ಮಕ್ಕಳ ಮೇಲಿನ ಲಸಿಕೆ ಮೊದಲ ಡೋಸ್ ಟ್ರಯಲ್ಸ್ ಪೂರ್ಣ
ಮೈಸೂರು

ಮಕ್ಕಳ ಮೇಲಿನ ಲಸಿಕೆ ಮೊದಲ ಡೋಸ್ ಟ್ರಯಲ್ಸ್ ಪೂರ್ಣ

July 8, 2021

ಮೈಸೂರು, ಜು. 7(ಆರ್‍ಕೆ)- ಕೊರೊನಾ 3ನೇ ರೂಪಾಂ ತರ ಅಲೆಯು ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಮೈಸೂರು ಸೇರಿ ದೇಶದ 10 ಆಸ್ಪತ್ರೆಗಳಲ್ಲಿ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ ನಡೆಯುತ್ತಿದೆ.

ಮೈಸೂರಿನ ಚೆಲುವಾಂಬ ಆಸ್ಪತ್ರೆಯ ಮಕ್ಕಳ ಪುನರ್ವ ಸತಿ ಕೇಂದ್ರದಲ್ಲಿ ಈಗಾಗಲೇ 12ರಿಂದ 18, 6ರಿಂದ 12 ಹಾಗೂ 2ರಿಂದ 6 ವರ್ಷದ ಮಕ್ಕಳಿಗೆ ಮೂರು ಹಂತಗಳಲ್ಲಿ ಮೊದಲ ಡೋಸ್ ಲಸಿಕೆಯನ್ನು ಪ್ರಯೋಗಾತ್ಮಕವಾಗಿ ನೀಡಲಾಗಿದೆ. ಹಾಗೂ 12ರಿಂದ 18 ವರ್ಷದೊಳಗಿನ ವರ್ಗದ ಮಕ್ಕಳಿಗೆ 2ನೇ ಡೋಸ್ ಲಸಿಕೆಯನ್ನೂ ನೀಡಲಾಗಿದೆ ಎಂದು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಅಂಡ್ ಡೈರೆಕ್ಟರ್ ಡಾ. ಸಿ.ಪಿ. ನಂಜರಾಜ್ ತಿಳಿಸಿದ್ದಾರೆ.

6ರಿಂದ 12 ಮತ್ತು 2ರಿಂದ 6 ವರ್ಷದ ಮಕ್ಕಳಿಗೆ 2ನೇ ಡೋಸ್ ಲಸಿಕೆ ನೀಡಿದ 208 ದಿನಗಳ ಕಾಲ ನಿಗಾ ವಹಿಸಿ, ಎಲ್ಲಾ 10 ಆಸ್ಪತ್ರೆಗಳಿಂದ ಮಾಹಿತಿ ಪಡೆದುಕೊಂಡು, ಟ್ರಯಲ್ಸ್ ಪಡೆದ ಮಕ್ಕಳಿಗೆ ಯಾವುದೇ ಅಡ್ಡ ಪರಿಣಾಮಗಳಾಗಲ್ಲ ಎಂಬುದನ್ನು ದೃಢಪಡಿಸಿಕೊಂಡು ಡಿಸೆಂಬರ್ ನಂತರ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಪ್ರಕ್ರಿಯೆ ಆರಂಭಿಸಬೇಕಾಗುತ್ತದೆ ಎಂದು ತಿಳಿಸಿದರು. ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಟ್ರಯಲ್ಸ್ ಡೋಸ್ ಪಡೆದುಕೊಂಡಿರುವ ಎಲ್ಲಾ ಮಕ್ಕಳೂ ಸುರಕ್ಷಿತವಾಗಿವೆ. ಆರೋಗ್ಯದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಎಂದು ಡಾ. ನಂಜರಾಜ್ ತಿಳಿಸಿದರು.

Translate »