ಕಿಡ್ನಿ ಮಾರಾಟ ಜಾಲದ ವಂಚನೆ: ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ
ಮಂಡ್ಯ, ಮೈಸೂರು

ಕಿಡ್ನಿ ಮಾರಾಟ ಜಾಲದ ವಂಚನೆ: ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

January 10, 2019

ಮಳವಳ್ಳಿ : ಕಿಡ್ನಿ ಮಾರಾಟ ಜಾಲಕ್ಕೆ ಸಿಲುಕಿ ವಂಚನೆಗೊಳಗಾದ ಮಹಿಳೆಯೋರ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.

ಮಳವಳ್ಳಿಯ ಗಂಗಾಮತ ಬೀದಿ ನಿವಾಸಿ ವೆಂಕಟಮ್ಮ (48) ಎಂಬುವರೇ ಕಿಡ್ನಿ ಮಾರಾಟ ಜಾಲ ವಂಚನೆ ಗೊಳಗಾಗಿ ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ. ಮಳವಳ್ಳಿ ಪಟ್ಟಣದಲ್ಲಿ ವೆಂಕಟಮ್ಮ ಮಾತ್ರವಲ್ಲದೆ, ಮತ್ತೊಬ್ಬ ಮಹಿಳೆಯನ್ನೂ ಸಹ ಈ ಜಾಲದ ಮಹಿಳೆಯೋರ್ವಳು ವಂಚಿಸಿದ್ದಾಳೆ ಎಂಬುದು ಕೂಡ ಬೆಳಕಿಗೆ ಬಂದಿದೆ.

ಸೊಪ್ಪು, ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ವೆಂಕಟಮ್ಮ, ಬೇರೆಯ ವರ ಜಮೀನನ್ನು ಗುತ್ತಿಗೆಗೆ ಪಡೆದು ವೀಳ್ಯದೆಲೆ ಬೆಳೆಯುತ್ತಿದ್ದರು ಎಂದು ಹೇಳಲಾಗಿದೆ. ಈಕೆ ಪರಿಚಯಸ್ಥರ ಬಳಿ ಸ್ವಲ್ಪ ಸಾಲವನ್ನೂ ಮಾಡಿದ್ದರು ಎಂದು ಹೇಳಲಾಗಿದ್ದು, ಕಿಡ್ನಿ ಮಾರಾಟ ಜಾಲದ ತಾರಾ ಎಂಬ ಮಹಿಳೆ ವೆಂಕಟಮ್ಮ ಅವರನ್ನು ಸಂಪರ್ಕಿಸಿ, ನಿಮ್ಮ ಕಿಡ್ನಿ ಮಾರಾಟ ಮಾಡಿದರೆ 30 ಲಕ್ಷ ರೂ. ಸಿಗುತ್ತದೆ. ನಿಮ್ಮೆಲ್ಲಾ ಸಾಲವನ್ನೂ ತೀರಿಸಿಕೊಂಡು ನೆಮ್ಮದಿಯ ಜೀವನ ನಡೆಸಬಹುದು ಎಂದು ಪುಸಲಾಯಿಸಿದ್ದಾಳೆ ಎಂದು ಹೇಳಲಾಗಿದೆ. ತಾರಾಳ ಮಾತಿಗೆ ಮರುಳಾದ ವೆಂಕಟಮ್ಮ ತನ್ನ ಕಿಡ್ನಿಯನ್ನು ಮಾರಲು ಒಪ್ಪಿದ್ದಾರೆ ಎಂದು ಹೇಳಲಾಗಿದ್ದು, ಮಧ್ಯವರ್ತಿಯಾಗಿರುವ ತನಗೆ ಶೇ.10 ರಷ್ಟು ಅಂದರೆ 3 ಲಕ್ಷ ರೂ. ಕಮೀಷನ್ ನೀಡಬೇಕು. ಆನಂತರ ತಾನು ಕಿಡ್ನಿ ಖರೀದಿದಾರರನ್ನು ಕರೆತಂದು ಕಿಡ್ನಿ ಮಾರಾಟಕ್ಕೆ ವ್ಯವಸ್ಥೆ ಮಾಡುವುದಾಗಿ ಹೇಳಿದ ಮೇರೆಗೆ ವೆಂಕಟಮ್ಮನವರು ಸಾಲ ಮಾಡಿ 3 ಲಕ್ಷ ರೂ.ಗಳನ್ನು ತಾರಾಗೆ ನೀಡಿದ್ದಾರೆ ಎನ್ನಲಾಗಿದೆ.

ವೆಂಕಟಮ್ಮನಿಂದ 3 ಲಕ್ಷ ರೂ. ಪಡೆದ ತಾರಾ ಅವರ ಕಿಡ್ನಿ ಮಾರಾಟಕ್ಕೆ ವ್ಯವಸ್ಥೆ ಮಾಡದೆ ಸಬೂಬು ಹೇಳುತ್ತಾ, ಕಾಲಾಹರಣ ಮಾಡುತ್ತಿದ್ದಳು ಎಂದು ಹೇಳಲಾಗಿದ್ದು, ಮತ್ತೊಂದೆಡೆ ಸಾಲಗಾರರ ಕಾಟವೂ ಕೂಡ ವೆಂಕಟಮ್ಮನಿಗೆ ಹೆಚ್ಚಾಗಿದೆ. ಕಿಡ್ನಿ ಮಾರಾಟ ಮಾಡದೇ ಹೋದರೂ ಪರವಾಗಿಲ್ಲ ತನ್ನ 3 ಲಕ್ಷ ರೂ.ಗಳನ್ನು ಹಿಂದಿರುಗಿ ಸುವಂತೆ ತಾರಾಳನ್ನು ವೆಂಕಟಮ್ಮ ಕೇಳಿದರಾದರೂ ಆಕೆ ಹಣವನ್ನು ಹಿಂದಿರುಗಿಸದಿದ್ದ ಕಾರಣ ವೆಂಕಟಮ್ಮ ಬೆಂಗಳೂರಿನಲ್ಲಿರುವ ತನ್ನ ಸಹೋದರ ನನ್ನು ಸಂಪರ್ಕಿಸಿ ತನ್ನ ಕಷ್ಟವನ್ನು ತೋಡಿಕೊಂಡಿದ್ದಾರೆ. ಆಗ ಅವರ ಸಹೋದರ ಸ್ವಲ್ಪ ಹಣ ಸಹಾಯ ಮಾಡಿ, ಸದ್ಯದಲ್ಲೆ ತಾನು ಮಳವಳ್ಳಿಗೆ ಬಂದು ಸಮಸ್ಯೆ ಇತ್ಯರ್ಥಪಡಿಸಲು ಪ್ರಯತ್ನಿಸುವ ಭರವಸೆ ನೀಡಿ ಕಳುಹಿಸಿದ್ದರು ಎಂದು ಹೇಳಲಾಗಿದೆ.

ಆದರೆ, ತರಕಾರಿ, ಸೊಪ್ಪು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ವೆಂಕಟಮ್ಮ ಕಿಡ್ನಿ ಮಾರಾಟ ಜಾಲದ ತಾರಾಗೆ 3 ಲಕ್ಷದಷ್ಟು ದೊಡ್ಡ ಮೊತ್ತವನ್ನು ನೀಡಿ ತಾನೂ ಸಾಲಗಾರಳಾಗಿದ್ದರಿಂದ ಮನ ನೊಂದು ಪಟ್ಟಣದ ದೊಡ್ಡಕೆರೆಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ವೆಂಕಟಮ್ಮ ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿಯುತ್ತಿದ್ದಂತೆಯೇ ಮತ್ತೋರ್ವ ಮಹಿಳೆಗೂ ವಂಚಕಿ ತಾರಾ ಕಿಡ್ನಿ ಮಾರಾಟ ಮಾಡಿಸುವುದಾಗಿ ಹೇಳಿ 1.50 ಲಕ್ಷ ರೂ. ವಂಚಿಸಿದ್ದಾಳೆ ಎಂಬ ಮಾತುಗಳು ಹರಿದಾಡು ತ್ತಿವೆ. ವಂಚಕಿ ತಾರಾ ತಲೆಮರೆಸಿಕೊಂಡಿದ್ದು, ಮಳವಳ್ಳಿ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ಆರಂಭಿಸಿದ್ದಾರೆ.

Translate »