ಮೈಸೂರಲ್ಲಿ ರಣಜಿ ಕ್ರಿಕೆಟ್ ಪಂದ್ಯ 113 ರನ್‍ಗೆ ಮಹಾರಾಷ್ಟ್ರ ಸರ್ವಪತನ ಕರ್ನಾಟಕ ಬೌಲರ್‍ಗಳ ಮೇಲುಗೈ
ಮೈಸೂರು

ಮೈಸೂರಲ್ಲಿ ರಣಜಿ ಕ್ರಿಕೆಟ್ ಪಂದ್ಯ 113 ರನ್‍ಗೆ ಮಹಾರಾಷ್ಟ್ರ ಸರ್ವಪತನ ಕರ್ನಾಟಕ ಬೌಲರ್‍ಗಳ ಮೇಲುಗೈ

November 29, 2018

ಮೈಸೂರು:  ಮೈಸೂರಿನಲ್ಲಿ ಇಂದಿನಿಂದ ಆರಂಭಗೊಂಡಿರುವ ರಣಜಿ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕ ತಂಡ ಎದುರಾಳಿ ಮಹಾರಾಷ್ಟ್ರ ತಂಡದ ಎಲ್ಲಾ ವಿಕೆಟ್‍ಗಳನ್ನು ಪತನಗೊಳಿಸುವ ಮೂಲಕ ಮೊದಲ ದಿನದ ಅಂತ್ಯಕ್ಕೆ ಮೇಲುಗೈ ಸಾಧಿಸಿತು.

ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರಿಕೆಟ್ ಮೈದಾನ ದಲ್ಲಿ (ಗ್ಲೇಡ್ಸ್) ಇಂದಿನಿಂದ ನಾಲ್ಕು ದಿನ ಗಳ ಕಾಲ ಪಂದ್ಯಾವಳಿ ನಡೆಯಲಿದ್ದು, 85ನೇ ಆವೃತ್ತಿಯ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ 4ನೇ ಸುತ್ತಿನ ತನ್ನ 3ನೇ ಪಂದ್ಯದ ಮೊದಲ ದಿನದಾಟದಲ್ಲಿ (ಬುಧ ವಾರ) ಕರ್ನಾಟಕ ತಂಡದ ಮಾರಕ ಬೌಲಿಂಗ್‍ನಿಂದ ಮಹಾರಾಷ್ಟ್ರ ತಂಡದ ಎಲ್ಲಾ ವಿಕೆಟ್‍ಗಳು ಪತನಗೊಂಡವು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮಹಾರಾಷ್ಟ್ರ ತಂಡ ಎದುರಾಳಿ ಕರ್ನಾಟಕ ತಂಡದ ಮಾರಕ ಬೌಲಿಂಗ್‍ಗೆ 39.4 ಓವರ್‍ಗೆ ಎಲ್ಲಾ ವಿಕೆಟ್‍ಗಳನ್ನು ಒಪ್ಪಿಸಿ 113 ರನ್‍ಗಳನ್ನು ಕಲೆ ಹಾಕಿತು. ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡವು ಮೊದಲ ದಿನದಾಟದಂತ್ಯಕ್ಕೆ 40 ಓವರ್ ಗಳಲ್ಲಿ 3 ವಿಕೆಟ್‍ಗಳ ನಷ್ಟಕ್ಕೆ 70 ರನ್ ಗಳಿಸಿತು. ಡಿ.ನಿಶ್ಚಲ್ 101 ಎಸೆತಗಳಿಗೆ 32 ರನ್ ಹಾಗೂ ಜೆ.ಸುಚಿತ್ 12 ಎಸೆತಗಳಿಗೆ 2 ರನ್‍ಗಳನ್ನು ಗಳಿಸಿ ಕ್ರೀಸ್‍ನಲ್ಲಿದ್ದಾರೆ.

ದಿನದಾಟ ಆರಂಭಗೊಳ್ಳುತ್ತಿದ್ದಂತೆ ಮಹಾ ರಾಷ್ಟ್ರದ ಬ್ಯಾಟ್ಸ್‍ಮನ್ ಚಿರಾಗ್ ಖುರಾನ ಮೊದಲ ಓವರ್‍ನ 5ನೇ ಬಾಲಿಗೆ ಬೌಲರ್ ವಿನಯ್‍ಕುಮಾರ್‍ಗೆ (ನಾಯಕ) ವಿಕೆಟ್ ಒಪ್ಪಿಸಿ ಹೊರನಡೆದರು. ಮತ್ತೊಬ್ಬ ಬ್ಯಾಟ್ಸ್‍ಮನ್ ಸ್ವಪ್ನಿಲಿ ಗುಗಾಲೆ ಕೂಡ ಕೇವಲ 1.4 ಓವರ್ ನಲ್ಲೇ ಎ. ಮಿಥುನ್ ಬೌಲಿಂಗ್‍ನಲ್ಲಿ ಬಿ.ಆರ್. ಶರತ್‍ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಕರ್ನಾಟಕದ ಪರ ಬೌಲರ್‍ಗಳಾದ ವಿನಯ್ ಕುಮಾರ್ 2 (19 ರನ್ ನೀಡಿ), ಎ.ಮಿಥುನ್ 2 (42 ರನ್ ನೀಡಿ), ರೋನಿತ್ ಮೋರೆ 2 (16 ರನ್ ನೀಡಿ) ಮತ್ತು ಸುಚಿತ್ 4 (26 ರನ್ ನೀಡಿ) ವಿಕೆಟ್ ಪಡೆದರು. ಮಹಾರಾಷ್ಟ್ರದ ಪರ ಋತುರಾಜ್ ಗಾಯಕ್ವಾಡ್ 39 ಮತ್ತು ರೋಹಿತ್ ಮೋಟ್ವಾನಿ 34 ರನ್ ಗಳಿಸಿದರು.

Translate »