ಕೆಎಸ್‍ಆರ್‍ಟಿಸಿ ಮಳವಳ್ಳಿ ಡಿಪೋ ಅಧಿಕಾರಿಗಳ  ಕಿರುಕುಳ ಆರೋಪ: ವಿಷ ಸೇವಿಸಿ ಚಾಲಕ ಆತ್ಮಹತ್ಯೆ
ಮೈಸೂರು

ಕೆಎಸ್‍ಆರ್‍ಟಿಸಿ ಮಳವಳ್ಳಿ ಡಿಪೋ ಅಧಿಕಾರಿಗಳ  ಕಿರುಕುಳ ಆರೋಪ: ವಿಷ ಸೇವಿಸಿ ಚಾಲಕ ಆತ್ಮಹತ್ಯೆ

December 6, 2018

ಮಳವಳ್ಳಿ: ಕೆಎಸ್‍ಆರ್‍ಟಿಸಿ ಮಳವಳ್ಳಿ ಡಿಪೋ ಅಧಿಕಾರಿಗಳ ಕಿರುಕುಳದಿಂದಾಗಿ ಚಾಲಕನೋರ್ವ ಕಳೆದ 4 ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ ಬೆನ್ನಲ್ಲೇ ಇಂದು ಇದೇ ಡಿಪೋಗೆ ಸೇರಿದ ಮತ್ತೋರ್ವ ಚಾಲಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ತಾಲೂಕಿನ ಗಾಜನೂರಿನವನಾದ ಕೆಎಸ್‍ಆರ್‍ಟಿಸಿ ಮಳವಳ್ಳಿ ಡಿಪೋ ಚಾಲಕ ಲೋಕೇಶ್, ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈತ ಇಂದು ಮಧ್ಯಾಹ್ನ ವಿಷ ಸೇವಿಸಿದರೆಂದು ಹೇಳಲಾಗಿದ್ದು, ಮಳವಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಂಜೆ 7.30ರ ಸುಮಾರಿನಲ್ಲಿ ಸಾವಿಗೀಡಾದರೆಂದು ಹೇಳಲಾಗಿದೆ.

ವಿವರ: ಕಳೆದ 4 ದಿನಗಳ ಹಿಂದೆ ತಾಲೂಕಿನ ಕಾಗೇಪುರ ನಿವಾಸಿ ಯಾದ ಮಳವಳ್ಳಿ ಡಿಪೋ ಚಾಲಕ ವೆಂಕಟೇಶ್, ತನಗೆ ಡಿಪೋ ಮ್ಯಾನೇಜರ್ ಶಾಂತಕುಮಾರ್ ಮತ್ತು ತಾಂತ್ರಿಕ ವಿಭಾಗದ ಕುಮಾರ ನಾಯಕ್ ಎಂಬುವರು ಕಿರುಕುಳ ನೀಡುತ್ತಿದ್ದಾರೆ ಎಂದು ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಪತ್ರವೊಂದನ್ನು ಬರೆದು, ಅದನ್ನು ತನ್ನ ಜೇಬಿನಲ್ಲಿಟ್ಟುಕೊಂಡು ವಿಷ ಸೇವಿಸಿದ್ದರು. ಈತ ಅಂದು ಮಳವಳ್ಳಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಅಸ್ವಸ್ಥನಾದಾಗ ಈತನ ಸಹೋದ್ಯೋಗಿಗಳು ಮಳವಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥ ಮಿಕ ಚಿಕಿತ್ಸೆ ಕೊಡಿಸಿದ ನಂತರ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖ ಲಿಸಿದ್ದರು. ಇವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದು ಆತ್ಮಹತ್ಯೆಗೆ ಯತ್ನಿಸಿದ್ದ ವೆಂಕಟೇಶ್‍ಗೆ ಸಹಕಾರ ನೀಡಿದ್ದಾನೆ ಎಂಬ ಕಾರಣ ಕ್ಕಾಗಿ ಲೋಕೇಶ್‍ಗೆ ವಿನಾ ಕಾರಣ ಬೇರೆ ಸಬೂಬಿನೊಂದಿಗೆ ನೋಟೀಸ್ ನೀಡಿ ಅಧಿಕಾರಿಗಳು ಕಿರುಕುಳ ಕೊಟ್ಟಿದ್ದಾರೆ ಎಂದು ಹೇಳಲಾಗಿದ್ದು, ಇದರಿಂದಾಗಿ ಆತ ಇಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕೆಎಸ್‍ಆರ್‍ಟಿಸಿ ಚಾಲಕರ ವಲಯ ದಲ್ಲಿ ಮಾತುಗಳು ಕೇಳಿಬರುತ್ತಿವೆ. ಸಂತೋಷ್ ಸಾವನ್ನಪ್ಪಿದ ಹಿನ್ನೆಲೆ ಯಲ್ಲಿ ಮಳವಳ್ಳಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ಸಂಚರಿಸ ಬೇಕಾಗಿದ್ದ ಶಿಂಷಾ, ದಬ್ಬಳ್ಳಿ ಮತ್ತು ಬಿ.ಜಿ.ಪುರ ಮಾರ್ಗದ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಆ ಮಾರ್ಗದಲ್ಲಿ ಪ್ರಯಾಣಿಸಬೇಕಾಗಿದ್ದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿ ಸಬೇಕಾಯಿತು. ಈ ಸಂಬಂಧ ಪ್ರತಿಕ್ರಿಯೆಗಾಗಿ ಮಳವಳ್ಳಿ ಬಸ್ ಡಿಪೋ ಮ್ಯಾನೇಜರ್ ಶಾಂತಕುಮಾರ್ ಅವರ ಮೊಬೈಲ್ (7760990665) ಅನ್ನು ಸಂಪರ್ಕಿಸಲಾಗಿ ಅದು ಸ್ವಿಚ್ ಆಫ್ ಆಗಿತ್ತು. ಈ ಸಂಬಂಧ ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »