ಮೈಸೂರು,ಫೆ.27-ಆರು ತಿಂಗಳ ಹಿಂದೆ ಹೃದಯಾಘಾತ ದಿಂದ ಮೃತಪಟ್ಟ ತಮ್ಮ ಪುತ್ರನ ಸಾವಿಗೆ ಆತನ ಸ್ನೇಹಿತನೇ ಕಾರಣ ಎಂದು ಮೈಸೂರಿನ ಗೋಕುಲಂ ನಿವಾಸಿಯೊಬ್ಬರು ವಿವಿಪುರಂ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಅಲ್ಲಿನ ನಿವಾಸಿ ಸಿದ್ದಪ್ಪ ಎಂಬುವರೇ ದೂರು ನೀಡಿದವ ರಾಗಿದ್ದು, ತಮ್ಮ ಪುತ್ರ ಜಯಂತ್‍ಕುಮಾರ್ ದುಬೈನಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಮಗಳ ಹುಟ್ಟುಹಬ್ಬಕ್ಕಾಗಿ 2020ರ ಮಾರ್ಚ್‍ನಲ್ಲಿ ಮೈಸೂರಿಗೆ ಬಂದ ವರು ಕೊರೊನಾ ಕಾರಣದಿಂದ ದುಬೈಗೆ ಹಿಂತಿರುಗಲು ಸಾಧ್ಯವಾಗಿರಲಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಮೈಸೂರಿನಲ್ಲಿದ್ದಾಗ ತಮ್ಮ ಪುತ್ರ ಆಕಾಶ್ ಕನ್ಸ್‍ಟ್ರಕ್ಷನ್‍ನ ಆಕಾಶ್‍ಗೌಡ ಅಲಿಯಾಸ್ ಆಕಾಶ್ ಎಂಬುವರೊಂದಿಗೆ ಒಡನಾಟ ಇಟ್ಟುಕೊಂಡಿದ್ದರು. 2020ರ ಆಗಸ್ಟ್ 21ರಂದು ಬೆಳಗ್ಗೆ ಅವರು ಕಾಲು ನೋವಿನಿಂದ ನರಳಾಡಿ ನಂತರ ಉಸಿರಾಟದ ತೊಂದರೆಗೆ ಒಳಗಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಾಗ ಜಯಂತ್ ಕುಮಾರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದು, ನಮಗೆ ಮಗನ ಸಾವಿನ ಬಗ್ಗೆ ಯಾವುದೇ ಅನುಮಾನವಿರದ ಕಾರಣ ಮರಣೋತ್ತರ ಪರೀಕ್ಷೆಯನ್ನೂ ನಡೆಸದೇ ನಮ್ಮ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿಸಿದ್ದೇವೆ ಎಂದು ದೂರಿನಲ್ಲಿ ಹೇಳ ಲಾಗಿದೆ. ನಂತರದ ದಿನಗಳಲ್ಲಿ ಮಗನ ಸ್ನೇಹಿತ ಆಕಾಶ್‍ಗೌಡನ ವರ್ತನೆಯಿಂದ ತಮ್ಮ ಮಗನ ಸಾವಿಗೆ ಆಕಾಶ್‍ಗೌಡನೇ ಕಾರಣ ಎಂದು ತಿಳಿಯಿತು ಎಂದಿರುವ ಅವರು, ತಮ್ಮ ಮಗನಿಂದ ಪಡೆದಿದ್ದ 85 ಲಕ್ಷ ರೂ.ಗಳನ್ನು ಆಕಾಶ್‍ಗೌಡ ಹಿಂತಿರುಗಿಸದೇ ಮೋಸ ಮಾಡಿದ್ದಾರೆ. ಅಲ್ಲದೇ ನನ್ನ ಮಗ ಜಯಂತ್‍ನ ಖಾಲಿ ಚೆಕ್‍ಗಳನ್ನು ಪಡೆದುಕೊಂಡು `ನೀನೇ ನನಗೆ ಹಣ ನೀಡಬೇಕು’ ಎಂದು ಹೆದರಿಸಿದ್ದರಿಂದ ಆಘಾತಕ್ಕೊಳಗಾಗಿ ತಮ್ಮ ಪುತ್ರ ಸಾವನ್ನಪ್ಪಿದ್ದಾನೆ. ಆತನ ಸಾವಿಗೆ ಆಕಾಶ್‍ಗೌಡ ಪ್ರಚೋದನೆಯೇ ಕಾರಣವಾಗಿದೆ ಎಂದು ಸಿದ್ದಪ್ಪ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.