ಬೆಂಗಳೂರು, ಅ.೮- ಎಸ್‌ಸಿ, ಎಸ್‌ಟಿಗೆ ಮೀಸಲಾತಿ ಹೆಚ್ಚಳ ಮಾಡಲು ರಾಜ್ಯ ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ. ಈ ಹಿನ್ನೆಲೆಯಲ್ಲಿ ಬರೋಬ್ಬರಿ ೨೪೧ ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದ ವಾಲ್ಮೀಕಿ ಸ್ವಾಮೀಜಿಗಳು ಧರಣಿಯನ್ನು ಕೈಬಿಟ್ಟಿದ್ದಾರೆ. ನಂತರ ವಾಲ್ಮೀಕಿ ಸಮಾಜದ ಮುಖಂಡರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನ ಭೇಟಿಯಾಗಿ ಅಭಿನಂದಿಸಿದರು. ಈ ವೇಳೆ ಮುಖ್ಯಮಂತ್ರಿ ಗಳಿಗೆ ಸ್ವಾಮೀಜಿ ಸಿಹಿ ತಿನ್ನಿಸಿ, ಖುಷಿಪಟ್ಟರು. ಈ ವೇಳೆ ಮಾತನಾಡಿದ ಸ್ವಾಮೀಜಿ, ಮೀಸಲಾತಿ ಹೆಚ್ಚಿಸಿರುವುದಕ್ಕೆ ಸಮುದಾಯದ ಒಂದೂವರೆ
ಕೋಟಿ ಜನರ ಪರವಾಗಿ ಮುಖ್ಯಮಂತ್ರಿಗಳಿಗೆ ಹಾಗೂ ಸಚಿವ ಸಂಪುಟದ ಸದಸ್ಯರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಬಸವರಾಜ ಬೊಮ್ಮಾಯಿ ರಾಜ್ಯದ ಧೀಮಂತ ಮುಖ್ಯಮಂತ್ರಿ. ನಾಳೆ ವಾಲ್ಮೀಕಿ ಜಯಂತಿ ಆಚರಣೆ ವೇಳೆಯೂ ವಿಜಯೋತ್ಸವ ನಡೆಸಲಾಗುವುದು. ನಾಳೆ ೧೫೦ ಸಮುದಾಯದವರಿಂದ ಸರ್ಕಾರ, ಸಿಎಂಗೆ ಅಭಿನಂದನೆ ಸಲ್ಲಿಸಲಾಗುವುದು. ಇಷ್ಟು ದಿನ ನಡೆಸಿದ ಧರಣಿ ವಾಪಸ್ ಪಡೆದಿದ್ದೇವೆ ಎಂದು ಘೋಷಣೆ ಮಾಡಿದರು. ಸ್ವಾಮೀಜಿ ಅವರು ಮಾತನಾಡುತ್ತಿದ್ದ ವೇಳೆ ಕಂದಾಯ ಸಚಿವ ಆರ್.ಅಶೋಕ್ ಅವರು ಕ್ಯಾಮೆರಾದ ಮೂಲಕ ಚಿತ್ರೀಕರಣ ಮಾಡಿದರು.