ್ಕೆ ಬಜೆಟ್‍ಗಾಗಿಯೇ ಕಾಯೋದಿಲ್ಲ: ಇನ್ನು ಎರಡೂವರೆ ವರ್ಷದಲ್ಲಿ ಮೈಸೂರು ರೈಲ್ವೆಯಲ್ಲಿ ಸಾಕಷ್ಟು ಅಭಿವೃದ್ಧಿಯಾಗಲಿದೆ. ನಾಗನಹಳ್ಳಿಯಲ್ಲಿ ಸ್ಯಾಟಲೈಟ್ ರೈಲ್ವೆ ನಿಲ್ದಾಣ ಬರಲಿದೆ. ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ರೈಲ್ವೆ ಸಂಪರ್ಕ ಕಲ್ಪಿಸುವ ಸಂಬಂಧ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ ರಾಜ್ಯ ಸರ್ಕಾರ ತಾನು ನೀಡಬೇಕಿರುವ ಭೂಮಿಯನ್ನು ಇನ್ನೂ ನೀಡದ ಕಾರಣ ಅದನ್ನು ಕಾರ್ಯಗತಗೊಳಿಸಲಾಗುತ್ತಿಲ್ಲ. ನಮ್ಮ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯ ಗಳಿಗೆ ಬಜೆಟ್‍ಗಾಗಿಯೇ ಕಾಯುವುದಿಲ್ಲ ಎಂದು ತಿಳಿಸಿದರು.

ಸುಧಾಕರಶೆಟ್ಟಿ ವಿರುದ್ಧ ವಾಗ್ದಾಳಿ: ಎಫ್‍ಕೆ ಸಿಸಿಐ ಅಧ್ಯಕ್ಷ ಸುಧಾಕರ್‍ಶೆಟ್ಟಿಯವರು ತಮ್ಮ ಸ್ಥಾನಕ್ಕಾದರೂ ಬೆಲೆ ಕೊಟ್ಟು ಸತ್ಯ ಮಾತ ನಾಡಬೇಕು. ಅದನ್ನು ಬಿಟ್ಟು ಬಜೆಟ್‍ನಲ್ಲಿ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿಲ್ಲ ಎಂದಿದ್ದಾರೆ. ಹೀಗೆ ಉದ್ದೇಶಪೂರ್ವಕ ವಾಗಿ ಟೀಕೆ ಮಾಡುವುದು ಸರಿಯಲ್ಲ. ಅಡುಗೆ ಅನಿಲ ಸಂಪರ್ಕ, ಆಯುಷ್ಮಾನ್ ಭಾರತ್ ಇವೆಲ್ಲಾ ಮೂಲಭೂತ ಸೌಕರ್ಯದ ವ್ಯಾಪ್ತಿಗೆ ಬರುತ್ತವೆ. ಅಷ್ಟು ಅವರಿಗೆ ಅರ್ಥವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಶಾಸಕ ಎಲ್.ನಾಗೇಂದ್ರ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ. ರಾಜೇಂದ್ರ, ಬಿಜೆಪಿ ಮುಖಂಡರಾದ ಬಿ.ಪಿ.ಮಂಜುನಾಥ್, ಫಣೀಶ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »