ಮೈಸೂರು ತಾಪಂ ಅಧ್ಯಕ್ಷೆ ವಿರುದ್ಧ ಅವಿಶ್ವಾಸಕ್ಕೆ ಸಿದ್ಧತೆ
ಮೈಸೂರು

ಮೈಸೂರು ತಾಪಂ ಅಧ್ಯಕ್ಷೆ ವಿರುದ್ಧ ಅವಿಶ್ವಾಸಕ್ಕೆ ಸಿದ್ಧತೆ

November 29, 2018

ಅಧ್ಯಕ್ಷೆ ಕಾಳಮ್ಮ ವಿರುದ್ಧ ತಿರುಗಿ ಬಿದ್ದ ಸ್ವಪಕ್ಷೀಯರು; ಜೆಡಿಎಸ್‍ನ 20 ಸದಸ್ಯರಿಂದ ತಾಪಂ ಇಓಗೆ ಮನವಿ
ಮೈಸೂರು:  ಒಪ್ಪಂದ ದಂತೆ ಅಧಿಕಾರಾವಧಿ ಮುಗಿದಿದ್ದರೂ ರಾಜೀ ನಾಮೆ ನೀಡದೆ ಅಧ್ಯಕ್ಷ ಸ್ಥಾನದಲ್ಲಿಯೇ ಮುಂದುವರೆಯುತ್ತಿರುವ ತಾ.ಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ವಿರುದ್ಧ ಸ್ವಪಕ್ಷಿಯರೇ ತಿರುಗಿ ಬಿದ್ದಿದ್ದು, ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದಾರೆ.

ಮೈಸೂರಿನ ನಜರ್‍ಬಾದ್‍ನಲ್ಲಿರುವ ಮಿನಿ ವಿಧಾನಸೌಧದ ತಾ.ಪಂ ಸಭಾಂ ಗಣದಲ್ಲಿ ಬುಧವಾರ ನಡೆಯಬೇಕಾಗಿದ್ದ ತಾ.ಪಂ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ರಾಜೀ ನಾಮೆ ನೀಡುವಂತೆ ಬಿಗಿಪಟ್ಟು ಹಿಡಿದರ ಲ್ಲದೆ, ಸಭೆಯನ್ನು ಬಹಿಷ್ಕರಿಸುವ ಮೂಲಕ ಅಧ್ಯಕ್ಷರ ಕಾರ್ಯವೈಖರಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್ ವರಿಷ್ಠರ ಸೂಚನೆಯ ಮೇರೆಗೆ ಮೊದಲ ಅವಧಿಗೆ ತಾ.ಪಂ ಅಧ್ಯಕ್ಷೆಯಾಗಿ ಅಧಿಕಾರದ ಗದ್ದುಗೆ ಏರಿದ್ದ ಕಾಳಮ್ಮ 2018ರ ಮೇ ತಿಂಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿತ್ತು. ಆದರೆ ರಾಜೀನಾಮೆ ನೀಡುವುದಕ್ಕೆ ನಿರಾಕರಿಸಿ ಅಧ್ಯಕ್ಷೆಯಾಗಿ ಮುಂದುವರೆಯಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದರಿಂದ ಕಳೆದ ಎರಡು ತಿಂಗಳಿಂದ ನಡೆಯಬೇಕಾಗಿದ್ದ ಸಾಮಾನ್ಯ ಸಭೆಗೆ ಜೆಡಿಎಸ್ ಸದಸ್ಯರು ಗೈರು ಹಾಜ ರಾಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿ ದ್ದರು. ಇಂದು ಸಾಮಾನ್ಯ ಸಭೆಯೊಂದಿಗೆ ವಿವಿಧ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಸಲು ನಿರ್ಧರಿಸಲಾಗಿತ್ತು. ಅಲ್ಲದೆ ಈ ಸಭೆಯಲ್ಲಿ ಎಲ್ಲಾ ಸದಸ್ಯರು ಹಾಜರಾತಿ ಹಾಕುವುದು ಕಡ್ಡಾಯವಾಗಿತ್ತು. ಕಳೆದ ಎರಡು ಸಭೆಗಳನ್ನು ಬಹಿಷ್ಕರಿಸಿದ್ದರಿಂದ ಇಂದಿನ ಸಭೆ ಎಲ್ಲಾ ಸದಸ್ಯರಿಗೂ ಅನಿವಾರ್ಯವಾಗಿತ್ತು.

ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ತಾ.ಪಂ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಾಗಿದ್ದರು. ಅಧಿಕಾರಿಗ ಳಿರುವುದನ್ನು ಗಮನಿಸಿದ ತಾ.ಪಂ ಸದಸ್ಯ ಹನುಮಂತು ಸ್ಥಾಯಿ ಸಮಿತಿ ರಚನೆಯಾಗದೆ ಅಧಿಕಾರಿಗಳ ಸಭೆಗಳ ಸಭೆ ನಡೆಸುವುದಕ್ಕೆ ಅವಕಾಶವಿಲ್ಲ. ಯಾವ ನಿಯಮದಲ್ಲಿ ಅಧಿಕಾರಿಗಳನ್ನು ಸಭೆ ಕರೆದಿದ್ದೀರಿ? ಎಂದು ಪ್ರಶ್ನಿಸಿದರು. ಇದಕ್ಕೆ ಅಧ್ಯಕ್ಷೆ ಕಾಳಮ್ಮ ಅವರು, ಸ್ಥಾಯಿ ಸಮಿತಿ ಚುನಾವಣೆ ನಂತರ ಪ್ರಗತಿ ಪರಿಶೀಲನೆ ಸಭೆ ನಡೆಸಲು ಉದ್ದೇಶಿ ಸಿದ್ದು, ಅದಕ್ಕಾಗಿ ಅಧಿಕಾರಿಗಳಿಗೆ ಸಭೆಗೆ ಆಹ್ವಾನ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮತ್ತೊಮ್ಮೆ ಸಭೆ ಬಹಿಷ್ಕಾರ: ಸ್ಥಾಯಿ ಸಮಿತಿ ಚುನಾವಣೆ ನಡೆಸುವುದಕ್ಕೂ ಸದಸ್ಯರು ಅವಕಾಶ ನೀಡಲಿಲ್ಲ. ಏಕಾಏಕಿ ಅಧ್ಯಕ್ಷೆಯ ವಿರುದ್ಧ ಮುಗಿಬಿದ್ದ ಜೆಡಿಎಸ್ ಸದಸ್ಯರು ತಾಪಂನ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಆಡಳಿತ ನಡೆಸುತ್ತಿದ್ದೀರಿ. ಇದರಿಂದ ಅಭಿವೃದ್ಧಿ ಕುಂಠಿತವಾಗಿದೆ. ನಿಮ್ಮ ನೇತೃತ್ವದಲ್ಲಿ ನಮಗೆ ಕಾರ್ಯ ನಿರ್ವ ಹಿಸಲು ಸಾಧ್ಯವಿಲ್ಲ. ಅಧ್ಯಕ್ಷರು ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಸಭೆ ಬಹಿಷ್ಕರಿಸಿ ಹೊರನಡೆದರು. ಅಧ್ಯಕ್ಷ ಸ್ಥಾನ ಬಿಟ್ಟುಕೊಡದ ಪಕ್ಷದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗೆ ಮನವಿ: ಆ ಬಳಿಕ ತಾಪಂ ಸದಸ್ಯರು ಜಿಲ್ಲಾಧಿಕಾರಿ ಕಚೇರಿಗೆ ಬಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರನ್ನು ಭೇಟಿ ಮಾಡಿ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ಕೋರಿದರು. ಈ ಕುರಿತು ಅಭಿರಾಮ್ ಜಿ.ಶಂಕರ್ ಅವರು ಪ್ರತಿಕ್ರಿಯೆ ನೀಡಿ ತಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತು ವಳಿ ಮಂಡಿಸಲು ಅನುಮತಿ ಕೋರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಕಾನೂನಿ ನಲ್ಲಿ ಅವಕಾಶವಿಲ್ಲ. ತಾಪಂ ಇಓಗೆ ಮನವಿಪತ್ರ ಸಲ್ಲಿಸುವಂತೆ ಸಲಹೆ ನೀಡಿ ದರು. ನಂತರ ತಾಪಂ ಇಓ ಲಿಂಗ ರಾಜಯ್ಯ ಅವರಿಗೆ ಜೆಡಿಎಸ್‍ನ 20 ಸದಸ್ಯರು ಸಹಿ ಮಾಡಿ ಅವಿಶ್ವಾಸ ನಿರ್ಣಯ ಮಂಡಿಸಲು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಪಂ ಉಪಾಧ್ಯಕ್ಷ ಎನ್.ಬಿ.ಮಂಜು, ಅಧ್ಯಕ್ಷ ಸ್ಥಾನದ ಆಕ್ಷಾಂಕಿ ತುಳಸಿ ಸೇರಿದಂತೆ ಜೆಡಿಎಸ್‍ನ ಸದಸ್ಯರು ಪಾಲ್ಗೊಂಡಿದ್ದರು.

Translate »