ಒಕ್ಕಣೆಗೆ ಹಾಕಿದ್ದ ಹುರುಳಿಸೊಪ್ಪು ಸಿಲುಕಿ ಕಾರು ಭಸ್ಮ
ಮೈಸೂರು

ಒಕ್ಕಣೆಗೆ ಹಾಕಿದ್ದ ಹುರುಳಿಸೊಪ್ಪು ಸಿಲುಕಿ ಕಾರು ಭಸ್ಮ

January 24, 2021

ಕೆ.ಆರ್.ಪೇಟೆ, ಜ.23-ರಸ್ತೆಯಲ್ಲಿ ಒಕ್ಕಣೆಗೆ ಹಾಕಿದ್ದ ಹುರುಳಿ ಸೊಪ್ಪು ಕಾರಿನ ಚಕ್ರಕ್ಕೆ ಸಿಲುಕಿದ ಪರಿಣಾಮ ಬೆಂಕಿ ಹೊತ್ತಿಕೊಂಡು ಕಾರು ಭಸ್ಮವಾಗಿರುವ ಘಟನೆ ತಾಲೂಕಿನ ಕಲ್ಲಹಳ್ಳಿ ಭೂವರಹನಾಥ ಸ್ವಾಮಿ ದೇಗುಲದ ಬಳಿ ಸಂಭವಿಸಿದ್ದು, ದೇವರ ದರ್ಶನಕ್ಕೆ ಆಗಮಿ ಸಿದ್ದ ಕುಟುಂಬವೊಂದು ಪ್ರಾಣಾಪಾಯದಿಂದ ಪಾರಾಗಿದೆ.

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ ರಾಜಗೋಪಾಲ್ ಕುಟುಂಬದವರು ಶನಿವಾರ ಮಧ್ಯಾಹ್ನ ತಮ್ಮ ಕಾರಿನಲ್ಲಿ ಕುಟುಂಬ ಸಮೇತರಾಗಿ ತಾಲೂಕಿನ ಪುರಾಣ ಪ್ರಸಿದ್ಧ ಭೂವರಹನಾಥ ಸ್ವಾಮಿಯ ದೇಗುಲಕ್ಕೆ ಬರುತ್ತಿದ್ದರು. ದೇವಸ್ಥಾನದ ಸಮೀಪದ 2-3 ಕಿಮೀ ದೂರದಲ್ಲಿ ರಸ್ತೆಗೆ ಒಕ್ಕಣೆ ಮಾಡಲು ಹರಡಿದ್ದ ಹುರುಳಿ ಸೊಪ್ಪಿನ ಮೇಲೆ ಚಲಿಸುವ ವೇಳೆ ಕಾರಿನ ಚಕ್ರಗಳಿಗೆ ಸೊಪ್ಪು ಸಿಲುಕಿಕೊಂಡಿದೆ. ಪರಿಣಾಮ ಸಣ್ಣದಾಗಿ ಬೆಂಕಿ ಕಾಣಿಸಿ ಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಕಾರನ್ನು ಹಿಂಬಾಲಿಸಿ ವಿಚಾರ ತಿಳಿಸಿದ್ದಾರೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದ ರಾಜಗೋಪಾಲ್ ಹಾಗೂ ಅವರ ತಾಯಿ, ಪತ್ನಿ ಹಾಗೂ ಪುತ್ರಿ ಕೂಡಲೇ ಕಾರಿನಿಂದ ಇಳಿದು ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ಬಳಿಕ ಬೆಂಕಿಯ ಕೆನ್ನಾಲಿಗೆಗೆ ಕಾರು ಧಗಧಗನೆ ಹೊತ್ತಿಕೊಳ್ಳಲಾರಂಭಿಸಿದೆ. ಕೂಡಲೇ ಸ್ಥಳೀಯರು ಪಟ್ಟಣದ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಯಿತು. ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Translate »