ಸಂಪುಟ ರಚನೆ ಗೊಂದಲದಲ್ಲೇ  ಕಾಲ ಕಳೆಯುತ್ತಿರುವ ಬಿಜೆಪಿ ಸರ್ಕಾರ
ಮೈಸೂರು

ಸಂಪುಟ ರಚನೆ ಗೊಂದಲದಲ್ಲೇ  ಕಾಲ ಕಳೆಯುತ್ತಿರುವ ಬಿಜೆಪಿ ಸರ್ಕಾರ

January 19, 2020

ರಾಜ್ಯದ ಅಭಿವೃದ್ದಿ ಕುಂಠಿತ, ಜನರಿಗೆ ಭಾರೀ ಅನ್ಯಾಯ

ಮೈಸೂರು, ಜ.18(ಆರ್‍ಕೆಬಿ)- ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಯಾಗಿ ಇನ್ನೊಂದು ವಾರದಲ್ಲಿ ಆರು ತಿಂಗಳಾಗುತ್ತಿದ್ದರೂ ಇನ್ನೂ ಸಂಪುಟ ವಿಸ್ತರಣೆಯ ಗೊಂದಲದಲ್ಲೇ ಕಾಲ ಕಳೆಯುತ್ತಿದ್ದಾರೆ. ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ರಾಜ್ಯದ 6.5 ಕೋಟಿ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಕೃಷ್ಣ ಭೈರೇಗೌಡ ಇಂದಿಲ್ಲಿ ಟೀಕಿಸಿದರು. ಮೈಸೂರಿನಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಸರ್ಕಾರದಲ್ಲಿ ಅವರು ತಮ್ಮ ಸಂಪುಟ ರಚನೆ ಗೊಂದಲಗಳನ್ನೇ ಪರಿಹರಿಸಿಕೊಳ್ಳಲಾಗುತ್ತಿಲ್ಲ. ಕೇವಲ ಕಚ್ಚಾಟದಲ್ಲೇ ಕಾಲ ಕಳೆಯುತ್ತಾ, ರಾಜ್ಯ ಜನರಿಗೆ ಜವಾಬ್ದಾರಿಯುತ ಸರ್ಕಾರ ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಕೇವಲ 16-17 ಜನ ಮಂತ್ರಿಗಳನ್ನು ಮಾಡಿಕೊಂಡು, ಉಳಿದ ಸ್ಥಾನ ಖಾಲಿ ಇಟ್ಟುಕೊಂಡು, ಜಿಲ್ಲೆಗಳಿಗೆ ಸರಿಯಾದ ಉಸ್ತುವಾರಿ ಸಚಿವರನ್ನು ಕೊಡಲಾಗದೆ, ಪ್ರವಾಹಕ್ಕೆ ತುತ್ತಾದವರಿಗೆ ಪರಿಹಾರ ಕೊಡಲಾಗದೆ, ಜಿಲ್ಲೆಗಳಿಗೆ ಮಂತ್ರಿಗಳೇ ಭೇಟಿ ಕೊಡಲಾಗದ ಪರಿಸ್ಥಿತಿಯಲ್ಲಿದ್ದಾರೆ. ಸಂಪೂರ್ಣ ಸಂಪುಟ ರಚನೆ ಮಾಡಲಾಗದ ಅವರು ರಾಜ್ಯದ ಜನರಿಗೆ ಯಾವ ಆಡಳಿತ ನೀಡುತ್ತಾರೆ? ಜನರ ಯಾವ ಸಮಸ್ಯೆಗಳನ್ನು ಪರಿಹರಿಸುತ್ತಾರೆ? ಎಂದು ಪ್ರಶ್ನಿಸಿದರು.

ಮೈಸೂರು ಅಭಿವೃದ್ಧಿಗೆ ಶ್ರಮಿಸಲು ಮೈತ್ರಿ ಸದಸ್ಯರಿಗೆ ಸಲಹೆ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಕೃಷ್ಣ ಭೈರೇಗೌಡರು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರೊಂದಿಗೆ ಚುನಾವಣೆಗೂ ಮುನ್ನ ನಗರಪಾಲಿಕೆಗೆ ಆಗಮಿಸಿ, ಜೆಡಿಎಸ್-ಕಾಂಗ್ರೆಸ್ ಪಾಲಿಕೆ ಸದಸ್ಯರನ್ನು ಭೇಟಿ ಮಾಡಿ ಶುಭ ಕೋರಿದರು. ಮೈತ್ರಿ ಮೂಲಕ ಮೈಸೂರಿನ ಅಭಿವೃದ್ಧಿಗೆ ಶ್ರಮಿಸುವಂತೆ ಸಲಹೆ ನೀಡಿದರು.

Translate »