ಬಂದ್: 2ನೇ ದಿನ ಪ್ರತಿಭಟನೆಗಷ್ಟೇ ಸೀಮಿತ
ಮೈಸೂರು

ಬಂದ್: 2ನೇ ದಿನ ಪ್ರತಿಭಟನೆಗಷ್ಟೇ ಸೀಮಿತ

January 10, 2019

ಮೈಸೂರು: ಕೇಂದ್ರ ಸರ್ಕಾರ ಕಾರ್ಮಿಕ ಹಾಗೂ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಖಂಡಿಸಿ ಎಡಪಕ್ಷ ಬೆಂಬಲಿತ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ 2 ದಿನಗಳ ಭಾರತ್ ಬಂದ್‍ನ 2ನೇ ದಿನ ವಾದ ಬುಧವಾರ ಮೈಸೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಿಗ್ಗೆ ನಗರದ ಜನಜೀವನ ಎಂದಿನಂತೆಯೇ ಆರಂಭ ವಾಯಿತು. ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಹೋಟೆಲ್‍ಗಳು, ಚಲನ ಚಿತ್ರ ಮಂದಿರ, ವಾಣಿಜ್ಯ ಕೇಂದ್ರಗಳು ತೆರೆದಿದ್ದವು. ಜನತೆ ದೈನಂದಿನ ಚಟುವಟಿಕೆ ಗಳಲ್ಲಿ ಯಾವುದೇ ಆತಂಕವಿಲ್ಲದೇ ತೊಡಗಿಸಿ ಕೊಂಡಿದ್ದರು. ಸಾರಿಗೆ ಬಸ್ ಸೇರಿದಂತೆ ವಾಹನಗಳ ಸಂಚಾರವೂ ಸಾಮಾನ್ಯವಾಗಿತ್ತು.

ಭಾರತ್ ಬಂದ್‍ನ ಮೊದಲ ದಿನವಾದ ಮಂಗಳವಾರ ಹೆಚ್ಚಿನ ಸಂಖ್ಯೆಯ ಬಸ್ ಗಳು ರಸ್ತೆಗಿಳಿದಿರಲಿಲ್ಲ. ಪ್ರಯಾಣಿಕರೂ ಹೆಚ್ಚಿರಲಿಲ್ಲ. ನಗರ-ಗ್ರಾಮಾಂತರ ಬಸ್ ನಿಲ್ದಾಣಗಳೆರಡೂ ಬಿಕೋ ಎನ್ನುತ್ತಿದ್ದವು.

ಆದರೆ, ಬುಧವಾರ ಮುಂಜಾನೆಯಿಂದಲೇ ಎಲ್ಲಾ ಬಸ್‍ಗಳು ರಸ್ತೆಗಿಳಿದಿದ್ದವು. ಪ್ರತಿದಿನ 700 ಬಸ್‍ಗಳು 2500 ಟ್ರಿಪ್ ಮೂಲಕ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದವು. ಇಂದು ಎಲ್ಲಾ 700 ಬಸ್‍ಗಳು ರಸ್ತೆಗಿಳಿ ದಿದ್ದವು. ರಾಮನಗರ, ಬೆಂಗಳೂರಿನಲ್ಲಿ ಸಾರಿಗೆ ಸಂಸ್ಥೆ ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆದಿದ್ದರೂ ಮೈಸೂರಿನಿಂದ ಬೆಂಗಳೂರಿಗೆ ಬಸ್ ಸಂಚಾರ ಯಥಾ ಪ್ರಕಾರವಿತ್ತು. ಮೈಸೂರಿನಿಂದ ತಮಿಳುನಾಡು, ಆಂಧ್ರಪ್ರದೇಶ, ಗೋವಾ ರಾಜ್ಯಗಳಿಗೆ ಸಾರಿಗೆ ಸಂಸ್ಥೆ ಬಸ್‍ಗಳು ಇಂದು ತೆರಳಿದರೂ ಕೇರಳಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಪ್ರತಿದಿನ 48 ಬಸ್‍ಗಳು ಕೇರಳದ ವಿವಿಧ ನಗರಗಳಿಗೆ ತೆರಳುತ್ತವೆ.

ನಗರ ಸಂಚಾರ: ಕುವೆಂಪು ನಗರ, ಬನ್ನಿಮಂಟಪ, ಸಾತಗಳ್ಳಿ, ವಿಜಯನಗರ ಬಸ್ ಡಿಪೋಗಳಲ್ಲಿ ಒಟ್ಟು 450 ನಗರಸಾರಿಗೆ ಬಸ್‍ಗಳಿದ್ದು, ಪ್ರತಿದಿನ 175 ಮಾರ್ಗಗಳಲ್ಲಿ ಆರು ಸಾವಿರ ಟ್ರಿಪ್ ಸಂಚರಿಸುತ್ತವೆ. ಬುಧವಾರ ಎಲ್ಲ ಬಸ್‍ಗಳೂ ಎಂದಿನಂತೆಯೇ ಸಂಚಾರ ನಡೆಸಿದವು. ಶಾಲಾ-ಕಾಲೇಜುಗಳು ಬುಧವಾರ ಕಾರ್ಯನಿರ್ವಹಿಸಿದವು. ಸಾಕಷ್ಟು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು. ಕೆಲವು ಕಾಲೇಜುಗಳ ಮುಂದೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಬೈಕ್ ರ್ಯಾಲಿ: ಬ್ಯಾಂಕ್, ವಿಮೆ, ಬಿಎಸ್‍ಎನ್‍ಎಲ್, ಅಂಚೆ ಕಚೇರಿಯ ನೌಕರರು ಬುಧವಾರವೂ ಕಚೇರಿಗೆ ಹೋಗದೇ ಮುಷ್ಕರದಲ್ಲಿ ಪಾಲ್ಗೊಂಡರು. ಕಚೇರಿಗಳಲ್ಲಿ ಅಧಿಕಾರಿಗಳಷ್ಟೇ ಇದ್ದಿದ್ದರಿಂದ ನಿತ್ಯದ ಕಾರ್ಯಚಟುವಟಿಕೆಗೆ ತೊಡಕಾಗಿತ್ತು.

ನೂರಾರು ಕಾರ್ಮಿಕರು ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನಗರದ ವಿವಿಧೆಡೆ ಪ್ರತಿಭಟನೆ ನಡೆಸಿದರು. ರಾಮಸ್ವಾಮಿ ವೃತ್ತದಿಂದ ಪುರಭವನದವರೆಗೆ ಬೈಕ್ ರ್ಯಾಲಿ ನಡೆಸಿದರು. ರ್ಯಾಲಿ ನೇತೃತ್ವ ವಹಿಸಿದ್ದ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ಶೇಷಾದ್ರಿ ಮಾತನಾಡಿ, ಕೇಂದ್ರ ಸರ್ಕಾರ ಕಾಪೆರ್Çೀರೇಟ್ ಕಂಪನಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಕಾರ್ಮಿಕರ ಹಿತ ಕಡೆಗಣಿಸಿದೆ. ಕಾರ್ಮಿಕರನ್ನು ನಿರ್ಲಕ್ಷಿಸಿದರೆ ಅವರು ಕೇಂದ್ರದ ಬಿಜೆಪಿ ಸರ್ಕಾರವನ್ನು ಬದಲಾಯಿಸುವುದು ನಿಶ್ಚಿತ. ಕಾರ್ಮಿಕರ ಹೋರಾಟದಿಂದ ಹಲವು ಸರ್ಕಾರಗಳು ಉರುಳಿದ ಇತಿಹಾಸ ವಿದೆ ಎಂದು ಹೇಳಿದರು. ಭಾರತ್ ಬಂದ್ ವಿಫಲವಾಗಿಲ್ಲ. ಆದರೆ ಮಾಧ್ಯಮಗಳು ವಿಫಲ, ನೀರಸ ಎಂದು ಉಲ್ಲೇಖಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಮಿಕ ಮುಖಂಡರಾದ ವೆಂಕಟರಮಣಪ್ಪ, ಬಾಲಾಜಿ ಸೇರಿದಂತೆ ಹಲವು ಮಂದಿ ಹಾಜರಿದ್ದರು.

ಪ್ರತಿಭಟನೆ: ರಾಜ್ಯ ಸಂಯುಕ್ತ ವಿಶ್ವವಿದ್ಯಾಲಯಗಳ ಸ್ವಚ್ಛತಾ ನೌಕರರ ಸಂಘದ ಕಾರ್ಯಕರ್ತರು ಮಾನಸ ಗಂಗೋತ್ರಿಯ ಕುವೆಂಪು ಪ್ರತಿಮೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಹಿತ ಕಾಪಾಡಲು ಕಾರ್ಮಿಕ ಕಾನೂನನ್ನು ತಿದ್ದುಪಡಿ ಮಾಡುತ್ತಿದೆ. ಸಾರಿಗೆ ಕ್ಷೇತ್ರವನ್ನು ಖಾಸಗೀಕರಣ ಗೊಳಿಸಲು ಮೋಟಾರು ಕಾಯ್ದೆಗೆ ತಿದ್ದುಪಡಿ ಮಾಡಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಹಣದುಬ್ಬರ ತಡೆಯಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು. ಎಲ್ಲಾ ಕಾರ್ಮಿಕರಿಗೂ 18 ಸಾವಿರ ಕನಿಷ್ಟ ವೇತನ ನಿಗದಿಪಡಿಸ ಬೇಕು. ಕಾಳಸಂತೆ ವ್ಯಾಪಾರಕ್ಕೆ ಕಡಿವಾಣ ಹಾಕಬೇಕು, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.

ನಗರ, ಗ್ರಾಮಾಂತರ ಬಸ್ ನಿಲ್ದಾಣ ಸೇರಿದಂತೆ ವಿವಿಧ ವೃತ್ತಗಳಲ್ಲಿ, ಕೇಂದ್ರ ಸರ್ಕಾರಿ ಸ್ವಾಮ್ಯದ ಕಚೇರಿಗಳ ಮುಂದೆ ಬುಧವಾರ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿತ್ತು. ಮಫ್ತಿಯಲ್ಲಿದ್ದ ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಕಣ್ಣಿಟ್ಟಿದ್ದರು.

Translate »