ಕಾಂಗ್ರೆಸ್ ಪಾದಯಾತ್ರೆ ಕೇವಲ ರಾಜಕೀಯ ಗಿಮಿಕ್
ಮೈಸೂರು

ಕಾಂಗ್ರೆಸ್ ಪಾದಯಾತ್ರೆ ಕೇವಲ ರಾಜಕೀಯ ಗಿಮಿಕ್

January 9, 2022

ಮೈಸೂರು,ಜ.8(ಪಿಎಂ)-ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಸಲು ಉದ್ದೇಶಿಸಿರುವ ಕಾಂಗ್ರೆಸ್ ಪಾದಯಾತ್ರೆಯು ಕೇವಲ ರಾಜಕೀಯ ಗಿಮಿಕ್ ಎಂದು ಟೀಕಿಸಿದ ಶಾಸಕ ಎಲ್.ನಾಗೇಂದ್ರ, ಪ್ರಧಾನಿ ನರೇಂದ್ರ ಮೋದಿ ಯವರಿಗೆ ಪಂಜಾಬ್ ರಾಜ್ಯ ಕಾಂಗ್ರೆಸ್ ಸರ್ಕಾರ ಸೂಕ್ತ ಭದ್ರತೆ ಕಲ್ಪಿಸಿಲ್ಲ. ಸದರಿ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು.

ಮೈಸೂರು ನಗರದ ಬಿಜೆಪಿ ಕಚೇರಿಯಲ್ಲಿ ಶನಿ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಕೋವಿಡ್ ವ್ಯಾಪಕವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಪಾದಯಾತ್ರೆ ಕೈಗೊಂಡಿದ್ದಾರೆ. ಐದು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಮತ್ತು ಆ ನಂತರದಲ್ಲಿ ಡಿ.ಕೆ.ಶಿವಕುಮಾರ್ ಅವರೇ 16 ತಿಂಗಳು ನೀರಾವರಿ ಮತ್ತು ಜಲಸಂಪನ್ಮೂಲ ಸಚಿವರಾಗಿದ್ದಾಗ ಮೇಕೆದಾಟು ಯೋಜನೆ ಅನು ಷ್ಠಾನಕ್ಕೆ ಏಕೆ ಕ್ರಮ ವಹಿಸಲಿಲ್ಲ ಎಂದು ಪ್ರಶ್ನಿಸಿದರು.

ಇದು ಕನಕಪುರದ ಒಂದು ಜಿಲ್ಲೆಯ ಸಮಸ್ಯೆ. ಇದೇನು ಇಡೀ ರಾಜ್ಯದ ಸಮಸ್ಯೆಯೇ? ಎಂದು ಪ್ರಶ್ನಿಸಿದ ಶಾಸಕರು, ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಈಗಾಗಲೇ ಮುಖ್ಯ ಮಂತ್ರಿಗಳು ಹೇಳಿದ್ದಾರೆ. ಕೇಂದ್ರ ಸರ್ಕಾರದ ಅನು ಮೋದನೆ ಪಡೆಯಲು ಯತ್ನಿಸಲಾಗಿದೆ. ಆದರೂ ಜನತೆ ದಿಕ್ಕು ತಪ್ಪಿಸಲು ಇವರು ಹೊರಟಿದ್ದಾರೆ. ಆ ಮೂಲಕ ಕೋವಿಡ್ ಹರಡಲು ಮುಂದಾಗಿದ್ದಾರೆ ಎಂದು ದೂರಿದರು. ಇಂತಹ ರಾಜಕೀಯ ಗಿಮಿಕ್ ಅನ್ನು ಕೋವಿಡ್ ಮುಕ್ತಗೊಂಡ ಬಳಿಕ ಬೇಕಿದ್ದರೆ ಮಾಡಿಕೊಳ್ಳಲಿ. ಈಗ ಕೋವಿಡ್ ನಿಯಂತ್ರಣ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿ ಪಾಲನೆ ಮಾಡಲಿ. ಈಗ ಪಾದಯಾತ್ರೆ ಕೈಬಿಡುವಂತೆ ಮನವಿ ಮಾಡುವುದಾಗಿ ತಿಳಿಸಿದರು.

ಕಾಂಗ್ರೆಸ್ ಇಂದು ಇಡೀ ದೇಶದಲ್ಲಿ ವಿಪಕ್ಷ ಸ್ಥಾನ ಅಲಂಕರಿಸುವ ಶಕ್ತಿಯನ್ನೂ ಕಳೆದುಕೊಂಡಿದೆ. ಜನ ಧಿಕ್ಕರಿಸಿದ್ದರೂ ಜನತೆ ವಿರುದ್ಧವಾಗಿಯೇ ಕಾಂಗ್ರೆಸ್ ನಡೆಯುತ್ತಿದೆ. ಜನತೆ ಸುರಕ್ಷತೆ ಇವರಿಗೆ ಬೇಕಿಲ್ಲ. ಕೋವಿಡ್ ಲಸಿಕೆ ಅಭಿಯಾನ ಆರಂಭಿಸಿದ ಸಂದರ್ಭದಲ್ಲಿ ಲಸಿಕೆ ಬಗ್ಗೆ ಕಾಂಗ್ರೆಸ್‍ನವರು ಅಪಪ್ರಚಾರ ಮಾಡಿದರು. ಲಸಿಕೆ ಹಾಕಿಸಿಕೊಂಡರೆ ಪುರುಷತ್ವ ಹರಣ ಆಗುತ್ತದೆ ಎಂದು ಅಪಪ್ರಚಾರ ಮಾಡಿದ ಕಾಂಗ್ರೆಸ್‍ನವರು, ಕೊನೆಗೆ ತಾವೇ ಶರ್ಟ್ ಬಿಚ್ಚಿ ಸರತಿ ಸಾಲಿನಲ್ಲಿ ನಿಂತು ಲಸಿಕೆ ಹಾಕಿಸಿ ಕೊಂಡರು ಎಂದು ವ್ಯಂಗ್ಯವಾಡಿದರು.

ನಕಲಿ ರೈತರ ಮೂಲಕ ಪ್ರಧಾನಿ ಪ್ರಯಾಣಕ್ಕೆ ತಡೆ: ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್ ರಾಜ್ಯಕ್ಕೆ ಭೇಟಿ ನೀಡಿದ್ದ ವೇಳೆ ನಕಲಿ ರೈತರು ಅವರ ಪ್ರಯಾಣಕ್ಕೆ ಅಡ್ಡಿಯುಂಟು ಮಾಡಿದ್ದಾರೆ. ಅವರ ಉದ್ದೇಶ ಏನಿತ್ತು ಎಂಬುದು ತನಿಖೆ ಮೂಲಕವೇ ಬೆಳಕಿಗೆ ಬರಬೇಕಿದೆ. ಪ್ರಧಾನಿಯವರಿಗೆ ಸೂಕ್ತ ಭದ್ರತೆ ಕಲ್ಪಿಸುವಲ್ಲಿ ಪಂಜಾಬ್ ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ತೋರಿದೆ. ಹೀಗಾಗಿ ಈ ಕೂಡಲೇ ಪಂಜಾಬ್ ರಾಜ್ಯ ಸರ್ಕಾರ ವಜಾಗೊಳಿಸಲು ರಾಷ್ಟ್ರಪತಿಗಳು ಮತ್ತು ಪ್ರಧಾನಿಗಳು ಮುಂದಾಗಬೇಕು ಎಂದು ಆಗ್ರಹಿಸಿದರು.

ಎಸ್‍ಪಿಜಿ (ವಿಶೇಷ ರಕ್ಷಣಾ ಪಡೆ), ಜಡ್ ಪ್ಲಸ್ ಭದ್ರತೆ ಜೊತೆಗೆ ಪೊಲೀಸರ ಬಂದೋಬಸ್ತ್ ನಡುವೆ ಈ ಎಲ್ಲರ ಕಣ್ಣು ತಪ್ಪಿಸಿ, ಪ್ರತಿಭಟನಾಕಾರರು ರಸ್ತೆ ತಡೆಯಲು ಹೇಗೆ ಸಾಧ್ಯ? ಪಂಜಾಬ್ ರಾಜ್ಯ ಸರ್ಕಾರದ ಇಂತಹ ನಿರ್ಲಕ್ಷ್ಯತನಕ್ಕೆ ಇಡೀ ದೇಶದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಸರ್ಕಾರವನ್ನೂ ಕೂಡಲೇ ವಜಾಗೊಳಿಸಬೇಕು ಎಂದರು.

ಬಿಜೆಪಿ ನಗರ ವಕ್ತಾರ ಮೋಹನ್ ಮಾತನಾಡಿ, ಪ್ರಧಾನಿಯವರು ಪ್ರಯಾಣಿಸುವ ಮಾರ್ಗದಲ್ಲಿ 20 ನಿಮಿಷ ರಸ್ತೆ ತಡೆಗೆ ಅವಕಾಶ ಆಗುವಂತೆ ಮಾಡಿದ್ದು, ಇದರಲ್ಲಿ ಪಂಜಾಬ್ ಮುಖ್ಯಮಂತ್ರಿ ಬೇಜವಾಬ್ದಾರಿ ಇದೆ. ಈ ಘಟನೆ ಸಂಬಂಧ ತಡವಾಗಿ ಎಫ್‍ಐಆರ್ ದಾಖಲು ಮಾಡಿದ್ದು, ಪ್ರತಿಭಟನಾಕಾರರನ್ನು ಅಪ ರಿಚಿತರು ಎಂದು ಎಫ್‍ಐಆರ್‍ನಲ್ಲಿ ಉಲ್ಲೇಖಿಸಲಾ ಗಿದೆ. ಅಲ್ಲಿನ ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರ ವಾಗಿ ಪರಿಗಣಿಸಿಲ್ಲ. ಇಲ್ಲಿ ಕೇಂದ್ರ ಗುಪ್ತಚರ ವಿಫಲ ವಾಗಿದೆ ಎನ್ನಲಾಗದು, ಬದಲಿಗೆ ಕೇಂದ್ರ ಗುಪ್ತಚರಕ್ಕೆ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗಿದೆ ಎಂದು ಪ್ರಶ್ನೆ ಯೊಂದಕ್ಕೆ ಉತ್ತರಿಸಿ, ದೂರಿದರು. ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಸೋಮಸುಂದರ್, ಮಾಧ್ಯಮ ಸಹ ವಕ್ತಾರ ಕೇಬಲ್ ಮಹೇಶ್, ಮಾಧ್ಯಮ ಸಂಚಾ ಲಕ ಮಹೇಶ್‍ರಾಜ್ ಅರಸ್, ಮಾಧ್ಯಮ ಸಹ ಸಂಚಾಲಕ ಪ್ರದೀಪ್‍ಕುಮಾರ್ ಗೋಷ್ಠಿಯಲ್ಲಿದ್ದರು.

Translate »