ಪಾಲಿಶ್ ಮಾಡಿ ಅಧಿಕ ಬೆಲೆಗೆ ಮಾರಾಟ ಮಾಡುವ ದಂಧೆ ಮಂಡ್ಯ ಬಳಿ ಭಾರೀ ಪ್ರಮಾಣದ ಪಡಿತರ ಅಕ್ಕಿ ವಶ
ಮಂಡ್ಯ

ಪಾಲಿಶ್ ಮಾಡಿ ಅಧಿಕ ಬೆಲೆಗೆ ಮಾರಾಟ ಮಾಡುವ ದಂಧೆ ಮಂಡ್ಯ ಬಳಿ ಭಾರೀ ಪ್ರಮಾಣದ ಪಡಿತರ ಅಕ್ಕಿ ವಶ

July 26, 2022

ಮಂಡ್ಯ, ಜು.25- ರೈಸ್‍ಮಿಲ್‍ವೊಂದರ ಮೇಲೆ ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿ ಗಳು 16.60 ಲಕ್ಷ ರೂ. ಮೌಲ್ಯದ 635 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡು ರೈಸ್ ಮಿಲ್‍ಗೆ ಬೀಗಮುದ್ರೆ ಹಾಕಿದ್ದಾರೆ.

ಸುದ್ದಿವಾಹಿನಿಯೊಂದು ನೀಡಿದ ಮಾಹಿತಿ ಮೇರೆಗೆ ಬೆಂಗಳೂರು- ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತಿರುವ ಮಂಡ್ಯ ತಾಲೂಕು ಹಲಸಗೆರೆ ಗ್ರಾಮದ ಬಾಲಾಜಿ ರೈಸ್‍ಮಿಲ್ ಮೇಲೆ ಜು.21 ರಂದು ಆಹಾರ ನಿರೀಕ್ಷಕಿ ಪವಿತ್ರಾ, ತಹಸೀಲ್ದಾ ರರು ಹಾಗೂ ಇತರೆ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಎರಡು ದಿನಗಳ ಕಾಲ ಸುದೀರ್ಘ ವಾಗಿ ಪರಿಶೀಲಿಸಿದ ನಂತರ ರೈಸ್‍ಮಿಲ್ ಮುಂಭಾಗ ನಿಂತಿದ್ದ ಲಾರಿ (ಟಿಎನ್ 29, ಬಿಸಿ 6113) ಮತ್ತು 635 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿ ಕೊಳ್ಳಲಾಗಿದೆ. ರೈಸ್‍ಮಿಲ್ ನಡೆಸುತ್ತಿದ್ದ ಸುಮಂತ್ ಎಂಬಾತ ಸಂಪರ್ಕಕ್ಕೆ ಸಿಗದೆ ಮೊಬೈಲ್ ಸ್ವಿಚ್‍ಆಫ್ ಮಾಡಿಕೊಂಡಿದ್ದರಿಂದ ರೈಸ್‍ಮಿಲ್‍ಗೆ ಬೀಗಮುದ್ರೆ ಹಾಕಲಾಗಿದೆ. ಈ ರೈಸ್‍ಮಿಲ್‍ನಲ್ಲಿ ಪಡಿತರ ಅಕ್ಕಿಗೆ ಪಾಲಿಶ್ ಮಾಡಿ ವಿವಿಧ ಬ್ರಾಂಡ್‍ಗಳನ್ನು ನಮೂದಿಸಿ ಮಾರಾಟ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಿಲ್ ಮುಂಭಾಗ ನಿಂತಿದ್ದ ಲಾರಿಯಲ್ಲಿ ತಾಜ್‍ಮಹಲ್ ಬ್ರಾಂಡ್ ಚೀಲಗಳಲ್ಲಿ ತುಂಬಿದ್ದ 40 ಕ್ವಿಂಟಾಲ್ ಅಕ್ಕಿ ದೊರೆತರೆ, ರೈಸ್ ಮಿಲ್ ಒಳಗೆ ಅದೇ ಬ್ರಾಂಡ್ ಚೀಲಗಳಲ್ಲಿ ತುಂಬಿದ್ದ 65 ಕ್ವಿಂಟಾಲ್ ಅಕ್ಕಿ ದೊರೆ ತಿದೆ. ಮಿಲ್‍ನ ಮತ್ತೊಂದು ಭಾಗದಲ್ಲಿ 43 ಕ್ವಿಂಟಾಲ್ ಅಕ್ಕಿ ದೊರೆತಿದೆ. ಪಡಿತರ ಅಕ್ಕಿಯನ್ನು ಬಚ್ಚಿಡಲು ರೈಸ್‍ಮಿಲ್‍ನಲ್ಲಿ ಮೂರು ಬಂಕರ್‍ಗಳ ನಿರ್ಮಿಸಿರುವುದು ದಾಳಿ ವೇಳೆ ಪತ್ತೆಯಾಗಿದೆ. ಈ ಬಂಕರ್‍ಗಳಲ್ಲಿ ಒಟ್ಟು 124 ಕ್ವಿಂಟಾಲ್ ಅಕ್ಕಿ ದೊರೆತಿದೆ. ಒಟ್ಟಾರೆ ರೈಸ್‍ಮಿಲ್‍ನಲ್ಲಿ 16,60,750 ರೂ. ಮೌಲ್ಯದ 365 ಕ್ವಿಂಟಾಲ್ ಅಕ್ಕಿ ದೊರೆತಿದೆ. ಈ ರೈಸ್‍ಮಿಲ್ ಅನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ಭತ್ತವನ್ನು ಹಲ್ಲಿಂಗ್ ಮಾಡಿರುವ ಯಾವುದೇ ಕುರುಹುಗಳಾಗಲೀ ಪತ್ತೆಯಾಗಿಲ್ಲ. ಆದರೆ, ಅಕ್ಕಿಯನ್ನು ಪಾಲಿಶ್ ಮಾಡಿರುವ ಕುರುಹುಗಳು ಮಾತ್ರ ಪತ್ತೆಯಾಗಿದೆ. ಈ ಮಿಲ್ ದಿವಂಗತ ಬೆಟ್ಟೆಗೌಡ ಎಂಬುವವರಿಗೆ ಸೇರಿದ್ದಾಗಿದ್ದು, ಹಾಲಿ ಸುಮಂತ್ ಎಂಬಾತ ನಡೆಸುತ್ತಿದ್ದಾನೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ಬಾಷಾ ಎಂಬಾತ ಸೂಪರ್‍ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.

ಪಡಿತರ ಅಕ್ಕಿಯನ್ನು ಅಕ್ರಮವಾಗಿ ಖರೀದಿಸಿ ಪಾಲಿಶ್ ಮಾಡಿದ ನಂತರ ವಿವಿಧ ಬ್ರಾಂಡ್‍ಗಳಲ್ಲಿ ರೀ ಪ್ಯಾಕಿಂಗ್ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿ ರುವುದು ಕಂಡು ಬಂದಿದೆ. ಬಾಲಾಜಿ ರೈಸ್‍ಮಿಲ್ ಅಕ್ಕಿ ಗಿರಾಣಿಯಾಗಿದ್ದು, ಭತ್ತವನ್ನು ಹಲ್ಲಿಂಗ್ ಮಾಡಿ ಅಕ್ಕಿ ಮಾಡುವುದು ಈ ಮಿಲಿನ ಕೆಲಸವಾಗಿದ್ದರು ಕೂಡ ಅಂತಹ ಯಾವುದೇ ಕೆಲಸ ಮಾಡದೆ ಪಡಿತರ ಅಕ್ಕಿ ಪಾಲಿಸ್ ಮಾಡಿ ಮಾರಾಟ ಮಾಡುವ ದಂಧೆ ಇಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಡಿತರ ಅಕ್ಕಿಯನ್ನು ವ್ಯವಸ್ಥಿತವಾಗಿ ಪಾಲಿಶ್ ಮಾಡಲು ಆಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿತ್ತು. ನೆಪ ಮಾತ್ರಕ್ಕೆ ಸ್ವಲ್ಪ ಪ್ರಮಾಣದ ಭತ್ತದ ದಾಸ್ತಾನು ಇಟ್ಟುಕೊಂಡು ಭತ್ತವನ್ನು ಹಲ್ಲಿಂಗ್ ಮಾಡುತ್ತಿರುವಂತೆ ಅಧಿಕಾರಿಗಳಿಗೆ ತೋರಿಸುವ ತಂತ್ರವನ್ನು ಈ ಮಿಲ್‍ನವರು ಮಾಡುತ್ತಿದ್ದರು ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಬಾಲಾಜಿ ರೈಸ್‍ಮಿಲ್ ಮಾಲೀಕರು, ಮಿಲ್ ನಡೆಸುತ್ತಿದ್ದ ಸುಮಂತ್, ಟಿಎನ್-29, ಬಿಸಿ6113 ಸಂಖ್ಯೆಯ ಲಾರಿ ಚಾಲಕ, ಮಾಲೀಕ ಮತ್ತು ರೈಸ್‍ಮಿಲ್‍ನ ಸೂಪರ್‍ವೈಸರ್ ಬಾಷಾ ಸೇರಿದಂತೆ ಐವರ ವಿರುದ್ಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಜು.22ರಂದು ಸಂಜೆ ಪ್ರಕರಣ ದಾಖಲಾಗಿದೆ.

Translate »