ಮೇಕೆದಾಟು ಯೋಜನೆ: ತ್ವರಿತವಾಗಿ ಡಿಪಿಆರ್ ಸಿದ್ಧಪಡಿಸಲು ಸ್ಪೀಕರ್ ರಮೇಶ್ ಕುಮಾರ್ ಒತ್ತಾಯ
ಮೈಸೂರು

ಮೇಕೆದಾಟು ಯೋಜನೆ: ತ್ವರಿತವಾಗಿ ಡಿಪಿಆರ್ ಸಿದ್ಧಪಡಿಸಲು ಸ್ಪೀಕರ್ ರಮೇಶ್ ಕುಮಾರ್ ಒತ್ತಾಯ

November 29, 2018

ಬೆಂಗಳೂರು: ಕೃಷ್ಣರಾಜಸಾಗರ ಅಣೆಕಟ್ಟೆಗೆ ಸಮಾನಾಂತರವಾಗಿ ಮೇಕೆ ದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ತಕ್ಷಣವೇ ಡಿಪಿಆರ್ ಸಿದ್ಧ ಮಾಡಿ ಕೇಂದ್ರಕ್ಕೆ ಸಲ್ಲಿಸಬೇಕೆಂದು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಸರ್ಕಾರ ವನ್ನು ಒತ್ತಾಯಿಸಿದ್ದಾರೆ. ಚಳಿಗಾಲ ಅಧಿವೇಶನ ಕುರಿತಂತೆ ವಿವರಣೆ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಯೋಜನೆ ಅನುಷ್ಠಾನಗೊಳ್ಳುವುದರಿಂದ ಉಭಯ ರಾಜ್ಯಗಳಿಗೂ ಅನುಕೂಲವಾಗಲಿದೆ. ಬರಡು ಭೂಮಿ ಜನರಿಗೆ ಶುದ್ಧ ಕುಡಿಯುವ ನೀರು ಧಕ್ಕಲಿದೆ ಎಂದರು. ಮೇಕೆದಾಟು ಯೋಜನೆಗೆ ಅನುಮತಿ ನೀಡಿರುವುದಕ್ಕೆ ಕೇಂದ್ರವನ್ನು ಅಭಿನಂದಿಸುತ್ತೇನೆ. ತ್ವರಿತಗತಿಯಲ್ಲಿ ಯೋಜನೆ ಕಾರ್ಯರೂಪಕ್ಕೆ ಬಂದಲ್ಲಿ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ.

ಕಾವೇರಿ ವಿಚಾರದಲ್ಲಿ ತಮಿಳುನಾಡು ಕ್ಯಾತೆ ಇದ್ದಿದ್ದೇ. ಆದರೆ ಬಾಯಾರಿಕೆ ಇರುವ ಜನರಿಗೆ ನೀರುಣಿಸುವ ಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿರುವುದಕ್ಕೆ ನಾನು ಅಭಿನಂದಿಸುತ್ತೇನೆ. ಕಾವೇರಿ ಕಣಿವೆಯಲ್ಲಿ ಆಗುವ ಎಲ್ಲಾ ಯೋಜನೆಗಳಿಗೆ ತಮಿಳುನಾಡು ಅಡ್ಡಗಾಲು ಹಾಕುವುದು ಸರಿಯಲ್ಲ. ಗ್ರೀನ್ ಟ್ರಿಬ್ಯೂನಲ್ ಸೇರಿದಂತೆ ಕೇಂದ್ರದಲ್ಲಿ ಕ್ಲಿಯರೆನ್ಸ್ ಸಿಕ್ಕಿದೆ. ಇನ್ನು ತಡ ಮಾಡದೇ ರಾಜ್ಯ ಸರ್ಕಾರ ಉಳಿದ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದರು. ಬೆಳಗಾವಿಯಲ್ಲಿ ಡಿ.10ರಿಂದ ಅಧಿವೇಶನ ಹಿನ್ನೆಲೆಯಲ್ಲಿ ಎಲ್ಲಾ ಸಿದ್ಧತೆ ನಡೆಯುತ್ತಿದೆ ಮೊದಲ ದಿನ ಅಗಲಿದ ಗಣ್ಯ ನಾಯಕರಿಗೆ ಸಂತಾಪ ಸೂಚನೆ ಮಾಡಲಾಗುತ್ತದೆ. ಕಲಾಪ ಮುಂದೂಡುವುದಿಲ್ಲ. ಕಲಾಪ ಮುಂದುವರೆಯಲಿದೆ. ಹಾಲಿ ಶಾಸಕರಾಗಿದ್ದರೆ ಮಾತ್ರ ಸದನ ಮುಂದೂಡಲಾಗುತ್ತದೆ.

ಶಾಸಕರು ಸದನಕ್ಕೆ ಹಾಜರಾಗಬೇಕೆಂದು ಅಪೇಕ್ಷೆ ಪಡುತ್ತೇವೆ. ಆದರೆ, ಕಡ್ಡಾಯ ಹಾಜರಾಗುವಂತೆ ಶಾಸಕರಿಗೆ ಒತ್ತಡ ಹಾಕಲು ಸಾಧ್ಯವಿಲ್ಲ. ಶಾಸಕರು ರಾಜ್ಯದ, ಕ್ಷೇತ್ರದ ಹಿತದೃಷ್ಟಿಯಿಂದ ಭಾಗವಹಿಸಿ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ಶಾಸಕರಿಗೆ ಎಲ್ಲಾ ಸೌಕರ್ಯ ನೀಡಲಾಗುತ್ತಿದೆ. ಹೀಗಾಗಿ ಶಾಸಕರು ಅಧಿವೇಶನದಲ್ಲಿ ಭಾಗವಹಿಸಬೇಕು. ಶಾಸಕರು ಹಾಜರಾಗದೇ ಇದ್ದರೆ ಜನರಿಗೆ, ಪ್ರಜಾಪ್ರಭುತ್ವಕ್ಕೆ ಬೆಲೆ ಕೊಡದಂತೆ ಆಗುತ್ತದೆ. ಶಾಸಕರು ಅಧಿವೇಶನದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

Translate »