ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕಾರಣ
ಮೈಸೂರು

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕಾರಣ

October 21, 2020

ಬೆಂಗಳೂರು,ಅ.20(ಕೆಎಂಶಿ)-ಹೆಚ್.ಡಿ.ಕುಮಾರಸ್ವಾಮಿ ನೇತೃ ತ್ವದ ಜೆಡಿಎಸ್ ಮತ್ತು ಕಾಂಗ್ರೆಸ್‍ನ ಮೈತ್ರಿ ಸರ್ಕಾ ರದ ಪತನಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾರಣ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ್‍ನಾರಾಯಣ್ ಬಾಂಬ್ ಸಿಡಿಸಿದ್ದಾರೆ.

ಮೈತ್ರಿ ಸರ್ಕಾರದ ಪತನಕ್ಕೆ ಮೀರ್‍ಸಾದಿಕ್ ನಂತೆ ಶಿವಕುಮಾರ್ ಕೆಲಸ ಮಾಡಿದರು. ಇವರಿಗೆ ಸಿದ್ದರಾಮಯ್ಯ ಕೈಜೋಡಿಸಿದರು ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಅಧಿಕಾರ ಉಳಿಸಲು ಬಂಡೆಕಲ್ಲಿನಂತೆ ನಿಂತುಕೊಳ್ಳುತ್ತೇನೆ ಎಂದು ಮುಂದೆ ಹೇಳುತ್ತಾ ಕುಮಾರಸ್ವಾಮಿಗೆ ನಂಬಿಕೆ ದ್ರೋಹ ಮಾಡಿದರು ಎಂದಿದ್ದಾರೆ. ಪಕ್ಷದ ಕಚೇರಿಯಲ್ಲಿಂದು ನಡೆದ ತುರ್ತು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸೇರಿ ನಡೆಸಿರುವ ಷಡ್ಯಂತರವು ಈಗ ಬಯಲಿಗೆ ಬಂದಿದೆ. ಅದಕ್ಕೆ ಸಂಬಂಧಿಸಿದ ಅವರಿಬ್ಬರ ನಡುವಿನ ಮಾತು ಕತೆ ಆಡಿಯೋ ದಾಖಲೆಯನ್ನು ಸಕಾಲದಲ್ಲಿ ಬಿಡುಗಡೆ ಮಾಡುವು ದಾಗಿ ಹೇಳಿದ್ದಾರೆ. ಸೋಮಶೇಖರ್, ಮುನಿರತ್ನ, ಬೈರತಿ ಬಸವ ರಾಜ್, ಸುಧಾಕರ್ ಸೇರಿದಂತೆ ಹಲವು ಕಾಂಗ್ರೆಸ್ ಶಾಸಕರು ಪಕ್ಷ ಬಿಟ್ಟು ಹೋಗುವಂತೆ ಪುಸಲಾಯಿಸಿದ್ದು ಯಾರು? ಎಂದು ಪ್ರಶ್ನಿಸಿದರು. ನಾನು ಕುಮಾರಸ್ವಾಮಿ ಜೋಡೆತ್ತುಗಳು ಎಂದು ಹೇಳುತ್ತಲೇ ಮೀರ್ ಸಾದಿಕ್ ಕೆಲಸ ಮಾಡಿದವರು ನೀವಲ್ಲವೇ? ಎಂದು ಶಿವಕುಮಾರ್ ಅವರನ್ನು ಪ್ರಶ್ನಿಸಿದರು. ಅಷ್ಟೇ ಅಲ್ಲ, ಜೆಡಿಎಸ್ ಶಾಸಕರು ಆ ಪಕ್ಷ ಬಿಡಲು ಇವರದ್ದೇ ಚಿತಾವಣೆ. ಕಾಂಗ್ರೆಸ್ ಶಾಸಕರು ಪಕ್ಷ ತೊರೆಯಲು ಕಾರಣ ಯಾರು ಎಂಬುದನ್ನು ಈಗಲಾದರೂ ಶಿವಕುಮಾರ್ ಬಹಿರಂಗಪಡಿಸಬೇಕು. ಮುನಿರತ್ನ ಹಣ ತೆಗೆದುಕೊಂಡು ಪಕ್ಷ ಬಿಟ್ಟರು ಎಂದು ಭಾಷಣ ಮಾಡುತ್ತಾರೆ. ಕುಮಾರಸ್ವಾಮಿ ಅಧಿಕಾರದಲ್ಲಿ ಮುಂದುವರೆದರೆ ನಮ್ಮ ರಾಜಕೀಯ ಭವಿಷ್ಯಕ್ಕೆ ಮಂಕಾಗುತ್ತದೆ ಎಂದು ಜೋಡೆತ್ತುಗಳು ತಮ್ಮವರನ್ನೇ ಬಿಜೆಪಿಗೆ ಕಳುಹಿಸಿ, ಈಗ ನಮ್ಮನ್ನು ದೂರುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಮೈತ್ರಿ ಸರ್ಕಾರ ಪತನವಾಗಲು ಕಾರಣ ಯಾರು ಎಂಬುದನ್ನು ತಾವು ನಂಬಿಕೆಯಿಟ್ಟಿರುವ ದೇವರ ಮುಂದೆ ಪ್ರಮಾಣ ಮಾಡಲಿ ಎಂದು ಅಶ್ವತ್ಥ್‍ನಾರಾಯಣ್ ಸವಾಲು ಹಾಕಿದರು. ಜೆಡಿಎಸ್ ಜೊತೆ ಇದ್ದುಕೊಂಡೇ ಪ್ರತಿ ತಿಂಗಳು ಒಂದು ಅಡಿ ಹಳ್ಳ ತೋಡಿ 13 ತಿಂಗಳಲ್ಲಿ 13 ಅಡಿ ಹಳ್ಳ ತೋಡಿ ಸಮ್ಮಿಶ್ರ ಸರ್ಕಾರವನ್ನು ಮುಗಿಸಿದರು. ನಂಬಿಕೆಗೆ ದ್ರೋಹ ಬಗೆದ ಶಿವಕುಮಾರ್ ಈಗ ಬಿಜೆಪಿ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ. ಬಿಜೆಪಿಗೆ ಬಂದ ಎಲ್ಲಾ ಶಾಸಕರ ತಲೆಕೆಡಿಸಿ, ಅವರ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡಿಸಿದರು. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಮಾಡಿರುವ ಷಡ್ಯಂತರವನ್ನು ಜನರ ಮುಂದಿಡಲಿ. ಉಪಚುನಾವಣೆಯಲ್ಲಿ ಸೋಲು ಖಚಿತವಾಗುತ್ತಿದ್ದಂತೆ ನಮ್ಮ ಮೇಲೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಗೆ ಸೇರಿದ ಯಾವುದೇ ಶಾಸಕರಿಗೂ ಒಂದು ನಯಾಪೈಸೆ ನೀಡಿಲ್ಲ ಎಂದರು.

ಬಿಎಸ್‍ವೈ ಇಳಿಸಲು ಮುಂದಾಗಿರುವ ಮೀರ್ ಸಾದಿಕ್ ಯಾರೆಂಬುದು ಗೊತ್ತು
ಬೆಂಗಳೂರು,ಅ.20-ಮೀರ್ ಸಾದಿಕ್ ಯಾರೆಂದು ಬಿಜೆಪಿ ಗರಿಗೆ ಗೊತ್ತು. ಈಗ ಬಿಎಸ್‍ವೈ ಇಳಿಸೋದಕ್ಕೂ ಯತ್ನಿಸುತ್ತಿದ್ದಾರೆ. ಯಾರು ಯಾರ ಮನೆ ಬಾಗಿಲು ತಟ್ಟುತ್ತಿದ್ದಾರೆ ಎಂಬ ಕುರಿತು ಬಿಜೆಪಿ ನಾಯ ಕರು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ. ಡಿಕೆಶಿವಕುಮಾರ್ ಒಬ್ಬ ಮೀರ್ ಸಾದಿಕ್ ಎಂಬ ಡಿಸಿಎಂ ಅಶ್ವತ್ಥ್ ನಾರಾಯಣ ಹೇಳಿಕೆಗೆ ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು. ಮಿತ್ರ ಮಂಡಳಿ ಏನೆಲ್ಲ ಲೂಟಿ ಮಾಡಿದ್ದಾರೆ. 2000 ಕೋಟಿ ಲೂಟಿ ಹೊಡೆದಿದ್ದು ಯಾರು? ಎಂಬ ಬಗ್ಗೆ ಅಷ್ಟದಿಕ್ಪಾಲಕರು, ಪಂಚಪಾಂಡವರು ಉತ್ತರಿಸಲಿ ಎಂದು ಸವಾಲ್ ಹಾಕಿದರು. ಯಡಿಯೂರಪ್ಪ ಅವರನ್ನು ಕೆಳಗಿಳಿ ಸಲು ಹೊರಟಿರುವ ಮೀರ್ ಸಾದಿಕ್ ಕೂಡ ಈತನೆ. ಈತನ ಹೆಸರನ್ನು ನಾನು ಹೇಳಲ್ಲ. ಮೀರ್ ಸಾದಿಕ್‍ತನ ಬಿಜೆಪಿಯವರಿಗೆ ಸಂಬಂಧಿಸಿದ್ದೇ ಹೊರತು ಡಿಕೆಶಿಗಲ್ಲ.

ನಾಳೆ ಬೆಳಗ್ಗೆ ಬಿಡಲಿ ಬೇಕಿದರೆ ಆಡಿಯೋವನ್ನು, ಅದೇನು ಡಬ್ಬಾ ಬಿಡೋದಕ್ಕೆ ಚಿತ್ರ ಕೆಟ್ಟೋಯ್ತಾ ಎಂದು ಹರಿಹಾಯ್ದರು. ಚಿಕ್ಕ ವಯಸ್ಸಲ್ಲಿ ಬಿಜೆಪಿಯವರು ಏನೋ ಅವಕಾಶ ಕೊಟ್ಡಿದ್ದಾರೆ. ಯಡಿಯೂರಪ್ಪ ಇಳಿಸೋದಕ್ಕೆ ಮೀರ್ ಸಾದಿಕ್‍ತನ ಮಾಡಿ ಮಾಧ್ಯಮದ ಮುಂದೆ ಪ್ರಾಮಾಣಿಕ ಫೆÇೀಸ್ ಕೊಡುತ್ತಾನೆ. ಬೆಂಗಳೂರು ಹಣವನ್ನು ಲೂಟಿ ಹೊಡೆದಿದ್ದಾರೆ. ಇವರು ಲೂಟಿ ಹೊಡೆಯೋದು, ಬೇಕಿದ್ದರೆ ನಿಮ್ಮ ಜೀವ ನೀವೇ ಉಳಿಸಿಕೊಳ್ಳಿ ಅಂತ ಜನರಿಗೆ ಹೇಳೋದು. ಕೇಂದ್ರದಿಂದ ಒಂದೇ ಒಂದು ಪರಿಹಾರ ತರೋ ಯೋಗ್ಯತೆ ಇಲ್ಲ ಇವರಿಗೆ. ಬರೀ ಲೂಟಿಕೋರರು ಎಂದು ಡಿಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವನಿಗೆ ಡಿಕೆಶಿ ಬಳಿ ಪ್ರಮಾಣ ಮಾಡಿಸೋ ಯೋಗ್ಯತೆ ಇದೆಯಾ. ನಾಲಿಗೆ ಬಿಗಿ ಹಿಡಿದು ಮಾತನಾಡಲಿ ಎಂದು ಡಿಸಿಎಂ ವಿರುದ್ಧ ಏಕವಚನದಲ್ಲಿಯೇ ಹರಿಹಾಯದ್ದರು.

Translate »