ಲಾರಿ ಡಿಕ್ಕಿ ಹೊಡೆದು ಚಾಲಕ ಸಾವು: ಅಪಘಾತಕ್ಕೀಡಾದ ಲಾರಿ ಚಾಲಕನ ಸಹಾಯಕ್ಕೆ ಬಂದಿದ್ದವನು ಮೃತ ಪಟ್ಟ
ಕೊಡಗು

ಲಾರಿ ಡಿಕ್ಕಿ ಹೊಡೆದು ಚಾಲಕ ಸಾವು: ಅಪಘಾತಕ್ಕೀಡಾದ ಲಾರಿ ಚಾಲಕನ ಸಹಾಯಕ್ಕೆ ಬಂದಿದ್ದವನು ಮೃತ ಪಟ್ಟ

June 7, 2018

ಸುಂಟಿಕೊಪ್ಪ: ಅಪಘಾತಕ್ಕೆ ತುತ್ತಾಗಿ ರಸ್ತೆಗಡ್ಡಲಾಗಿ ಮಗುಚಿಕೊಂಡ ಲಾರಿಯಲ್ಲಿದ್ದವರ ನೆರವಿಗೆಂದು ಧಾವಿಸಿದ ಚಾಲಕ, ಬೇರೊಂದು ಲಾರಿಯ ಡಿಕ್ಕಿ ಯಿಂದ ದುರ್ಮರಣಕ್ಕೀಡಾದ ಘಟನೆ ಸುಂಟಿಕೊಪ್ಪದಲ್ಲಿ ನಡೆದಿದೆ. ಮೂಲತಃ ಚೇರಂಬಾಣೆಯವರಾಗಿದ್ದು, ಕುಶಾಲನಗರದ ಸುಂದರನಗರದಲ್ಲಿ ನೆಲೆಸಿರುವ ರಾಜನ್ ಸಾವನ್ನಪ್ಪಿರುವ ದುರ್ದೈವಿ.

ಸೋಮವಾರ ರಾತ್ರಿ 10.45ರ ಸುಮಾರಿಗೆ ಸುಂಟಿಕೊಪ್ಪ ಮಾರ್ಗವಾಗಿ ಮಡಿಕೇರಿ ಯತ್ತ ಸಾಗುತ್ತಿದ್ದ ಕಾಂಕ್ರಿಟ್ ತುಂಬಿದ್ದ ಲಾರಿ, ಚಾಲಕನ ಹತೋಟಿ ತಪ್ಪಿ ಗದ್ದೆಹಳ್ಳದ ಆರ್‍ಆರ್ ಕಾರ್ ಗ್ಯಾರೇಜ್ ಸಮೀಪದ ತಿರುವಿನಲ್ಲಿ ರಸ್ತೆಗಡ್ಡಲಾಗಿ ಮಗುಚಿಕೊಂಡಿತ್ತು. ಈ ಸಂದರ್ಭ ಅಪಘಾತ್ಕಕೀಡಾದ ಲಾರಿಯ ಮಾಲೀಕರಿಗೆ ಸೇರಿದ ಬೇರೊಂದು ಲಾರಿ ಚಾಲಕ ರಾಜನ್ ಅವರು ಸ್ಥಳಕ್ಕೆ ಧಾವಿಸಿ, ಅಪಘಾತಕ್ಕೀಡಾದ ಲಾರಿಯ ಚಾಲಕನಿಗೆ ನೆರವು ನೀಡಿದ್ದರು. ರಸ್ತೆಯಲ್ಲಿ ಉರುಳಿದ್ದ ಲಾರಿಯಲ್ಲಿದ್ದ ಕಾಂಕ್ರಿಟನ್ನು ಮತ್ತೊಂದು ಲಾರಿಗೆ ತುಂಬಲು ಸಹಕರಿಸಿದ ರಾಜನ್, ನಂತರ ಕಾಂಕ್ರಿಟ್ ತುಂಬಿದ ಲಾರಿಯನ್ನು ಬೇರೊಬ್ಬ ಚಾಲಕನ ವಶಕ್ಕೆ ನೀಡಿ, ಮಗುಚಿಕೊಂಡಿದ್ದ ಲಾರಿಯ ಬಳಿ ಕಾರ್ಮಿಕ ಪ್ರಶಾಂತ್ ಎಂಬಾತನೊಂದಿಗೆ ನಿಂತುಕೊಂಡಿದ್ದರು. ಈ ಸಂದರ್ಭ ಸುಂಟಿಕೊಪ್ಪ ಕಡೆಯಿಂದ ಮಂಗಳೂರಿನತ್ತ ಗಿರೀಶ್ ಎಂಬಾತ ಚಾಲಿಸಿಕೊಂಡು ಬರುತ್ತಿದ್ದ ಸರಕು ತುಂಬಿದ್ದ ಲಾರಿ ರಾಜನ್ ಮತ್ತು ಪ್ರಶಾಂತ್‍ಗೆ ಡಿಕ್ಕಿಯಾಗಿದೆ.

ಗಂಭೀರ ಗಾಯಗೊಂಡ ರಾಜನ್ ಸ್ಥಳದಲ್ಲೆ ಸಾವನ್ನಪ್ಪಿದರೆ, ಪ್ರಶಾಂತ್ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದು, ಈತನನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

Translate »