ಮೇಕೆದಾಟು, ಮಹದಾಯಿ ಯೋಜನೆ  ಅನುಷ್ಠಾನಕ್ಕೆ ರಾಜ್ಯ ಸಂಸದರ ಒಕ್ಕೊರಲ ಬೆಂಬಲ
ಮೈಸೂರು

ಮೇಕೆದಾಟು, ಮಹದಾಯಿ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸಂಸದರ ಒಕ್ಕೊರಲ ಬೆಂಬಲ

December 21, 2018

ಬೆಳಗಾವಿ(ಸುವರ್ಣಸೌಧ: ಮೇಕೆದಾಟು ಮತ್ತು ಮಹದಾಯಿ ಯೋಜನೆ ಅನುಷ್ಠಾನ ಸಂಬಂಧ ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಹೋರಾಡಲು ಕರ್ನಾಟಕದ ಸಂಸದರು ಹಾಗೂ ನಾಯಕರು ನಿರ್ಣಯಿಸಿದ್ದಾರೆ. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ದೆಹಲಿ ನಿವಾಸದಲ್ಲಿಂದು ರಾಜ್ಯದ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಏರ್ಪಡಿಸಿದ್ದ ಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಯಿತು.

ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ ಆದೇಶದ ಅನ್ವಯ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಪ್ರತಿರೋಧ ತೋರುತ್ತಿರುವ ತಮಿಳುನಾಡು ನಡೆ ಪ್ರತಿಭಟಿಸಿ ದೆಹಲಿಯಲ್ಲಿ ಗಾಂಧಿ ಪ್ರತಿಮೆ ಎದುರು ಒಂದು ದಿನದ ಸಾಂಕೇತಿಕ ಪ್ರದರ್ಶನ ನಡೆಸಲು ಸಭೆ ತೀರ್ಮಾ ನಿಸಿತು. ಕಾವೇರಿ ಐತೀರ್ಪು, ಕಾವೇರಿ ನದಿ ಪ್ರಾಧಿಕಾರ, ಕಾವೇರಿ ನಿರ್ವಹಣಾ ಮಂಡಳಿ, ಕೇಂದ್ರ ಜಲ ಆಯೋಗ ಹಾಗೂ ಸುಪ್ರೀಂ ಕೋರ್ಟ್ ತೀರ್ಪು ವ್ಯಾಪ್ತಿಯಲ್ಲಿ ಮೇಕೆದಾಟು ಮತ್ತು ಮಹದಾಯಿ ಯೋಜನೆ ಅನುಷ್ಠಾನಕ್ಕೆ ತರಲು ಕರ್ನಾಟಕ ಬದ್ಧವಾಗಿದೆ. ಮೇಕೆದಾಟು ವಿಚಾರದಲ್ಲಿ ತಮಿಳುನಾಡು ವಿನಾಕಾರಣ ತಗಾದೆ ತೆಗೆಯುತ್ತಿದೆ. ಒಂದು ಎಕರೆ ಕೃಷಿಗೂ ನೀರು ಬಳಸುವುದಿಲ್ಲ ಎಂದು ಪದೇ ಪದೆ ಹೇಳಿದರೂ ಆ ರಾಜ್ಯ ಕೇಳುತ್ತಿಲ್ಲ. ಅಲ್ಲಿನ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ಮುಖಂಡರವರೆಗೆ ಮಾತುಕತೆಗೆ ಅವಕಾಶ ನೀಡಿ ಎಂದು ಕೇಳಿದರೂ ಸಮಯ ಕೊಡುತ್ತಿಲ್ಲ, ದೆಹಲಿಗೂ ಬರುತ್ತಿಲ್ಲ. ರಾಜಕೀಯ ಕಾರಣಗಳಿಗಾಗಿ ತಮಿಳುನಾಡು ಪ್ರತಿರೋಧ ತೋರುತ್ತಿದೆ ಎಂದು ಶಿವಕುಮಾರ್ ವಿವರಿಸಿದರು. ರಾಜ್ಯದ ಹಿತಾಸಕ್ತಿ ರಕ್ಷಣೆಗೆ ಮೊದಲಿಂದಲೂ ಪಕ್ಷಭೇದ ಮರೆತು ಎಲ್ಲ ಸದಸ್ಯರೂ ಸಹಕರಿಸುತ್ತಾ ಬಂದಿದ್ದೀರಿ. ಈಗಲೂ ಅದೇ ಸಹಕಾರ ನಿರೀಕ್ಷಿಸುತ್ತಿದ್ದೇವೆ, ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪ ಮಾಡದೆ ಯೋಜನೆ ಅನುಷ್ಠಾನಕ್ಕೆ ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ಮನವಿ ಮಾಡಿದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಲೋಕಸಭೆಯಲ್ಲಿನ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವರಾದ ಸದಾನಂದಗೌಡ, ರಮೇಶ್ ಜಿಗಜಿಣಗಿ, ನಿರ್ಮಲಾ ಸೀತಾರಾಮನ್, ಅನಂತಕುಮಾರ ಹೆಗಡೆ, ಕರ್ನಾಟಕದ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

Translate »