ರೈಲಿಗೆ ಸಿಲುಕಿ ಇಬ್ಬರು ಯುವಕರ ಸಾವು
ಮೈಸೂರು

ರೈಲಿಗೆ ಸಿಲುಕಿ ಇಬ್ಬರು ಯುವಕರ ಸಾವು

December 11, 2018

ಮೈಸೂರು: ಅಪರಿಚಿತ ಯುವಕನೋರ್ವ ರೈಲಿಗೆ ಸಿಲುಕಿ ಮೃತಪಟ್ಟಿ ರುವ ಘಟನೆ ಮಂಡ್ಯ ರೈಲ್ವೆ ನಿಲ್ದಾಣದ ಸಮೀಪ ಸೋಮವಾರ ಬೆಳಿಗ್ಗೆ ಸಂಭವಿಸಿದೆ.
ಮಂಡ್ಯ ರೈಲ್ವೆ ನಿಲ್ದಾಣದಿಂದ (ಪಾಂಡವಪುರದ ಕಡೆಗೆ ಹೋಗುವ ಮಾರ್ಗ) ಸುಮಾರು 1.5 ಕಿ.ಮೀ. ದೂರದಲ್ಲಿ ಇಂದು ಬೆಳಿಗ್ಗೆ 10.30ರ ವೇಳೆಯಲ್ಲಿ ಬೆಂಗಳೂರು-ಚಾಮರಾಜನಗರ ಪ್ಯಾಸೆಂಜರ್ ರೈಲಿಗೆ ಅಪರಿಚಿತ ಯುವಕ ಸಿಲುಕಿ ಮೃತಪಟ್ಟಿದ್ದಾನೆ. ಈತ ಹಳಿಯನ್ನು ದಾಟುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಚಹರೆ: ಸುಮಾರು 35 ವರ್ಷ ವಯೋಮಾನದ ಮೃತ ಯುವಕ, ದುಂಡು ಮುಖ, ದೃಢಕಾಯ ಶರೀರ ಹೊಂದಿದ್ದು, ಐದು ಮುಕ್ಕಾಲು ಅಡಿ ಎತ್ತರವಿದ್ದಾನೆ. ಎಣ್ಣೆಗೆಂಪು ಮೈಬಣ್ಣದ ಈತ, ಎರಡು ಇಂಚು ಕಪ್ಪು ತಲೆಗೂದಲನ್ನು ಹೊಂದಿದ್ದಾನೆ. ಮೀಸೆ ಹಾಗೂ ದಾಡಿ ಬಿಟ್ಟಿರುತ್ತಾನೆ. ತುಂಬುದೊಳಿನ ಬಿಳಿ ಶರ್ಟ್, ನೀಲಿ ಜೀನ್ಸ್ ಪ್ಯಾಂಟ್ ಹಾಗೂ ಬೂದು ಬಣ್ಣದ ಚಡ್ಡಿ ಧರಿಸಿರುವ ಇವನು ಮೈ ಮೇಲೆ ಅನೇಕ ಕಡೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಬಲಗೈನ ಹಸ್ತದ ಹಿಂಭಾಗ `ವಿನೂತ’ ಎಂದು ಹಚ್ಚೆ ಹಾಕಿಸಿಕೊಂಡಿದ್ದಾನೆ. ಬಲ ತೋಳಿನ ಮೇಲೆ `ಆರ್.ಶಾಸ್ತ್ರಿ’ ಎಂದು ಬರೆಸಿಕೊಂಡಿದ್ದು, ಇದರ ಪಕ್ಕದಲ್ಲೇ ಮಚ್ಚು, ಹಾವಿನ ಹಿನ್ನೆಲೆಯಲ್ಲಿರುವ ಶಿವಲಿಂಗದ ಚಿತ್ರಗಳು, ಎಡಗೈ ತೋಳಿನ ಮೇಲೆ `ಕೆಂಪಮ್ಮ’ ಎಂದು ಬರೆಸಿಕೊಂಡಿದ್ದಾನೆ. ಜೊತೆಗೆ ಎಡಭಾಗದ ಎದೆ ಮೇಲೆ ಹೃದಯದ ಚಿಹ್ನೆಯನ್ನು ಹಚ್ಚೆ ಹಾಕಿಸಿಕೊಂಡಿದ್ದಾನೆ. ಮೃತ ದೇಹವನ್ನು ಮಂಡ್ಯ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತನ ವಾರಸುದಾರರು ಮಂಡ್ಯ ರೈಲ್ವೆ ಪೊಲೀಸ್ ಠಾಣೆಯ ದೂ.ಸಂ. 08232-222340 ಸಂಪರ್ಕಿಸಬಹು ದೆಂದು ಠಾಣೆಯ ಪಿಎಸ್‍ಐ ಕೃಷ್ಣಮೂರ್ತಿ ತಿಳಿಸಿದ್ದಾರೆ.

ರೈಲಿಗೆ ಸಿಲುಕಿ ಕೇರಳದ ಯುವಕ ಸಾವು

ಕೇರಳ ಮೂಲದ ಬೆಂಗಳೂರು ಕಾಲ್‍ಸೆಂಟರ್ ಉದ್ಯೋಗಿಯೊಬ್ಬ ಕುಡಿದ ಮತ್ತಿನಲ್ಲಿ ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಭಾನುವಾರ ರಾತ್ರಿ ಮೈಸೂರಿಗೆ ಸಮೀಪದ ಬೆಳಗೊಳದ ಬಳಿ ನಡೆದಿದೆ.ಕೇರಳದ ವೈನಾಡು ಜಿಲ್ಲೆಯ ಗ್ರಾಮವೊಂದರ ಪಿ.ಎಸ್.ಅಶೋಕ್ ಅವರ ಪುತ್ರ ಪಿ.ಎ.ಆಸೀಸ್(27) ಮೃತಪಟ್ಟ ಕಾಲ್‍ಸೆಂಟರ್ ಉದ್ಯೋಗಿ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಈತ ಮೈಸೂರಿನಲ್ಲಿರುವ ಸ್ನೇಹಿತರನ್ನು ನೋಡಲು ಬಂದಿದ್ದ. ಭಾನುವಾರ ರಾತ್ರಿ ಕೆಆರ್‍ಎಸ್ ಹಿನ್ನೀರಿಗೆ ಸ್ನೇಹಿತನೊಬ್ಬನ ಜೊತೆಯಲ್ಲಿ ಭೇಟಿ ನೀಡಿದ್ದ ಆಸೀಸ್ ಮದ್ಯ ಸೇವನೆ ಮಾಡಿದ್ದ. ಈ ವೇಳೆ ಕುಡಿದ ಮತ್ತಿನಲ್ಲಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ. ಇಂದು ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಮೈಸೂರು ರೈಲ್ವೆ ಪೊಲೀಸರು, ಮಹಜರು ನಡೆಸಿ, ಮರಣೋತ್ತರ ಪರೀಕ್ಷೆ ನಂತರ ದೇಹವನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ.

Translate »