ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು: ಮೈಸೂರಲ್ಲಿ ಕನ್ನಡ ವೇದಿಕೆ ಪ್ರತಿಭಟನೆ
ಮೈಸೂರು

ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು: ಮೈಸೂರಲ್ಲಿ ಕನ್ನಡ ವೇದಿಕೆ ಪ್ರತಿಭಟನೆ

December 6, 2018

ಮೈಸೂರು:  ಮೇಕೆದಾಟು ನೀರಿನ ಯೋಜನೆ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸಿರುವ ತಮಿಳುನಾಡು ಸರ್ಕಾರದ ನಡೆ ಖಂಡಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಕಾಡಾ ಕಚೇರಿ ಎದುರು ಜಮಾಯಿ ಸಿದ ಪ್ರತಿಭಟನಾಕಾರರು, ಹರಿಯುವ ನದಿಗೆ ದೊಣ್ಣೆ ನಾಯಕನ ಅಪ್ಪಣೆ ಎಂಬಂತೆ ಮೇಕೆದಾಟು ಯೋಜನೆಗೆ ತಮಿಳುನಾಡು ಇಲ್ಲಸಲ್ಲದ ಕ್ಯಾತೆ ತೆಗೆಯುತ್ತಿದೆ. ಆ ಮೂಲಕ ಮಾಜಿ ಸಿಎಂ ಜಯಲಲಿತಾ ನಡೆದು ಬಂದ ದಾರಿಯನ್ನೇ ತಮಿಳುನಾಡಿನ ನಾಯಕರು ಅನುಸರಿಸು ತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಯೋಜನೆಯಿಂದ ತಮಿಳುನಾಡಿಗೆ ಯಾವುದೇ ಲಾಭವಾಗಲೀ ಅಥವಾ ನಷ್ಟವಾಗಲೀ ಇಲ್ಲ. ಆದರೂ ವಿನಾಕಾರಣ ವಿರೋಧ ವ್ಯಕ್ತಪಡಿಸ ಲಾಗುತ್ತಿದ್ದು, ತಮಿಳುನಾಡು ನಾಯಕರ ಇಂತಹ ನಡೆಯಿಂದ ಎರಡು ರಾಜ್ಯಗಳ ನಡುವೆ ಸಂಘರ್ಷ ತಲೆದೋರಲಿರುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು. ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಈ ವಿಷಯವನ್ನು ರಾಜಕೀಯ ದಾಳ ಮಾಡಿಕೊಳ್ಳಲು ತಮಿಳುನಾಡು ರಾಜಕೀಯ ಮುಖಂಡರು ಹೊರಟಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಸಂಸದರು ಪಕ್ಷಾತೀತವಾಗಿ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತ್ವರಿತಗತಿಯಲ್ಲಿ ಮುಂದಾಗಬೇಕು ಎಂದು ಆಗ್ರಹಿಸಿದರು. ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಕಾರ್ಯಕರ್ತರಾದ ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಗುರುಬಸವಪ್ಪ, ಪ್ಯಾಲೆಸ್‍ಬಾಬು, ಮಂಜುನಾಥ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »