ಇನ್ನು ಮುಂದೆ ಆನ್‍ಲೈನ್‍ನಲ್ಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಎಲ್ಲಾ ಪರೀಕ್ಷೆ
ಮೈಸೂರು

ಇನ್ನು ಮುಂದೆ ಆನ್‍ಲೈನ್‍ನಲ್ಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಎಲ್ಲಾ ಪರೀಕ್ಷೆ

January 10, 2019

ಬೆಂಗಳೂರು: ಸಿಇಟಿ ಸೇರಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಎಲ್ಲ ಪರೀಕ್ಷೆಗಳನ್ನು ಇನ್ನು ಮುಂದೆ ಆನ್‍ಲೈನ್‍ನಲ್ಲಿ ನಡೆಸಲು ಸರ್ಕಾರ ನಿರ್ಧರಿಸಿದೆ. ಇಂದಿಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಆನ್‍ಲೈನ್‍ನಲ್ಲಿ ಪರೀಕ್ಷೆಗಳನ್ನು ನಡೆಸಲು ಪೂರಕವಾಗಿ ತಂತ್ರಾಂಶವನ್ನು ಸಿದ್ಧಪಡಿಸಲಾಗುತ್ತಿದೆ ಎಂದರು.

ಪಿಯುಸಿ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಉಪ ನ್ಯಾಸಕರು ಸೇರಿದಂತೆ ಒಟ್ಟು 3800 ಮಂದಿಯನ್ನು ನೇಮಕ ಮಾಡಿಕೊಳ್ಳುವುದಾಗಿ ನುಡಿದ ಅವರು,ಈ ಪೈಕಿ 394 ಜನ ಪ್ರಿನ್ಸಿಪಾಲರಿರುತ್ತಾರೆ ಎಂದು ವಿವರ ನೀಡಿದರು.

ಕಾಲೇಜುಗಳಿಗೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಾಗುತ್ತಿರುವ ಕುರಿತು ಯಾವುದೇ ದಾಖಲೆಗಳನ್ನು ನಿರ್ವಹಣೆ ಮಾಡುತ್ತಿಲ್ಲ. ಆದರೆ ಇನ್ನು ಮುಂದೆ ಹಾಜರಾತಿ ದಾಖಲೆಯನ್ನು ನಿರ್ವಹಿಸುವಂತೆ ಆದೇಶ ನೀಡಲಾಗಿದೆ ಎಂದರು.

ಈ ತಿಂಗಳ ಕೊನೆಯ ಹೊತ್ತಿಗೆ ರಾಜ್ಯದ ಎಲ್ಲ ವಿವಿಗಳಲ್ಲಿ ಉಪಕುಲಪತಿಗಳ ಹುದ್ದೆ ಭರ್ತಿಯಾಗಿರುತ್ತದೆ ಎಂದು ಇದೇ ಸಂದರ್ಭದಲ್ಲಿ ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಅದೇ ರೀತಿ ಈ ತಿಂಗಳ ಅಂತ್ಯದಲ್ಲಿ ಎಲ್ಲ ಉಪಕುಲಪತಿಗಳ ಸಭೆಯನ್ನು ಕರೆಯಲಾಗುತ್ತಿದ್ದು ಶಿಕ್ಷಣದಲ್ಲಿ ಈಗಿರುವ ಪಠ್ಯಕ್ರಮದಲ್ಲಿ ಮಹತ್ವದ ಬದಲಾವಣೆ ಮಾಡಲು ಸೂಚಿಸಲಾಗುವುದು ಎಂದು ಹೇಳಿದರು.

ವಿದ್ಯೆಗೆ ಉದ್ಯೋಗ ಸಿಗಬೇಕು. ಹೀಗಾಗಿ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು.ವಿದ್ಯೆ ಉದ್ಯೋಗ ನೀಡದಿದ್ದರೆ ಕಷ್ಟವಾಗುತ್ತದೆ ಎಂದ ಅವರು,ಕೌಶಲ್ಯಾಧಾರಿತ ಶಿಕ್ಷಣ ನೀಡಿದರೆ ವಿದ್ಯಾರ್ಥಿಗಳು ಬದುಕು ಕಂಡುಕೊಳ್ಳಲು ಅನುಕೂಲವಾಗುತ್ತದೆ ಎಂದರು.

ಉನ್ನತ ಶಿಕ್ಷಣದಲ್ಲಿ ಮೂಲಭೂತ ಸೌಕರ್ಯವನ್ನು ಒದಗಿಸಲು ನಬಾರ್ಡ್ ನೂರು ಕೋಟಿ ರೂಗಳ ನೆರವು ನೀಡಿದ್ದು ಅದನ್ನು ಬಳಸಿ, ಉನ್ನತ ಶಿಕ್ಷಣದ ಗುಣ ಮಟ್ಟವನ್ನು ಹೆಚ್ಚಳ ಮಾಡಲಾಗುವುದು ಎಂದು ವಿವರಿಸಿದರು. ಸ್ಕೂಲ್ ಆಫ್ ಎಕನಾಮಿಕ್ಸ್ ಆರಂಭಕ್ಕೆ ತಕರಾರು ಎತ್ತಲಾಗಿದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಆ ಸಂಬಂಧ ಏನೇ ತಕರಾರು ಇದ್ದರೂ ಅದಕ್ಕೆ ಸಂಬಂಧಪಟ್ಟವರು ಉತ್ತರ ನೀಡುತ್ತಾರೆ ಎಂದರು.

ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಭಾಷೆಯನ್ನು ಕಲಿಸಲು ನಿರ್ಧರಿಸಲಾಗಿದೆಯೇ ಹೊರತು ಕನ್ನಡ ಭಾಷೆಯನ್ನು ಕೊಂದು ಆಂಗ್ಲ ಭಾಷೆಯನ್ನು ಕಲಿಸಲು ಹೊರಟಿಲ್ಲ ಎಂದು ಸುದ್ದಿಗಾರರ ಪಶ್ನೆಗೆ ವಿವರಿಸಿದರು. ಇವತ್ತು ಹಳ್ಳಿಗಾಡಿನಲ್ಲಿರುವ ಕಾನ್ವೆಂಟ್ ಶಾಲೆಗಳನ್ನು ರದ್ದು ಮಾಡಲಾಗುವುದಿಲ್ಲ.ಹಾಗಂತ ಬಡವರ ಮಕ್ಕಳು ಇಂಗ್ಲೀಷ್ ಓದಲೂ ಅವಕಾಶ ದಕ್ಕಿಸಿಕೊಡುವುದಿಲ್ಲ ಎಂದರೆ ಹೇಗೆ ಎಂದು ಅವರು ಪಶ್ನಿಸಿದರು.

Translate »