ಕಬ್ಬು ಬೆಳೆಗಾರರಿಗೆ ನ್ಯಾಯ ಕೊಡಿಸುವಲ್ಲಿ ಸರ್ಕಾರವೂ ಅಸಹಾಯಕ
ಮೈಸೂರು

ಕಬ್ಬು ಬೆಳೆಗಾರರಿಗೆ ನ್ಯಾಯ ಕೊಡಿಸುವಲ್ಲಿ ಸರ್ಕಾರವೂ ಅಸಹಾಯಕ

November 29, 2018

ಮೈಸೂರು: ಸಂಕಷ್ಟದ ನಡುವೆಯೂ ಶ್ರಮಪಟ್ಟು ಬೆಳೆದ ಕಬ್ಬಿಗೆ ಕೊಡಬೇಕಾದ ಕೋಟ್ಯಾಂತರ ರೂ. ಹಣವನ್ನು ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿದ್ದರೂ ನ್ಯಾಯ ಕೊಡಿಸಬೇಕಾದ ಸರ್ಕಾರ ಅಸಹಾಯಕತೆ ವ್ಯಕ್ತಪಡಿಸುತ್ತಿದೆ.
ಇಂತಹ ಸನ್ನಿವೇಶದಲ್ಲಿ ಹಗ್ಗಜಗ್ಗಾಟ ಸಾಮಾನ್ಯ ಸಂಗತಿ ಎನ್ನುವಂತಾಗಿದ್ದು, ಬೆವರು ಸುರಿಸಿ ಬೆಳೆದ ಕಬ್ಬನ್ನು ಕಾರ್ಖಾನೆ ಗಳಿಗೆ ಪೂರೈಸಿದ ರೈತ, ಸರ್ಕಾರದ ಮೊರೆ ಹೋದರೂ ಪ್ರಯೋಜನವಾಗುವ ಪರಿಸ್ಥಿತಿ ಮಾತ್ರ ಕಾಣುತ್ತಲೇ ಇಲ್ಲ.

ಸಕ್ಕರೆ ಕಾರ್ಖಾನೆಗಳ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸಾಧ್ಯವಿಲ್ಲವೇ ಎಂದು ಅವಲೋಕಿಸಿ ದರೆ, ಸರ್ಕಾರವೇ ಕಾರ್ಖಾನೆ ಮಾಲೀಕರ ಹಿಡಿತಕ್ಕೆ ಸಿಲುಕಿ ದೆಯೇ ಎಂಬ ಅನುಮಾನ ಮೂಡುತ್ತದೆ. ಮಂತ್ರಿಗಳೇ ಸಕ್ಕರೆ ಕಾರ್ಖಾನೆ ಮಾಲೀಕರಾದರೇ, ಅಧಿಕಾರಿಗಳು ಹಾಗೂ ಸರ್ಕಾರ ಅವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತದೆಯೇ? ಎಂಬ ಪ್ರಶ್ನೆ ಕಬ್ಬು ಬೆಳೆಗಾರರಿಂದ ಕೇಳಿ ಬಂದಿದೆ.

ಕೋಟಿ ಕೋಟಿ ರೂ. ಬಾಕಿ ಕೊಡದೇ ಕಬ್ಬು ಬೆಳೆಗಾರರನ್ನು ಸತಾಯಿಸುತ್ತಿದ್ದರೂ ಆಡಳಿತ ಚುಕ್ಕಾಣಿ ಹಿಡಿದವರು ರೈತ ಪರವಾದ ದೃಢ ನಿರ್ಧಾರ ತೆಗೆದುಕೊಳ್ಳಲಾಗದೇ ಸಭೆಗಳ ಮೇಲೆ ಸಭೆ ನಡೆಸುತ್ತಲೇ ಕಾಲಹರಣ ಮಾಡುತ್ತಿರುವ ಬಗ್ಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತ ಕುಮಾರ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಕೆಲ ಶಾಸಕರು, ಸಚಿವರು, ರಾಜಕಾರಣಿಗಳು ಸಕ್ಕರೆ ಕಾರ್ಖಾನೆ ಮಾಲೀಕರಾಗಿದ್ದು, ಕಬ್ಬು ಬೆಳೆಗಾರರ ಇಂದಿನ ದುಸ್ಥಿತಿಗೆ ಇವರೇ ಕಾರಣ ಎಂದು ಹರಿಹಾಯ್ದ ಕುರುಬೂರು ಶಾಂತಕುಮಾರ್, ರಾಜ್ಯ ದಲ್ಲಿರುವ 67 ಕಾರ್ಖಾನೆಗಳ ಪೈಕಿ, 29 ಕಾರ್ಖಾನೆಗಳು ಮಂತ್ರಿಗಳು, ಶಾಸಕರು ಹಾಗೂ ರಾಜಕಾರಣಿಗಳ ಮಾಲೀಕತ್ವದಲ್ಲಿವೆ. ಇವರು ಉಳಿದ 38 ಕಾರ್ಖಾನೆಗಳ ಮಾಲೀಕರನ್ನು ತಮ್ಮ ಆಣತಿಯಂತೆ ನಡೆಸುತ್ತಾರೆ. ಸರ್ಕಾರವೂ ಇವರ ಪ್ರಭಾವಕ್ಕೆ ಒಳಗಾದರೆ ಕಬ್ಬು ಬೆಳೆಗಾರರಿಗೆ ಎಲ್ಲಿ ತಾನೇ ನ್ಯಾಯ ದೊರೆಯಲು ಸಾಧ್ಯ ಎಂದು ಅವರು ವಿಷಾದಿಸುತ್ತಾರೆ.

ಕಬ್ಬು ಬೆಳೆಗಾರರ ಹಿತಶತ್ರುಗಳು ಇವರೇ: ಕಾರ್ಖಾನೆಗಳ ಮಾಲೀಕರಾದ ರಾಜಕಾರಣಿಗಳು, ಸರ್ಕಾರದ ನೀತಿ-ನಿಯಮ ಗಳ ರೂಪಿಸುವಲ್ಲಿಯೂ ತಮ್ಮ ಪ್ರಭಾವ ಬೀರುತ್ತಾರೆ. ರೈತ ಪರವಾದ ನಿಲುವುಗಳಿಗೆ ಇವರೇ ಸರ್ಕಾರಕ್ಕೆ ಸಲಹೆ ನೀಡಿ ರೈತಪರ ಎಂದು ಬಿಂಬಿಸಿಕೊಂಡು ಕೊನೆಗೆ ಇವರೇ ನೀತಿ-ನಿಯಮಗಳನ್ನು ಉಲ್ಲಂಘಿಸಿ ಕಬ್ಬು ಬೆಳೆಗಾರರನ್ನು ದುಸ್ಥಿತಿಗೆ ದೂಡುತ್ತಾರೆ.

ಇಂತಹ ನಾಟಕೀಯ ಸನ್ನಿವೇಶಗಳಿಂದ ರೈತರು ಮೋಸ ಹೋಗುವಂತಾಗಿದೆ ಎನ್ನುತ್ತಾರೆ ಕುರುಬೂರು ಶಾಂತಕುಮಾರ್.
ರಾಜ್ಯದಲ್ಲಿ 480 ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳು, ಅಧಿಕ ಬೆಲೆ ನೀಡುವ ಆಮಿಷವೊಡ್ಡಿ ರೈತರಿಂದ ಕಬ್ಬು ಸರಬರಾಜು ಮಾಡಿಕೊಂಡಿವೆ. ಇದೀಗ ಸಕ್ಕರೆ ಕಾರ್ಖಾನೆ ಮಾಲೀಕರು ಹೊಸ ವರಸೆ ತೆಗೆದಿದ್ದು, ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಕುಸಿತ ಕಂಡಿದೆ. ಹೀಗಾಗಿ ಹೆಚ್ಚುವರಿ ಬೆಲೆ ಕೊಡ ಲಾಗದು ಎಂಬ ವಾದ ಮಂಡಿಸತೊಡಗಿವೆ. ಹೆಚ್ಚುವರಿ ಬೆಲೆ ನೀಡಿದರೆ ಕಾರ್ಖಾನೆಯನ್ನೇ ಮುಚ್ಚುವ ಹಂತಕ್ಕೆ ನಾವು ಬರಬೇ ಕಾಗುತ್ತದೆ ಎನ್ನುತ್ತಿದ್ದಾರೆ. ಮಾಲೀಕರ ಈ ವಾದಕ್ಕೆ ಸಂಬಂಧಿಸಿ ದಂತೆ ಮಾತನಾಡಿದ ಕುರುಬೂರು ಶಾಂತಕುಮಾರ್, ಬಾಗಲ ಕೋಟೆ ಜಿಲ್ಲೆಯಲ್ಲಿ 11 ಕಾರ್ಖಾನೆಗಳು ಒಟ್ಟು 320 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ. ಸಕ್ಕರೆ ಕಾರ್ಖಾನೆಗಳ ಮಾಲೀ ಕರೇ ಅಧಿಕಾರದಲ್ಲಿದ್ದರೆ, ಯಾವ ಅಧಿಕಾರಿ ತಾನೇ ಅವರ ವಿರುದ್ಧ ಕ್ರಮ ಜರುಗಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯದ ಸಹಕಾರ ವಲಯದಲ್ಲಿ 22 ಕಾರ್ಖಾನೆಗಳಿದ್ದು, ನಷ್ಟದ ನೆಪವೊಡ್ಡಿ ಈ ಪೈಕಿ ಹಲವಾರು ಕಾರ್ಖಾನೆಗಳಿಗೆ ಬೀಗ ಜಡಿಯಲಾಗಿದೆ ಎಂದು ವಿಷಾದಿಸಿದರು.

ಕಾರ್ಖಾನೆಗಳು ಸರ್ಕಾರದ ಮಾರ್ಗಸೂಚಿ ಪಾಲಿಸಲ್ಲ
ಕಳೆದ ಎರಡು ವರ್ಷಗಳ ಹಿಂದೆಯೇ ಪ್ರತಿ ರೈತನಿಂದ ಕಬ್ಬು ಖರೀದಿ ಸಂಬಂಧ ದ್ವಿಪಕ್ಷೀಯ ಒಪ್ಪಂದವನ್ನು ಕಡ್ಡಾಯವಾಗಿ ಮಾಡಿಕೊಳ್ಳುವಂತೆ ಸರ್ಕಾರ ಆದೇಶ ಮಾಡಿದೆ. ಈ ಒಪ್ಪಂದದ ಸಂಬಂಧ ದ್ವಿಪಕ್ಷೀಯ ಒಪ್ಪಂದ ಪತ್ರವನ್ನು ಸರ್ಕಾರ ಬಿಡುಗಡೆ ಮಾಡಿದೆ. ಆದರೆ ಕಾರ್ಖಾನೆಗಳು ಇದನ್ನು ಪಾಲಿಸುತ್ತಿಲ್ಲ ಎನ್ನುತ್ತಾರೆ ಶಾಂತಕುಮಾರ್.

ಕಳೆದ ವಾರ ಮಾಲೀಕರೊಂದಿಗೆ ಸಿಎಂ ನಡೆಸಿದ ಸಭೆಯಲ್ಲಿ ಎಫ್‍ಆರ್‍ಪಿ (ನ್ಯಾಯಯುತ ಮತ್ತು ಲಾಭದಾಯಕ ಬೆಲೆ) ದರದೊಂದಿಗೆ ಹೆಚ್ಚುವರಿಯಾಗಿ ಟನ್‍ಗೆ 300 ರೂ. ನೀಡುವಂತೆ ನೀಡಿದ ಸೂಚನೆಯನ್ನು ಬಹುತೇಕ ಎಲ್ಲಾ ಕಾರ್ಖಾನೆ ಮಾಲೀಕರು ನಿರಾಕರಿಸಿದ್ದಾರೆ. ಸರ್ಕಾರ 150 ರೂ. ನೀಡಲಿದ್ದು, ನೀವು ಉಳಿದ 150 ರೂ. ಭರಿಸಬೇಕು ಎಂಬ ಸರ್ಕಾರದ ಸಲಹೆಗೂ ಮಾಲೀಕರು ಹಿಂದೇಟು ಹಾಕಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಶಾಂತಕುಮಾರ್ ತಿಳಿಸಿದರು.

ತಮಿಳುನಾಡಿನಲ್ಲಿ ಟನ್‍ವೊಂದಕ್ಕೆ ನಿಗದಿಯಾಗಿರುವ ಎಫ್‍ಆರ್‍ಪಿ ದರ ಜೊತೆಗೆ ಹೆಚ್ಚುವರಿಯಾಗಿ 200 ರೂ. ನೀಡಲಾಗುತ್ತಿದೆ. ಅದೇ ರೀತಿ ಉತ್ತರ ಪ್ರದೇಶದಲ್ಲಿ 250 ರೂ. ನೀಡಲಾಗುತ್ತಿದೆ. ಆದರೆ ನಮ್ಮಲ್ಲಿ ಕಬ್ಬು ಬೆಳೆದ ರೈತರು ಕಂಗಾಲಾಗಿದ್ದರೂ ಕಾರ್ಖಾನೆ ಮಾಲೀಕರ ಮನಸ್ಸು ಕರಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಎಂ.ಬಿ.ಪವನ್‍ಮೂರ್ತಿ

Translate »