ಮೈಸೂರಿನ ಇಬ್ಬರು ಹೋಟೆಲ್ ಉದ್ಯಮಿಗಳಿಗೆ ಆತಿಥ್ಯ ರತ್ನ ಪ್ರಶಸ್ತಿ
ಮೈಸೂರು

ಮೈಸೂರಿನ ಇಬ್ಬರು ಹೋಟೆಲ್ ಉದ್ಯಮಿಗಳಿಗೆ ಆತಿಥ್ಯ ರತ್ನ ಪ್ರಶಸ್ತಿ

December 6, 2018

ಮೈಸೂರು: ಮೈಸೂರಿನ ಗೋವರ್ಧನ್ ಹೋಟೆಲು ಮಾಲೀಕ ಬಿ.ಹಯವದನಾಚಾರ್ಯ ಹಾಗೂ ಹೋಟೆಲ್ ಸಂತೋಷ್ ಮಾಲೀಕ ಕೆ.ಚಂದ್ರಶೇಖರ್ ಹೆಗ್ಡೆ ಅವರಿಗೆ ರಾಜ್ಯಮಟ್ಟದ ಪ್ರತಿಷ್ಠಿತ ಆತಿಥ್ಯ ರತ್ನ ಪ್ರಶಸ್ತಿ ಲಭಿಸಿದೆ.

ಕರ್ನಾಟಕ ಪ್ರದೇಶ ಹೋಟೆಲು ಮತ್ತು ಉಪಹಾರ ಮಂದಿರಗಳ ಸಂಘ ಹಾಗೂ ಉಡುಪಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಸಹಯೋಗ ದಲ್ಲಿ ಕೊಡಮಾಡುವ ಆತಿಥ್ಯ ರತ್ನ ಮತ್ತು ಉದ್ಯಮ ರತ್ನ ಪ್ರಶಸ್ತಿಗಳನ್ನು ಡಿಸೆಂಬರ್ 11ರಂದು ಮಧ್ಯಾಹ್ನ 2 ಗಂಟೆಗೆ ಉಡುಪಿಯ ಅಜ್ಜರ ಕಾಡುವಿನ ಆರೂರು ಲಕ್ಷ್ಮೀನಾರಾಯಣ ರಾವ್ ಮೆಮೋರಿಯಲ್ ಟೌನ್‍ಹಾಲ್‍ನಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಮೈಸೂರಿನ ಬಿ.ಹಯವದನಾಚಾರ್ಯ ಮತ್ತು ಕೆ.ಚಂದ್ರಶೇಖರ್ ಹೆಗ್ಡೆಯವರೂ ಸೇರಿದಂತೆ ಅರಸೀಕೆರೆಯ ಬಿ.ಮಂಜುನಾಥ ಮಹಾಲೆ, ಯಾದಗಿರಿಯ ಚಂದ್ರಶೇಖರ್ ಅರ್ಬೋಳೆ, ಉಡುಪಿಯ ವಿಶ್ವನಾಥ ಶೆಣೈ, ಬೆಂಗಳೂರಿನ ಎಂ. ಉಮೇಶ್ ಪೂಜಾರಿ, ಎನ್.ರಾಘವೇಂದ್ರರಾವ್, ತುಮಕೂರಿನ ಬಿ.ಅನಂತಯ್ಯ ಹಾಗೂ ಮಂಗಳೂರಿನ ಸೂರ್ಯನಾರಾಯಣರಾವ್ ಅವರಿಗೆ ಆತಿಥ್ಯ ರತ್ನ ಪ್ರಶಸ್ತಿ ಸಂದಿದೆ.

ಅದೇ ರೀತಿ ಬೆಂಗಳೂರಿನ ಎಸ್.ಷಡಕ್ಷರಿ, ಗೋಪಾಲಕೃಷ್ಣ ಶೆಟ್ಟಿ ಮತ್ತು ಉಡುಪಿಯ ಕೆರಾಡಿ ಚಂದ್ರಶೇಖರ್ ಶೆಟ್ಟಿ ಅವರು ಪ್ರತಿಷ್ಠಿತ ಉದ್ಯಮ ರತ್ನ ಪ್ರಶಸ್ತಿಗೆ ಭಾಜನರಾಗಿ ದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ, ಪಡುಬೆಳ್ಳೆ ಗ್ರಾಮದಲ್ಲಿ 1947ರ ಜೂನ್ 17ರಂದು ಜನಿಸಿದ ಹಯವದನಾಚಾರ್ಯ ಅವರು, 1966ರಿಂದ 1972ರವರೆಗೆ ಮೈಸೂರಿನ ಗೇಟ್‍ವೇಯಲ್ಲಿ ನೌಕರರಾಗಿ ಸೇವೆ ಸಲ್ಲಿಸಿ ನಂತರ ಹಳ್ಳದಕೇರಿಯಲ್ಲಿ ಮುರುಳಿ ಕೆಫೆ ಎಂಬ ಸ್ವಂತ ಹೋಟೆಲ್ ಆರಂಭಿಸಿದ್ದರು. 1986ರಲ್ಲಿ ಗೋವರ್ಧನ್ ಹೋಟೆಲ್, 1987ರಲ್ಲಿ ಪಂಚಮಿ ವಸತಿಗೃಹ ಆರಂಭಿಸಿದ್ದರಲ್ಲದೆ 2004ರಲ್ಲಿ ಕೆಫೆ ಚಾವಡಿ ಉಪಹಾರ ಗೃಹ, 2006ರಲ್ಲಿ ಅಮೋಘ ರೆಸಿಡೆನ್ಸಿ ಆರಂಭಿಸಿದ್ದ ಹಯವದನಾಚಾರ್ಯ ಅವರು, ಇದುವರೆಗೂ ಹೋಟೆಲ್ ಉದ್ಯಮ ವೃತ್ತಿಯನ್ನು ನಡೆಸುತ್ತಾ ಬಂದಿದ್ದಾರೆ.
ವೇಣೂರು ತಾಲೂಕು, ಕರಿಮಣೆಯಲು ಗ್ರಾಮದ ಮರೋಡಿ ಮನೆತನದಲ್ಲಿ 1940ರ ಫೆಬ್ರವರಿ 14ರಂದು ಜನಿಸಿದ ಕೆ.ಚಂದ್ರಶೇಖರ್ ಹೆಗ್ಡೆ ಅವರು, 1996ರಲ್ಲಿ ಮೈಸೂರಿನ ಸರಸ್ವತಿಪುರಂನಲ್ಲಿ ಹೋಟೆಲ್ ಉದ್ಯಮ ಆರಂಭಿಸಿ ಹಾಲಿ ಹೋಟೆಲ್ ಸಂತೋಷ್, ಪೈವಿಸ್ತಾ ಹೋಟೆಲಿನ ಕಟ್ಟಡ ಪಾಲುದಾರರಾಗಿದ್ದಾರೆ. ಮೈಸೂರು ಹೋಟೆಲ್ ಮಾಲೀ ಕರ ಸಂಘ, ಕರ್ನಾಟಕ ಪ್ರದೇಶ ಹೋಟೆಲ್ ಮಾಲೀಕರ ಸಂಘದ ಸದಸ್ಯರಾಗಿರುವ ಅವರು ನಿರಂತರವಾಗಿ ಹೋಟೆಲ್ ಉದ್ಯಮ ನಡೆಸುತ್ತಾ ಬಂದಿದ್ದಾರೆ.

Translate »