ದಸರಾ ಸರಳವಾದರೂ ಆಕರ್ಷಣೆಗೇನೂ ಕಡಿಮೆ ಇಲ್ಲ
ಮೈಸೂರು

ದಸರಾ ಸರಳವಾದರೂ ಆಕರ್ಷಣೆಗೇನೂ ಕಡಿಮೆ ಇಲ್ಲ

October 17, 2021

ಮೈಸೂರು,ಅ.೧೬(ವೈಡಿಎಸ್)-ವಿಶ್ವವಿಖ್ಯಾತ ನಾಡ ಹಬ್ಬ ದಸರಾ ಮಹೋತ್ಸವ ಸರಳವಾದರೂ ಆಕರ್ಷಣೆ ಗೇನು ಕಡಿಮೆ ಇರಲಿಲ್ಲ. ದಸರಾ ಮುಕ್ತಾಯವಾದರೂ ಸಾವಿರಾರು ಮಂದಿ ಪ್ರವಾಸಿಗರು, ಸಾರ್ವಜನಿಕರು ನಗರಕ್ಕೆ ಆಗಮಿಸಿ ಶನಿವಾರ ದೀಪಾಲಂಕಾರದ ಸೌಂದರ್ಯವನ್ನು ಕಣ್ತುಂಬಿಕೊAಡರು.

ಶುಕ್ರವಾರ ದಸರಾ ಮುಕ್ತಾಯಗೊಂಡಿದೆ. ಆದರೆ, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಭೇಟಿ ನೀಡುತ್ತಿರುವುದು ಮತ್ತು ಜನಪ್ರತಿನಿಧಿಗಳು, ಸ್ಥಳೀಯ ನಿವಾಸಿಗಳ ಬೇಡಿಕೆಯ ಮೇರೆಗೆ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಅವರು ದೀಪಾಲಂಕಾರವನ್ನು ಇನ್ನೂ ೯ ದಿನಗಳವರೆಗೆ ವಿಸ್ತರಿಸಿದ್ದಾರೆ. ಈ ಬಾರಿಯ ದಸರಾ ದಲ್ಲಿ ದೀಪಾಲಂಕಾರಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರಿಂದ ದಾಖಲೆ ರೂಪದಲ್ಲಿ ನಗರದೆಲ್ಲೆಡೆ ರಸ್ತೆಗಳು, ವೃತ್ತಗಳಿಗೆ ಮಾಡಿರುವ ದೀಪಾಲಂಕಾರ ಕಂಗೊಳಿಸುತ್ತಿವೆ.

ನಗರದ ಅರಮನೆ ಸುತ್ತ ಮುತ್ತಲಿನ ರಸ್ತೆಗಳು, ಸಯ್ಯಾಜಿರಾವ್ ರಸ್ತೆ, ಡಿ.ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ, ಚಾಮರಾಜ ಜೋಡಿ ರಸ್ತೆ ಮತ್ತಿತರೆ ರಸ್ತೆಗಳಿಗೆ ದೀಪಾಲಂಕಾರ ಮಾಡಲಾಗಿದೆ. ಜತೆಗೆ ಕೆ.ಆರ್.ವೃತ್ತ, ಚಾಮರಾಜವೃತ್ತ, ಹಾರ್ಡಿಂಜ್ ವೃತ್ತ, ರಾಮಸ್ವಾಮಿ ವೃತ್ತ, ಎಲ್‌ಐಸಿ ವೃತ್ತ ಮತ್ತಿತರೆ ವೃತ್ತ ಗಳಲ್ಲಿ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ,, ಸುತ್ತೂರು ಶ್ರೀ ರಾಜೇಂದ್ರ ಸ್ವಾಮೀಜಿ, ಭಾರತದ ಭೂಪಟ, ಸ್ವಾಮಿ ವಿವೇಕಾನಂದ, ಮೈಸೂರು ಅರಮನೆ, ವಿಷ್ಣು, ಶ್ರೀಕೃಷ್ಣ ರಥ, ವಿಧಾನಸೌಧ, ಪ್ರಾಣ -ಪಕ್ಷಿಗಳು, ಚಾಮುಂಡಿಬೆಟ್ಟದಲ್ಲಿ ಸ್ವಾಗತ ಕೋರುವ ಪ್ರತಿಕೃತಿ ಮತ್ತಿತರೆ ಪ್ರತಿಕೃತಿಗಳನ್ನು ಪ್ರಮುಖ ವೃತ್ತಗಳಲ್ಲಿ ಅಳವಡಿಸಿದ್ದು, ಪ್ರತಿ ದಿನ ಸಾವಿರಾರು ಮಂದಿ ಪ್ರವಾಸಿ ಗರು ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಅದರಂತೆ ಶನಿವಾರವೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೆಳಕಿನ ಸೌಂದರ್ಯ ಕಣ್ತುಂಬಿಕೊAಡರು.

ಟ್ರಾಫಿಕ್ ಜಾಮ್: ದೀಪಾಲಂಕಾರ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ವಾಹನಗಳಲ್ಲಿ ಆಗಮಿಸಿದ ಹಿನ್ನೆಲೆ ಕೆ.ಆರ್.ಸರ್ಕಲ್, ಆಯುರ್ವೇದಿಕ್ ಸರ್ಕಲ್, ಬಸವೇಶ್ವರ ಸರ್ಕಲ್, ಹಾರ್ಡಿಂಜ್ ವೃತ್ತ ಮತ್ತಿತರೆ ವೃತ್ತಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಂಚಾರ ದಟ್ಟಣೆ ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸಪಡುತ್ತಿದ್ದ ದೃಶ್ಯ ಕಂಡು ಬಂತು.

Translate »