ಕಳಚಿ ಬಿದ್ದ ಸರ್ಕಾರಿ ಶಾಲೆ ಮೇಲ್ಛಾವಣ ಗಾರೆ: ಅದೃಷ್ಟವಶಾತ್ ಮಕ್ಕಳು ಪಾರು
ಮೈಸೂರು

ಕಳಚಿ ಬಿದ್ದ ಸರ್ಕಾರಿ ಶಾಲೆ ಮೇಲ್ಛಾವಣ ಗಾರೆ: ಅದೃಷ್ಟವಶಾತ್ ಮಕ್ಕಳು ಪಾರು

November 13, 2021

ಶೀತ ಹಿಡಿದ ಶಾಲೆಯಲ್ಲಿ ಮಕ್ಕಳ ಯಾತನೆ: ಕಳಪೆ ಕಾಮಗಾರಿಯ ಫಲಾಫಲವಿದು!
ಶಾಲೆ ದುಸ್ಥಿತಿ ಬಗ್ಗೆ ಮರ‍್ನಾಲ್ಕು ವರ್ಷದಿಂದಲೂ ಬಿಇಓ ಅವರಿಗೆ ಮನವಿ ಮಾಡಲಾಗಿದೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ನೆಲಸಮಗೊಳಿಸಿ, ಹೊಸದಾಗಿ ನಿರ್ಮಿಸಬೇಕೆಂದು ಆಗ್ರಹಿಸಿದ್ದೇವೆ. ಆದರೆ ನಿರಂ ತರ ಮಳೆಯಿಂದ ಕಟ್ಟಡ ಮತ್ತಷ್ಟು ಹಾಳಾಗಿದೆ. ಛಾವಣ , ಗೋಡೆಗಳೆಲ್ಲಾ ವಸ್ತಿ ಹಿಡಿದಿವೆ. ನೆಲವೂ ವಿಪರೀತ ಶೀತವಾಗಿದೆ. ಮಕ್ಕಳನ್ನು ಕೂರಿಸಿ, ಪಾಠ ಮಾಡುವುದು ಕಷ್ಟವಾಗಿದೆ. ಈ ಬಗ್ಗೆ ಗ್ರಾಮ ಪಂಚಾಯ್ತಿ ಕಡೆಯಿಂದಲೂ ಶಾಸಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು, ತುರ್ತು ಕ್ರಮಕ್ಕೆ ಆಗ್ರಹಿಸಲಾಗುವುದು.
-ಮಲ್ಲೇಶ್, ಸದಸ್ಯ, ಚಿಕ್ಕೆರೆಯೂರು ಗ್ರಾಪಂ

ಮೈಸೂರು, ನ.೧೨(ಎಸ್‌ಬಿಡಿ)- ಸರ್ಕಾರಿ ಶಾಲೆ ಕಟ್ಟಡದ ಮೇಲ್ಛಾವಣ ಗಾರೆ ಕಳಚಿಬಿದ್ದಿದ್ದು, ಪುಟ್ಟ ಮಕ್ಕಳು ಅದೃಷ್ಟವಶಾತ್ ಅಪಾಯದಿಂದ ಪಾರಾಗಿ ರುವ ಘಟನೆ ಮೈಸೂರು ಜಿಲ್ಲೆ, ಹೆಚ್.ಡಿ.ಕೋಟೆ ತಾಲೂಕಿನಲ್ಲಿ ವರದಿಯಾಗಿದೆ.
ತಾಲೂಕಿನ, ಹಂಪಾಪುರ ಹೋಬಳಿ, ಕ್ಯಾತನಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ಎಂ.ಕನ್ನೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ನಿರಂ ತರ ಮಳೆಯಿಂದಾಗಿ ಕಟ್ಟಡದ ಗೋಡೆ, ಮೇಲ್ಛಾ ವಣ , ನೆಲ ಎಲ್ಲವೂ ವಸ್ತಿ ಹಿಡಿದು ನೀರು ಜಿನುಗು ತ್ತಿದೆ. ಪರಿಣಾಮ ನಿನ್ನೆ ಕೊಠಡಿಯೊಂದರ ಮೇಲ್ಛಾ ವಣ ಗಾರೆ ಕುಸಿದುಬಿದ್ದಿದೆ. ಅದು ೧ರಿಂದ ೩ನೇ ತರಗತಿ ಮಕ್ಕಳಿಗೆ ವಿಶೇಷ ವಿಧಾನದಲ್ಲಿ ಬೋಧಿಸುವ `ನಲಿಕಲಿ ಕೊಠಡಿ’ಯಾಗಿದ್ದು, ಶಿಕ್ಷಕರು ಮುಂಜಾಗ್ರತಾ ಕ್ರಮವಾಗಿ ಮಕ್ಕಳನ್ನು ಕಚೇರಿಗೆ ಕರೆದುಕೊಂಡು ಹೋದ ಕೆಲವೇ ಕ್ಷಣದಲ್ಲಿ ಗಾರೆ ಕಳಚಿಬಿದ್ದಿದೆ. ಇಲ್ಲ ವಾಗಿದ್ದರೆ ಪುಟ್ಟ ಮಕ್ಕಳ ಮೇಲೆ ಬಿದ್ದು, ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ಇಂದೂ ಕೂಡ ಗೋಡೆಯ ೨ ಕಡೆ ಪ್ಲಾಸ್ಟರಿಂಗ್ ಗಾರೆ ಕಳಚಿದೆ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.

ಸುಮಾರು ೨೦ ವರ್ಷಗಳ ಹಿಂದೆ ನಿರ್ಮಾಣವಾಗಿ ರುವ ಈ ಶಾಲಾ ಕಟ್ಟಡದಲ್ಲಿ ಕಚೇರಿ, ಅಡುಗೆ ಮನೆ ಹಾಗೂ ೪ ತರಗತಿ ಕೊಠಡಿಗಳಿವೆ. ೧ರಿಂದ ೭ನೇ ತರಗತಿ ವರೆಗಿನ ೫೭ ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಕಟ್ಟಡ ಕೆಲವೇ ವರ್ಷಗಳಲ್ಲಿ ಶಿಥಿಲಾವಸ್ಥೆ ತಲುಪಿ ದ್ದರಿಂದ ೨೦೧೪ರಲ್ಲೇ ೨ ಲಕ್ಷ ರೂ. ಅನುದಾನದಲ್ಲಿ ದುರಸ್ತಿ ನಡೆಸಲಾಗಿದೆ. ಆದರೂ ಮಳೆಗಾಲದಲ್ಲಿ ಗೋಡೆ, ಮೇಲ್ಛಾವಣ ಹಾಗೂ ನೆಲ ವಸ್ತಿ ಹಿಡಿಯುತ್ತದೆ. ೪ರಿಂದ ೭ನೇ ತರಗತಿ ಮಕ್ಕಳಿಗೆ ಬೆಂಚಿನ ವ್ಯವಸ್ಥೆ ಇದೆ. ಆದರೆ ೧ರಿಂದ ೩ನೇ ತರಗತಿ ಮಕ್ಕಳು ನೆಲದಲ್ಲಿ ಕುಳಿತು ಕಲಿಯಬೇಕಿದೆ. ನೆಲ ವಿಪರೀತ ಶೀತವಾಗಿದ್ದರಿಂದ ಶಿಕ್ಷಕರೇ ಹಣ ಹೊಂದಿಸಿ, ನೆಲಹಾಸು(ಮ್ಯಾಟ್) ವ್ಯವಸ್ಥೆ ಮಾಡಿದ್ದಾರೆ. ಸದ್ಯ ಶಿಕ್ಷಕರು ಮಕ್ಕಳನ್ನು ತರಗತಿ ಕೊಠಡಿ ಯಿಂದ ಕಚೇರಿಗೆ ಕರೆತಂದಿದ್ದರಿAದ ಅವಘಡ ತಪ್ಪಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿ ಚಾರಣಾ ಸಮಿತಿ(ಎಸ್‌ಡಿಎಂಸಿ) ಅಧ್ಯಕ್ಷ ದೇವರಾಜು `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿ, ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದರಿಂದ ಹೊಸ ಕಟ್ಟಡ ನಿರ್ಮಿಸಲು ಕೋರಿ ೨ ವರ್ಷದಿಂದ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಒಮ್ಮೆ ಪರಿಶೀಲನೆ ನಡೆಸಿ, ಹೋಗಿರುವುದನ್ನು ಬಿಟ್ಟರೆ ಮತ್ಯಾವುದೇ ಕ್ರಮವಾಗಿಲ್ಲ. ಮಳೆ ಹೆಚ್ಚಿರುವುದರಿಂದ ಈಗ ಕಟ್ಟಡ ವಸ್ತಿ ಹಿಡಿದಿದೆ. ಮೇಲ್ಛಾವಣ ಹಾಗೂ ಗೋಡೆಯ ಗಾರೆ ಕುಸಿದಿದೆ. ಗ್ರಾಪಂ ಸದಸ್ಯರಾದ ಮಲ್ಲೇಶ್ ಹಾಗೂ ಶಿಕ್ಷಕರೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ)ಯನ್ನು ಭೇಟಿ ಮಾಡಿ, ತುರ್ತು ಕ್ರಮಕ್ಕೆ ಒತ್ತಾಯಿಸುತ್ತೇವೆ. ಹೆಂಚಿನ ಮೇಲ್ಛಾವಣ ಇದ್ದ ಕೊಠಡಿಯೊಂದರ ದುರಸ್ತಿ ಕಾರ್ಯ ತಾಲೂಕು ಪಂಚಾಯ್ತಿ ವತಿ ಯಿಂದ ಪ್ರಗತಿಯಲ್ಲಿದೆ. ಹೆಂಚುಗಳನ್ನು ತೆಗೆದು ಶೀಟ್ ಅಳವಡಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ದುರಸ್ತಿಯಾಗಲಿದೆ. ಆದರೂ ಉಳಿದ ಕೊಠಡಿಗಳು ಶಿಥಿಲಾವಸ್ಥೆಯಲ್ಲಿರುವುದರಿಂದ ಮಕ್ಕಳು, ಪೋಷ ಕರು ಆತಂಕದಲ್ಲಿದ್ದಾರೆ ಎಂದು ತಿಳಿಸಿದರು.

ಅಮೂಲ್ಯ ಜೀವಗಳಿವೆ ಎಚ್ಚರ: ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸುವಂತೆ ಒತ್ತಾಯಿಸುವ ಶಿಕ್ಷಣ ಇಲಾಖೆ, ಕಲಿಕೆಗೆ ಬೇಕಾದ ಕನಿಷ್ಟ ಸೌಲಭ್ಯಗಳನ್ನೂ ಕಲ್ಪಿಸಿಕೊಡುತ್ತಿಲ್ಲ. ದುಸ್ಥಿತಿಯಲ್ಲಿರುವ ಕಟ್ಟಡದಲ್ಲಿ ಮಕ್ಕಳು ಕಲಿಯುವುದು ಎಷ್ಟು ಸುರಕ್ಷಿತ?. ಅಮೂಲ್ಯ ಜೀವಗಳ ಬಗ್ಗೆ ಯಾಕಿಷ್ಟು ನಿರ್ಲಕ್ಷö್ಯ?. ಮೇಲ್ಛಾವಣ ಗಾರೆ ಕುಸಿದು ಮಕ್ಕಳ ಮೇಲೆ ಬಿದ್ದು ಅನಾಹುತ ಸಂಭವಿಸಿದರೆ ಗತಿಯೇನು?. ಕೂಡಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪರಿಶೀಲಿಸಿ, ಪರಿಸ್ಥಿತಿಯನ್ನು ಅರಿಯಬೇಕು. ಮಕ್ಕಳ ಸುರಕ್ಷತೆ ಹಾಗೂ ಅವರ ಶಿಕ್ಷಣದ ದೃಷ್ಟಿಯಲ್ಲಿ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Translate »